T20 World Cup: ಕುಸಿದ ಕಿವೀಸ್‌ಗೆ ಗ್ಲೆನ್ ಫಿಲಿಫ್ಸ್ ಶತಕದ ಆಸರೆ..!
* ಲಂಕಾ ಎದುರು ಸವಾಲಿನ ಮೊತ್ತ ಕಲೆಹಾಕಿದ ನ್ಯೂಜಿಲೆಂಡ್
* ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಗ್ಲೆನ್ ಫಿಲಿಫ್ಸ್
* ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಎರಡನೇ ಶತಕ ಸಿಡಿಸಿದ ಫಿಲಿಫ್ಸ್
ಸಿಡ್ನಿ(ಅ.29): ಅಗ್ರಕ್ರಮಾಂಕದ ಬ್ಯಾಟರ್‌ಗಳ ದಯನೀಯ ಬ್ಯಾಟಿಂಗ್ ವೈಫಲ್ಯದ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಫಿಲಿಫ್ಸ್(104) ಬಾರಿಸಿದ ಸ್ಪೋಟಕ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡವು 7 ವಿಕೆಟ್ ಕಳೆದುಕೊಂಡು 167 ರನ್ ಬಾರಿಸಿದ್ದು, ಶ್ರೀಲಂಕಾ ತಂಡಕ್ಕೆ ಸವಾಲಿನ ಗುರಿ ನೀಡಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 27ನೇ ಪಂದ್ಯದಲ್ಲಿ ಗ್ಲೆನ್ ಫಿಲಿಫ್ಸ್, ಡೇರಲ್ ಮಿಚೆಲ್ ಹಾಗೂ ಮಿಚೆಲ್ ಸ್ಯಾಂಟ್ನರ್ ಹೊರತು ಪಡಿಸಿ ಕಿವೀಸ್‌ನ ಯಾವೊಬ್ಬ ಬ್ಯಾಟರ್ ಕೂಡಾ ಉಪಯುಕ್ತ ರನ್ ಕಾಣಿಕೆ ನೀಡಲಿಲ್ಲ. ಹೀಗಿದ್ದೂ ನ್ಯೂಜಿಲೆಂಡ್ ತಂಡವು ಸವಾಲಿನ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿದೆ.
ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಕಿವೀಸ್‌ಗೆ ಸ್ಪೋಟಕ ಆರಂಭ ಒದಗಿಸಿಕೊಟ್ಟಿದ್ದ ಫಿನ್ ಅಲೆನ್ ಹಾಗೂ ಡೆವೊನ್ ಕಾನ್‌ವೇ ಲಂಕಾ ಎದುರು ಅಬ್ಬರಿಸಲು ವಿಫಲರಾದರು. ಮೊದಲ ಓವರ್‌ನಲ್ಲೇ ಮಹೀಶ್ ತೀಕ್ಷಣ ಫಿನ್ ಅಲೆನ್(01) ಅವರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಡೆವೊನ್ ಕಾನ್‌ವೇ ಕೂಡಾ ಒಂದು ರನ್ ಬಾರಿಸಿ ಧನಂಜಯ ಡಿ ಸಿಲ್ವಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ನಾಯಕ ಕೇನ್ ವಿಲಿಯಮ್ಸನ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ವಿಲಿಯಮ್ಸನ್ ಕೇವಲ 8 ರನ್ ಬಾರಿಸಿ ವಿಕೆಟ್ ಕೈಚೆಲ್ಲಿದರು.
ಆಸರೆಯಾದ ಫಿಲಿಫ್ಸ್-ಮಿಚೆಲ್: ಒಂದು ಹಂತದಲ್ಲಿ 15 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ನ್ಯೂಜಿಲೆಂಡ್ ತಂಡಕ್ಕೆ 4ನೇ ವಿಕೆಟ್‌ಗೆ ಡೇರಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಫ್ಸ್ 86 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿದರು. ಮಾರ್ಕ್ ಚಾಪ್ಮನ್ ಬದಲಿಗೆ ತಂಡ ಕೂಡಿಕೊಂಡ ಡೇರಲ್ ಮಿಚೆಲ್ ಸಮಯೋಚಿತ ಜತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು. ಡೇರಲ್ ಮಿಚೆಲ್ 24 ಎಸೆತಗಳನ್ನು ಎದುರಿಸಿ 22 ರನ್ ಗಳಿಸಿ ವನಿಂದು ಹಸರಂಗ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
T20 World Cup: ಲಂಕಾ ಎದುರು ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ, ಉಭಯ ತಂಡದಲ್ಲೂ ಒಂದೊಂದು ಬದಲಾವಣೆ
ಗ್ಲೆನ್ ಫಿಲಿಫ್ಸ್ ಶತಕದ ಮೆರಗು: ಅಗ್ರಕ್ರಮಾಂಕದ ಬ್ಯಾಟರ್‌ಗಳು ರನ್ ಗಳಿಸಲು ಪರದಾಡುತ್ತಿದ್ದರೂ, ಮಧ್ಯಮ ಕ್ರಮಾಂಕದಲ್ಲಿ ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ಗ್ಲೆನ್ ಫಿಲಿಫ್ಸ್ ತಂಡಕ್ಕೆ ಅಸರೆಯಾದರು. ಡೇರಲ್ ಮಿಚೆಲ್ ಜತೆಗೆ ಅರ್ಧಶತಕದ ಜತೆಯಾಟ ನಿಭಾಯಿಸಿದ ಫಿಲಿಫ್ಸ್, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಶತಕ ಸಿಡಿಸಿ ಮೆರೆದಾಡಿದರು. ಗ್ಲೆನ್ ಫಿಲಿಫ್ಸ್ ಕೇವಲ 61 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಗ್ಲೆನ್ ಫಿಲಿಫ್ಸ್ 64 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 104 ರನ್ ಬಾರಿಸಿ ಕೊನೆಯ ಓವರ್‌ನಲ್ಲಿ ಲಹಿರು ಕುಮಾರಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.