ನವದೆಹಲಿ(ಸೆ.11): ಲೆಂಡ್ಲೆ ಸಿಮೊನ್ಸ್(84*) ಹಾಗೂ ಡ್ಯಾರನ್(58*) ಅಜೇಯ ಅರ್ಧಶತಕಗಳ ನೆರವಿನಿಂದ ಟ್ರಿನ್‌ಬಾಗೋ ನೈಟ್‌ ರೈಡರ್ಸ್ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತಂಡದ ಸಾಧನೆಗೆ ಮಾಲೀಕ ಹಾಗೂ ಬಾಲಿವುಡ್ ನಟ ಶಾರುಖ್ ಖಾನ್ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಹೌದು, ಟೂರ್ನಿಯುದ್ಧಕ್ಕೂ ಒಂದೇ ಒಂದು ಸೋಲು ಕಾಣದೇ ಸತತ 12 ಪಂದ್ಯಗಳನ್ನು ಗೆಲ್ಲುವ ಮೂಲಕ ಕಿರಾನ್ ಪೊಲ್ಲಾರ್ಡ್ ನೇತೃತ್ವದ ಟ್ರಿನ್‌ಬಾಗೋ ನೈಟ್‌ ರೈಡರ್ಸ್ ದಾಖಲೆಯ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. 

ಟ್ರಿನ್‌ಬಾಗೋ ನೈಟ್‌ ರೈಡರ್ಸ್ ತಂಡಕ್ಕೆ ಗೆಲ್ಲಲು 155 ರನ್‌ಗಳ ಗುರಿ ನೀಡಲಾಗಿತ್ತು. ತಂಡ 19 ರನ್ ಗಳಿಸುವಷ್ಟರಲ್ಲೇ ಆರಂಭಿಕ ಆಘಾತಕ್ಕೆ ಒಳಗಾಯಿತು. ನಂತರ ಸಿಮೊನ್ಸ್ ಹಾಗೂ ಬ್ರಾವೋ ಜೋಡಿ ಮೂರನೇ ವಿಕೆಟ್‌ಗೆ ಮುರಿಯದ 138 ರನ್‌ಗಳ ಜತೆಯಾಟವಾಡುವ ಮೂಲಕ ಇನ್ನೂ 1.5 ಓವರ್‌ಗಳು ಬಾಕಿ ಇರುವಂತೆಯೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು.

IPL 2020: ಈ ಸಲ ಈ ತಂಡ ಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಬ್ರೆಟ್ ಲೀ..!

ಇದಕ್ಕೂ ಮೊದಲು ಟಾಸ್ ಗೆದ್ದ ಪೊಲ್ಲಾರ್ಡ್ ಎದುರಾಳಿ ಸೇಂಟ್ ಲೂಸಿಯಾ ಜೋಕ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಒಂದು ಹಂತದಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 113 ರನ್‌ಗಳಿಸಿದ್ದ ಡ್ಯಾರನ್ ಸ್ಯಾಮಿ ಪಡೆ ಆ ಬಳಿಕ ನಾಟಕೀಯ ಕುಸಿತ ಕಂಡಿತು. ನಾಯಕ ಪೊಲ್ಲಾರ್ಡ್ 4 ವಿಕೆಟ್ ಕಬಳಿಸಿ ಮಿಂಚಿದರು.

TKR ಒಡೆಯ ಶಾರುಖ್ ಅಭಿನಂದನೆ: ಅದ್ಭುತ ಆಟವಾಡಿದ್ದೀರ. ನಿಮ್ಮ ಆಟ ನಮ್ಮನ್ನು ಮತ್ತಷ್ಟು ಹೆಮ್ಮೆ ಪಡುವಂತೆ ಮಾಡಿದೆ. ಪ್ರೇಕ್ಷಕರಿಲ್ಲದೇ ಆಡಿದರೂ ನಮ್ಮೆಲ್ಲರನ್ನು ಖುಷಿ ಪಡುವಂತೆ ಮಾಡಿದ್ದೀರ ಎಂದು ಶಾರುಖ್ ಟ್ರಿನ್‌ಬಾಗೋ ನೈಟ್‌ ರೈಡರ್ಸ್ ತಂಡದ ಆಟಗಾರರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.