ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ 69 ರನ್ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ತಿಲಕ್ ವರ್ಮಾ, ಈ ಗೆಲುವನ್ನು 'ಆಪರೇಷನ್ ತಿಲಕ್' ಎಂದು ಕರೆಯದಂತೆ ಮನವಿ ಮಾಡಿದ್ದಾರೆ.
ಹೈದರಾಬಾದ್: ಏಷ್ಯಾಕಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ ಚಾಂಪಿಯನ್ ಆದಾಗ, ಫೈನಲ್‌ನಲ್ಲಿ ಅಜೇಯ 69 ರನ್ ಗಳಿಸಿ ಭಾರತದ ಟಾಪ್ ಸ್ಕೋರರ್ ಆಗಿ ಗೆಲುವಿಗೆ ಕಾರಣರಾದವರು ಯುವ ಆಟಗಾರ ತಿಲಕ್ ವರ್ಮಾ. ಈ ಗೆಲುವಿನ ನಂತರ, 'ಆಪರೇಷನ್ ತಿಲಕ್' ಎಂಬ ಹೆಸರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಆದರೆ, ಏಷ್ಯಾಕಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ ಕಿರೀಟ ಗೆದ್ದಿದ್ದನ್ನು 'ಆಪರೇಷನ್ ತಿಲಕ್' ಎಂದು ಕರೆಯಬೇಡಿ ಎಂದು ತಿಲಕ್ ವರ್ಮಾ ಮನವಿ ಮಾಡಿದ್ದಾರೆ. ಕಿರೀಟ ಗೆದ್ದ ನಂತರ ಹೈದರಾಬಾದ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ನಡೆಸಿದ ಸೇನಾ ಕಾರ್ಯಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ 'ಆಪರೇಷನ್ ಸಿಂದೂರ್' ಎಂದು ಕರೆದಿದ್ದರು.
ಪ್ರಧಾನಮಂತ್ರಿಯವರು ಮೊದಲು 'ಆಪರೇಷನ್ ಸಿಂದೂರ್' ಎಂದು ಬಳಸಿದ್ದರು. ಆದರೆ ಭಾರತದ ಗೆಲುವನ್ನು 'ಆಪರೇಷನ್ ತಿಲಕ್' ಎಂದು ಕರೆಯುವುದು ದೊಡ್ಡ ವಿಷಯ. ಕ್ರೀಡೆಯಲ್ಲಿ ನಾವು ದೇಶವನ್ನು ಪ್ರತಿನಿಧಿಸುತ್ತೇವೆ. ನನಗೆ ಸರಿಯಾದ ಸಮಯದಲ್ಲಿ ಸರಿಯಾದ ಅವಕಾಶ ಸಿಕ್ಕಿತು ಅಷ್ಟೇ. ದೇಶಕ್ಕಾಗಿ ಏನಾದರೂ ಮಾಡಲು ಸಾಧ್ಯವಾದದ್ದಕ್ಕೆ ನನಗೆ ಸಂತೋಷವಿದೆ ಎಂದು ತಿಲಕ್ ವರ್ಮಾ ಹೇಳಿದ್ದಾರೆ.
ಪಾಕಿಸ್ತಾನದ ಪ್ರಚೋದನೆಗೆ ಬಲಿಯಾಗಲಿಲ್ಲ
ಪಂದ್ಯದ ವೇಳೆ ಪಾಕ್ ಆಟಗಾರರು ಹಲವು ಬಾರಿ ಮಾತಿನಿಂದ ಕೆಣಕಿದ್ದರು, ಆದರೆ ನನ್ನ ಗಮನವೆಲ್ಲಾ ಆಟದ ಮೇಲಿತ್ತು. ಹಾಗಾಗಿ ಅವರ ಪ್ರಚೋದನೆಗೆ ನಾನು ಉತ್ತರ ಕೊಡಲು ಹೋಗಲಿಲ್ಲ ಎಂದು ತಿಲಕ್ ವರ್ಮಾ ಹೇಳಿದ್ದಾರೆ. ಆರಂಭದಲ್ಲಿ ಮೂರು ವಿಕೆಟ್‌ಗಳು ಬಿದ್ದಾಗ ತೀವ್ರ ಒತ್ತಡವಿತ್ತು. ಆದರೆ ಆ ಸಮಯದಲ್ಲಿ ಕೆಟ್ಟ ಶಾಟ್ ಆಡಿ ನಾನು ಔಟಾದರೆ, ಅದು ದೇಶದ 140 ಕೋಟಿ ಜನರನ್ನು ನಿರಾಸೆಗೊಳಿಸಿದಂತೆ ಆಗುತ್ತಿತ್ತು. ಹಾಗಾಗಿ ಗೆಲುವಿನವರೆಗೂ ಕ್ರೀಸ್‌ನಲ್ಲಿ ಉಳಿಯಲು ಪ್ರಯತ್ನಿಸಿದೆ. ಆಟದ ವೇಳೆ ಹಲವು ಘಟನೆಗಳು ನಡೆದವು. ಪಾಕ್ ಆಟಗಾರರು ಏನೇನೋ ಹೇಳಿದರು. ಆದರೆ ಪಂದ್ಯ ಗೆದ್ದು ಅದಕ್ಕೆಲ್ಲ ಉತ್ತರ ಕೊಡಲು ಪ್ರಯತ್ನಿಸಿದೆ ಎಂದು ತಿಲಕ್ ಹೇಳಿದ್ದಾರೆ.
ತಿಲಕ್ ವರ್ಮಾ ಬ್ಯಾಟಿಂಗ್ ಮಾಡುವಾಗ ಪಾಕ್ ವಿಕೆಟ್ ಕೀಪರ್ ಮೊಹಮ್ಮದ್ ಹ್ಯಾರಿಸ್, ಇದು ಮುಂಬೈ ಅಲ್ಲ, ಐಪಿಎಲ್ ಅಲ್ಲ ಎಂದು ಸ್ಲೆಡ್ಜ್ ಮಾಡಿದರು. ಅವರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದೆ” ಎಂದಿದ್ದಾರೆ. 'ನನ್ನನ್ನು ಕೆಣಕಿದವರ್ಯಾರು ಈಗ ಮೈದಾನದಲ್ಲಿ ಕಾಣುತ್ತಿಲ್ಲ. ನಮ್ಮ ಅಭಿಮಾನಿಗಳು ವಂದೇ ಮಾತರಂ ಎನ್ನುವಾಗ ಭಾರತ್ ಮಾತಾ ಕೀ ಜೈ ಎಂದು ಪದೇ ಪದೇ ಹೇಳಬೇಕು ಎನಿಸುತ್ತಿತ್ತು' ಎಂದಿದ್ದಾರೆ.
ದೇಶಕ್ಕಾಗಿ ಪ್ರಾಣ ಕೊಡಲು ಸಿದ್ದ
ಒತ್ತಡದ ಸಮಯದಲ್ಲಿ ದೇಶಕ್ಕಾಗಿ ನಿಲ್ಲುವುದೇ ನನ್ನ ಗುರಿಯಾಗಿತ್ತು. ದೇಶಕ್ಕಾಗಿ ಪ್ರಾಣ ಕೊಡಲೂ ನಾನು ಸಿದ್ಧ. ಆ ವಿಷಯ ಮಾತ್ರ ನನ್ನ ಮನಸ್ಸಿನಲ್ಲಿತ್ತು. ಎಲ್ಲಾ ಒತ್ತಡಗಳನ್ನು ಮೀರಿ ಶಾಂತವಾಗಿರಲು ಪ್ರಯತ್ನಿಸಿದೆ. ಯಾಕೆಂದರೆ, ನಾನು 140 ಕೋಟಿ ಜನರನ್ನು ಪ್ರತಿನಿಧಿಸುತ್ತಿದ್ದೇನೆ. ಅವರನ್ನು ನಿರಾಸೆಗೊಳಿಸಲು ನನಗೆ ಸಾಧ್ಯವಿಲ್ಲ ಎಂದು ತಿಲಕ್ ಹೇಳಿದರು. ಫೈನಲ್‌ನಲ್ಲಿ 53 ಎಸೆತಗಳಲ್ಲಿ ಅಜೇಯ 69 ರನ್ ಗಳಿಸಿದ ತಿಲಕ್, ನಾಲ್ಕು ಸಿಕ್ಸರ್ ಮತ್ತು ಮೂರು ಬೌಂಡರಿ ಬಾರಿಸಿ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಮೊದಲು ಸಂಜು ಸ್ಯಾಮ್ಸನ್ ಜೊತೆ ಮತ್ತು ನಂತರ ಶಿವಂ ದುಬೆ ಜೊತೆ ತಿಲಕ್ ಅರ್ಧಶತಕದ ಜೊತೆಯಾಟವಾಡಿದ್ದರು.
17ನೇ ಆವೃತ್ತಿಯ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳ ಅಂತರದಿಂದ ಮಣಿಸಿ ಒಂಬತ್ತನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು.
