IPL 2022: ಐಪಿಎಲ್‌ಗೆ ಕಾಲಿಡಲು ಕಾಯ್ತಿದ್ದಾರೆ ಈ 5 ಸ್ಟಾರ್ ಕ್ರಿಕೆಟಿಗರು!
ಈ ವರ್ಷವೂ ಕೆಲ ಪ್ರತಿಭಾವಂತ ಆಟಗಾರರು ಐಪಿಎಲ್‌ಗೆ ಪಾದಾರ್ಪಣೆ ಮಾಡಲು ಕಾಯುತ್ತಿದ್ದಾರೆ. ಅಂತಹ ಅಗ್ರ 5 ಆಟಗಾರರ ವಿವರ ಇಲ್ಲಿದೆ.
ಐಪಿಎಲ್ ಎಷ್ಟೋ ಯುವ ಪ್ರತಿಭೆಗಳನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದೆ. ಐಪಿಎಲ್‌ಗೆ ಬರುವ ಮೊದಲೇ ತಕ್ಕಮಟ್ಟಿಗೆ ಹೆಸರು ಗಳಿಸಿ, ಟೂರ್ನಿಯಲ್ಲಿ ಮಿಂಚಿ ತಮ್ಮ ವೃತ್ತಿಬದುಕಿಗೆ ಹೊಸ ತಿರುವನ್ನು ಪಡೆದ ಆಟಗಾರರ ಪಟ್ಟಿಯೂ ದೊಡ್ಡದಿದೆ. ಈ ವರ್ಷವೂ ಕೆಲ ಪ್ರತಿಭಾವಂತ ಆಟಗಾರರು ಐಪಿಎಲ್‌ಗೆ ಪಾದಾರ್ಪಣೆ ಮಾಡಲು ಕಾಯುತ್ತಿದ್ದಾರೆ. ಅಂತಹ ಅಗ್ರ 5 ಆಟಗಾರರ ವಿವರ ಇಲ್ಲಿದೆ.
ಡೆವಾಲ್ಡ್ ಬ್ರೆವಿಸ್: ‘ಬೇಬಿ ಎಬಿಡಿ’ ಎಂದೇ ಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್ ಅಂಡರ್-19 ವಿಶ್ವಕಪ್‌ನಲ್ಲಿ 506 ರನ್ ಸಿಡಿಸಿ ಎಲ್ಲರ ಗಮನ ಸೆಳೆದಿದ್ದರು. ಎಬಿ ಡಿ ವಿಲಿಯರ್ಸ್ ರೀತಿಯೇ ಬ್ಯಾಟ್ ಮಾಡುವ ಬ್ರೆವಿಸ್ ಲೆಗ್ ಬ್ರೇಕ್ ಬೌಲರ್ ಕೂಡ ಹೌದು. 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಬ್ರೆವಿಸ್ ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಹೊಂದಿರುವ ಆಟಗಾರ.
ಇದನ್ನೂ ಓದಿ: IPL 2022: ಟಿ20 ಹಬ್ಬಕ್ಕೆ ಕ್ಷಣಗಣನೆ ಶುರು: ಈ ಸಲ 2 DRS, ಹೊಸ ನಿಯಮಗಳು ಜಾರಿ
ರಾಜವರ್ಧನ್ ಹಂಗ್ರೇಕರ್: ಮಹಾರಾಷ್ಟ್ರದ ಆಲ್ರೌಂಡರ್ ರಾಜವರ್ಧನ್ ಹಂಗ್ರೇಕರ್ ಈ ವರ್ಷ ಅಂಡರ್-19 ವಿಶ್ವಕಪ್‌ನಲ್ಲಿ ಚಾಂಪಿಯನ್ ಆದ ಭಾರತ ತಂಡದ ಆಟಗಾರ. ಸಿಕ್ಸರ್ ಬಾರಿಸುವ ಸಾಮರ್ಥ್ಯ ಹಾಗೂ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಹೆಸರುವಾಸಿ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರುವ ಹಂಗ್ರೇಕರ್‌ರನ್ನು ಗಾಯಾಳು ದೀಪಕ್ ಚಹರ್ ಜಾಗದಲ್ಲಿ ಆಡಿಸುವ ಸಾಧ್ಯತೆ ಇದೆ.
ಯಶ್ ಧುಳ್: ಅಂಡರ್-19 ವಿಶ್ವಕಪ್ ವಿಜೇತ ನಾಯಕ ಡೆಲ್ಲಿಯ ಯಶ್ ಧುಳ್, ಆಕರ್ಷಕ ಹೊಡೆತಗಳಿಗೆ ಹೆಸರುವಾಸಿಯಾಗಿರುವ ಬ್ಯಾಟರ್. ಆಫ್ ಬ್ರೇಕ್ ಬೌಲಿಂಗ್ ಸಹ ಮಾಡಬಲ್ಲರು. ವಿಶ್ವಕಪ್‌ನಿಂದ ವಾಪಸಾದ ಬೆನ್ನಲ್ಲೇ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ ಧುಳ್, ಚೊಚ್ಚಲ ಪಂದ್ಯದಲ್ಲೇ 2 ಶತಕ ಬಾರಿಸಿ ದಾಖಲೆ ಬರೆದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಯಶ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಅಭಿನವ್ ಮನೋಹರ್: ಕರ್ನಾಟಕದ 27 ವರ್ಷದ ಅಭಿನವ್ ಮನೋಹರ್, ಕಳೆದ ವರ್ಷ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅಬ್ಬರಿಸಿ ಗಮನ ಸೆಳೆದರು. ಅವರನ್ನು ಗುಜರಾತ್ ಟೈಟಾನ್ಸ್ 2.6 ಕೋಟಿ ರು.ಗೆ ಖರೀದಿ ಮಾಡಿದೆ. ಅಭಿನವ್, ಗುಜರಾತ್ ತಂಡದ ಫಿನಿಶರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಲೆಗ್ ಸ್ಪಿನ್ ಬೌಲ್ ಮಾಡುವ ಅವರು, ಅತ್ಯುತ್ತಮ ಫೀಲ್ಡರ್ ಕೂಡ. ಕರ್ನಾಟಕದ ಆಟಗಾರನ ಮೇಲೆ ಭಾರೀ ನಿರೀಕ್ಷೆ ಇದೆ.
ಇದನ್ನೂ ಓದಿ: IPL 2022 Tickets: ಮೈದಾನದಲ್ಲಿ ಪಂದ್ಯ ವೀಕ್ಷಿಸಲು ಟಿಕೆಟ್ ಖರೀದಿ ಮಾಡುವುದು ಎಲ್ಲಿ..? ಬೆಲೆ ಎಷ್ಟು..?
ರೋವ್ಮನ್ ಪೋವೆಲ್: ಈ ವರ್ಷ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ಶತಕ ಸಿಡಿಸಿದ್ದ ವೆಸ್ಟ್‌ಇಂಡೀಸ್‌ನ ರೋವ್ಮನ್ ಪೋವೆಲ್, ‘ಜೂನಿಯರ್ ರಸೆಲ್’ ಎಂದೇ ಹೆಸರುವಾಸಿಯಾಗಿರುವ ಆಟಗಾರ. ಪೋವೆಲ್‌ರನ್ನು ಡೆಲ್ಲಿ ತಂಡ 2.8 ಕೋಟಿ ರು.ಗೆ ಖರೀದಿಸಿತ್ತು. ಭಾರತ ವಿರುದ್ಧ ಇತ್ತೀಚೆಗೆ ನಡೆದ ಸರಣಿಯಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದ ಪೋವೆಲ್, ಐಪಿಎಲ್‌ನಲ್ಲೂ ಅಬ್ಬರಿಸಲು ಕಾಯುತ್ತಿದ್ದಾರೆ.
ಮೊದಲ 5 ಪಂದ್ಯಗಳಿಗೆ ಕಮಿನ್ಸ್, ಫಿಂಚ್ ಗೈರು: ಆಸ್ಪ್ರೇಲಿಯಾದ ತಾರಾ ಕ್ರಿಕೆಟಿಗರಾದ ಪ್ಯಾಟ್ ಕಮಿನ್ಸ್ ಹಾಗೂ ಆ್ಯರೋನ್ ಫಿಂಚ್ ಐಪಿಎಲ್ 15ನೇ ಆವೃತ್ತಿಯ ಮೊದಲ 5 ಪಂದ್ಯಗಳಿಗೆ ಗೈರಾಗಲಿದ್ದಾರೆ ಎಂದು ಕೋಲ್ಕತಾ ನೈಟ್ರೈಡರ್ಸ್ ತಂಡದ ಮೆಂಟರ್ ಡೇವಿಡ್ ಹಸ್ಸಿ ಖಚಿತಪಡಿಸಿದ್ದಾರೆ. ಕೆಕೆಆರ್, ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲೇ ಕಣಕ್ಕಿಳಿಯಲಿದ್ದು ಚೆನ್ನೈ ತಂಡವನ್ನು ಎದುರಿಸಲಿದೆ. ಪಾಕಿಸ್ತಾನ ಪ್ರವಾಸದಲ್ಲಿರುವ ಕಮಿನ್ಸ್ ಹಾಗೂ ಫಿಂಚ್ ಏ.10ರ ಬಳಿಕ ಆಯ್ಕೆಗೆ ಲಭ್ಯರಾಗುವ ನಿರೀಕ್ಷೆ ಇದೆ.