Asianet Suvarna News Asianet Suvarna News

ಮೋಸ, ಸೋಲು, ಅವಮಾನಗಳ ಹಾದಿಯಲ್ಲಿ ಎದ್ದು ಬಂದ ಸಾಹಸಿ ದಿನೇಶ್ ಕಾರ್ತಿಕ್!

ದಿನೇಶ್ ಕಾರ್ತಿಕ್ ಕ್ರಿಕೆಟ್ ಜೀವನ ಎಂದಾಗಿ ಅದೆಲ್ಲಿಂದಲೂ ನಮಗೆ ಮುರಳಿ ವಿಜಯ್ ಅವರ ಕಥೆಗಳೂ ಸೇರಿಕೊಂಡು ಬಿಡುತ್ತವೆ. ಆತ್ಮೀಯ ಸ್ನೇಹಿತನ ಜೀವನದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದ ಮುರಳಿ ವಿಜಯ್ ಬಹುತೇಕವಾಗಿ ಕ್ರಿಕೆಟ್ ಲೋಕದಿಂದ ಹೊರಬಿದ್ದಿದ್ದರೆ, 36 ವರ್ಷದ ದಿನೇಶ್ ಕಾರ್ತಿಕ್ ಈಗಲೂ ತಮ್ಮ ಕ್ರಿಕೆಟ್ ಕೌಶಲದಿಂದ ಗಮನಸೆಳೆಯುತ್ತಿದ್ದಾರೆ. ಹಾಗಿದ್ದರೆ, ದಿನೇಶ್ ಕಾರ್ತಿಕ್ ಜೀವನ ಸುಲಭವಾಗಿತ್ತಾ? ಇಲ್ಲ, ಒಬ್ಬ ಸಾಮಾನ್ಯ ಕ್ರಿಕೆಟಿಗನೊಬ್ಬ ಪಡಬಾರದ ಕಷ್ಟಗಳೆಲ್ಲವನ್ನೂ ದಿನೇಶ್ ಕಾರ್ತಿಕ್ ತಮ್ಮ ಜೀವನದಲ್ಲಿ ಕಂಡವರು.

The inspiring story of finisher Dinesh Karthik is amazing san
Author
Bengaluru, First Published Apr 20, 2022, 11:11 PM IST

ಬೆಂಗಳೂರು (ಏ. 20): ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ ಆಗಿ ಎಂಎಸ್ ಧೋನಿ (MS Dhoni) ಮಿಂಚುತ್ತಿದ್ದ ದಿನಗಳು. ಸಾಮಾನ್ಯವಾಗಿ ರಾಷ್ಟ್ರೀಯ ತಂಡದಲ್ಲಿ ವಿಕೆಟ್ ಕೀಪರ್, ವೇಗದ ಬೌಲರ್ ಅಂಥ ಸ್ಥಾನಗಳಿಗೆ ಕೆಲವೊಂದಿಷ್ಟು ಆಯ್ಕೆಗಳನ್ನು ಆಯ್ಕೆ ಸಮಿತಿ ಸಿದ್ಧಮಾಡಿಟ್ಟುಕೊಂಡಿರುತ್ತದೆ. ಅಂತೆಯೇ ರಾಷ್ಟ್ರೀಯ ತಂಡದಲ್ಲಿ ಧೋನಿ ಮಿಂಚುತ್ತಿದ್ದರೆ, ತಂಡದ 2ನೇ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ (Dinesh Karthik) ಗುರುತಿಸಿಕೊಂಡಿದ್ದರು. ಇದೇ ಹಂತದಲ್ಲಿ ಅವರು ತಮಿಳುನಾಡು (Tamil Nadu) ರಣಜಿ ತಂಡದ ನಾಯಕರೂ ಆಗಿದ್ದರು.

ಒಂದೆಡೆ ಅವರ ಕ್ರಿಕೆಟ್ ಜೀವನ ಪ್ರಗತಿಯ ಪಥದಲ್ಲಿ ಮುಖ ಮಾಡಿದ್ದರೆ, ವೈಯಕ್ತಿಕ ಜೀವನದಲ್ಲಿ ಆಗುತ್ತಿದ್ದ ಬೆಳವಣಿಗೆಗಳು ಅವರಿಗೆ ತಿಳಿಯುತ್ತಲೇ ಇರಲಿಲ್ಲ. ಆತ್ಮೀಯ ಸ್ನೇಹಿತ, ರಾಷ್ಟ್ರೀಯ ತಂಡ ಹಾಗೂ ರಣಜಿ ತಂಡದ ಸಹಪಾಠಿಯಾಗಿದ್ದ ಮುರಳಿ ವಿಜಯ್ (Murali Vijay) ತನ್ನ ಪತ್ನಿಯೊಂದಿಗೆ ಅಫೇರ್ ಇರಿಸಿಕೊಂಡಿದ್ದು ದಿನೇಶ್ ಕಾರ್ತಿಕ್ ಗೆ ತಿಳಿಯಲೇ ಇಲ್ಲ. ಅಚ್ಚರಿಯ ವಿಚಾರವೆಂದರೆ, ಇಡೀ ರಣಜಿ ತಂಡಕ್ಕೆ ಈ ವಿಚಾರ ತಿಳಿದಿದ್ದರೂ ದಿನೇಶ್ ಕಾರ್ತಿಕ್ ಗೆ ಮಾತ್ರ ಒಂದು ಸಣ್ಣ ಸುಳಿವು ಕೂಡ ಇರಲಿಲ್ಲ. ಆದರೆ, ಒಂದು ದಿನ ದಿನೇಶ್ ಕಾರ್ತಿಕ್ ಬಳಿಗೆ ಬಂದ ಪತ್ನಿ ನಿಕಿತಾ (Nikita) ತಾವು ಗರ್ಭಿಣಿ ಎಂದು ಹೇಳಿದ್ದಲ್ಲದೆ, ಇದಕ್ಕೆ ಮುರಳಿ ವಿಜಯ್ ತಂದೆ ಎಂದಿದ್ದರು. ಆ ಕಾರಣಕ್ಕಾಗಿ ನನಗೆ ವಿಚ್ಛೇದನ ಬೇಕು ಎಂದಿದ್ದರು. ವೈಯಕ್ತಿಕ ಜೀವನದಲ್ಲಿ ಒಂದೇ ಕ್ಷಣಕ್ಕೆ ಅಪ್ಪಳಿಸಿದ ಸುಂಟರಗಾಳಿಯಿಂದ ದಿಗ್ಭ್ರಾಂತರಾಗಿದ್ದರು ದಿನೇಶ್ ಕಾರ್ತಿಕ್. ವಿಚ್ಛೇದನ ಪಡೆದುಕೊಂಡು ಮುರಳಿ ವಿಜಯ್ ರನ್ನು ನಿಕಿತಾ ವಿವಾಹವಾದರು. ಅತ್ತ, ಮುರಳಿ ವಿಜಯ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರನಾಗಿ ಮಿಂಚಿದರೆ, ಟೀಮ್ ಇಂಡಿಯಾದಲ್ಲೂ ಅದೇ ಫಾರ್ಮ್ ಮುಂದುವರಿಸಿದ್ದರು.

ಇತ್ತ ದಿನೇಶ್ ಕಾರ್ತಿಕ್ ತಮ್ಮ ವೈಯಕ್ತಿಕ ಜೀವನದಲ್ಲಾದ ಆಘಾತದಿಂದ ಖಿನ್ನತೆಗೆ ತೆರಳಿದ್ದರು, ಗಡ್ಡ ಬಿಟ್ಟುಕೊಂಡು ಅಕ್ಷರಶಃ ದೇವದಾಸ್ ರೀತಿ ತಿರುಗಾಡಿದ್ದರು. ಆ ದಿನಗಳಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಗುರುತಿಸಲು ಸಾಧ್ಯವಿರಲಿಲ್ಲ. ಇದರ ಪರಿಣಾಮ ಕ್ರಿಕೆಟ್ ಮೇಲಾಯಿತು. ಫಾರ್ಮ ಕಳೆದುಕೊಂಡು ರಾಷ್ಟ್ರೀಯ ತಂಡದೊಂದ ಹೊರಬಿದ್ದರು, ರಣಜಿ ಟ್ರೋಫಿಯಲ್ಲೂ ನೀರಸ ಆಟವಾಡಿದ ದಿನೇಶ್ ಕಾರ್ತಿಕ್ ನಾಯಕ ಸ್ಥಾನವನ್ನು ಮುರಳಿ ವಿಜಯ್ ಗೆ ಬಿಟ್ಟುಕೊಟ್ಟದ್ದರು. ಐಪಿಎಲ್ ನಲ್ಲೂ ಸಾಲು ಸಾಲು ಕೆಟ್ಟ ಪ್ರದರ್ಶನ, ರಣಜಿ ತಂಡದ ಸಹ ಆಟಗಾರರ ಕುಹಕದ ಮಾತುಗಳಿಂದ ಬೇಸತ್ತಿದ್ದ ದಿನೇಶ್ ಕಾರ್ತಿಕ್ ಆತ್ಮಹತ್ಯೆಗೂ ಪ್ರಯತ್ನ ಪಟ್ಟಿದ್ದರು. ಫಿಟ್ ನೆಸ್ ಕಾಪಾಡಿಕೊಳ್ಳುವ ಸಲುವಾಗಿ ಜಿಮ್ ಮಾಡುತ್ತಿದ್ದ ದಿನೇಶ್ ಕಾರ್ತಿಕ್ ಅವೆಲ್ಲವನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟಿದ್ದರು.

ಜಿಮ್ ನಲ್ಲಿ ಸಿಕ್ಕ ದೀಪಿಕಾ ಪಲ್ಲಿಕಲ್ : ಜಿಮ್ ಟ್ರೇನರ್ ದಿನೇಶ್ ಕಾರ್ತಿಕ್ ರನ್ನು ಅವರ ಮನೆಯಲ್ಲಿ ಭೇಟಿಯಾದಾಗ ಎಲ್ಲವನ್ನೂ ಕಂಡು ಅಚ್ಚರಿ ಪಟ್ಟಿದ್ದರು. ಈ ಎಲ್ಲಾ ನೋವುಗಳಿಂದ ಹೊರಬರಲು ಜಿಮ್ ಒಂದೇ ದಾರಿ ಎಂದು ಪದೇ ಪದೇ ಹೇಳಿದಾಗ, ಮತ್ತೆ ಜಿಮ್ ನಲ್ಲಿ ಅಭ್ಯಾಸ ಆರಂಭಿಸಿದ್ದರು. ಇಲ್ಲಿ ಸಿಕ್ಕವರು ಭಾರತದ ಅಗ್ರ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್ (Deepika Pallikal). ಕ್ರಿಕೆಟಿಗನಾಗಿದ್ದ ಕಾರಣಕ್ಕೆ ದಿನೇಶ್ ಕಾರ್ತಿಕ್ ರನ್ನು ಮೊದಲಿನಿಂದಲೂ ತಿಳಿದಿದ್ದ ದೀಪಿಕಾ ಪಲ್ಲಿಕಲ್, ದಿನೇಶ್ ಕಾರ್ತಿಕ್ ಇದ್ದ ರೀತಿ ಹಾಗೂ ಅವರ ಕಥೆಗಳನ್ನು ಕೇಳಿ ಸಮಾಧಾನ ಮಾಡಿದ್ದರು. ಇಬ್ಬರೂ ಜೊತೆಯಲ್ಲೇ ಜಿಮ್ ನಲ್ಲಿ ಅಭ್ಯಾಸ, ಕ್ರೀಡಾ ದಿನದ ಸಂಗತಿಗಳನ್ನು ಹಂಚಿಕೊಳ್ಳಲು ಶುರು ಮಾಡಿದರು. ಸ್ಕ್ವಾಷ್ ನಲ್ಲಿ ದೀಪಿಕಾ, ಕ್ರಿಕೆಟ್ ನಲ್ಲಿ ದಿನೇಶ್ ಕಾರ್ತಿಕ್ ಹಂತಹಂತವಾಗಿ ಮತ್ತೆ ಮೇಲೇರುತ್ತಿದ್ದರು.

ಇನ್ನೊಂದೆಡೆ ಮುರಳಿ ವಿಜಯ್ ಅವರ ಫಾರ್ಮ್ ಕುಸಿಯಲಾರಂಭಿಸಿತು. ಮೊದಲು ಭಾರತ ತಂಡದಿಂದ ಹೊರಬಿದ್ದ ಮುರಳಿ ವಿಜಯ್ ನಂತರ ಚೆನ್ನೈ ತಂಡದಿಂದಲೂ ಹೊರಬಿದ್ದರು. ಇನ್ನೊಂದೆಡೆ ದೀಪಿಕಾ ಪಲ್ಲಿಕಲ್ ಅವರ ಸ್ಫೂರ್ತಿಯ ಮಾತುಗಳಿಂದ ಹೊಸ ಉತ್ಸಾಹ ಪಡೆದುಕೊಂಡಿದ್ದ ದಿನೇಶ್ ಕಾರ್ತಿಕ ದೇಶೀಯ ಕ್ರಿಕೆಟ್ ನಲ್ಲಿ ಅಬ್ಬರಿಸಲು ಆರಂಭಿಸಿದ್ದರು. ರಣಜಿ ಮಾತ್ರವಲ್ಲ, ಟೀಮ್ ಇಂಡಿಯಾ ಸೀಮಿತ ಓವರ್ ಗಳ ತಂಡಕ್ಕೂ ಆಯ್ಕೆಯಾದರು. ಐಪಿಎಲ್ ನಲ್ಲಿ ಕೆಕೆಆರ್ ತಂಡದ ನಾಯಕನಾಗುವ ಮಟ್ಟಕ್ಕೆ ಬೆಳೆದರು. ಇದೆಲ್ಲದರ ನಡುವೆ ಸೂತ್ರವೇ ಇರದ ಗಾಳಿಪಟದಂತಿದ್ದ ಬದುಕಿಗೆ ಆಧಾರವಾಗಿ ನಿಂತಿದ್ದ ಗೆಳತಿ ದೀಪಿಕಾ ಪಲ್ಲಿಕ್ಕಲ್ ಅವರನ್ನು ವಿವಾಹವಾದರು.

ICC T20 World Cup: ಮ್ಯಾಚ್‌ ಫಿನಿಶರ್‌ ಪಾತ್ರಕ್ಕೆ ಯಾರು ಹಿತವರು ಈ ನಾಲ್ವರಲ್ಲಿ..?

ಆದರೆ, ದುರಂತ ಅಲ್ಲಿಗೆ ನಿಲ್ಲಲಿಲ್ಲ. ಧೋನಿ ಸ್ಥಾನಕ್ಕೆ ಫಿಟ್ ಆಗುವ ಕೀಪರ್ ಆಗಿದ್ದ ದಿನೇಶ್ ಕಾರ್ತಿಕ್ ಬದಲಿಗೆ ದೆಹಲಿಯ ಯುವಕ ರಿಷಭ್ ಪಂತ್ ಬಂದುಬಿಟ್ಟರು. 34 ವರ್ಷದ ದಿನೇಶ್ ಕಾರ್ತಿಕ್ ಮತ್ತೆ ಭ್ರಮನಿರಸನಕ್ಕೆ ಒಳಗಾಗಿದ್ದರು. ಆಯ್ಕೆ ಸಮಿತಿಗೆ ದಿನೇಶ್ ಕಾರ್ತಿಕ್ ಅವರನ್ನು ತಿರಸ್ಕರಿಸಲು ಇನ್ನೊಂದು ಕಾರಣ ಅವರ ವಯಸ್ಸು. ಕೆಕೆಆರ್ ತಂಡದ ನಾಯಕ ಸ್ಥಾನದಿಂದ ದಿನೇಶ್ ಕಾರ್ತಿಕ್ ಕೆಳಗಿಳಿದರು. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿ ಬರೀ ಐಪಿಎಲ್ ಆಡುವ ಮನಸ್ಸನ್ನೂ ಮಾಡಿದ್ದರು. ಇದರ ನಡುವೆ ಗರ್ಭಿಣಿಯಾಗಿದ್ದ ದೀಪಿಕಾ ಪಲ್ಲಿಕ್ಕಲ್ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಆಕೆ ಕೂಡ ಆಡುವುದನ್ನು ನಿಲ್ಲಿಸಿದ್ದರು. ಪೋಯೆಸ್ ಗಾರ್ಡನ್ ನಲ್ಲಿ ಐಷಾರಾಮಿ ಮನೆ ಕೊಳ್ಳುವ ದಿನೇಶ್ ಕಾರ್ತಿಕ್ ಕನಸು ಹಾಗೆಯೇ ಉಳಿದುಕೊಂಡಿತ್ತು. ಅದಕ್ಕೆ ಕಾರಣ ಅದರ ಬೆಲೆ. ಆದರೆ, ದಿನೇಶ್ ಕಾರ್ತಿಕ್ ಅವರ ಪತ್ನಿ ದೀಪಿಕಾ ಸಾಹಸಿ. ಅದೇನೇ ಆಗಲಿ ಮನೆ ಕೊಂಡುಕೊಳ್ಳೋಣ ಎಂದು ತೀರ್ಮಾನಿಸಿದರು. ಇಬ್ಬರೂ ಮತ್ತೆ ಕ್ರೀಡಾ ಜಗತ್ತಿಗೆ ಮರಳಿದರು. ದಿನೇಶ್ ಕಾರ್ತಿಕ್ ಜೊತೆ ತರಬೇತಿ ಆರಂಭಿಸಿದ ದೀಪಿಕಾ ಪಲ್ಲಿಕಲ್, ಕೆಲ ತಿಂಗಳಲ್ಲೇ ಗಂಡನ ಜೊತೆಗೂಡಿ ಮನೆಯನ್ನು ಖರೀದಿ ಮಾಡಿದರು.

IPL 2022: ದಿನೇಶ್​ ಕಾರ್ತಿಕ್ ಡಿಫರೆಂಟ್​​ ಹೆಲ್ಮೆಟ್​​ ಹಾಕಿ ಆಡೋದ್ಯಾಕೆ..?

ಈ ಎಲ್ಲದರ ನಡುವೆ ದಿನೇಶ್ ಕಾರ್ತಿಕ್ ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯಸ್ಥ ಕಾಸಿ ಅವರಿಂದ ಒಂದು ಕರೆ ಬಂದಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ನಿವೃತ್ತಿಯಾಗಲು ಬಯಸಿದ್ದ ಎಂಎಸ್ ಧೋನಿ, ತಮ್ಮ ಸ್ಥಾನಕ್ಕೆ ದಿನೇಶ್ ಕಾರ್ತಿಕ್ ಸೂಕ್ತ ಎಂದು ಬಯಸಿದ್ದಾರೆ ಎಂದು ಅವರು ತಿಳಿಸಿದ್ದರು. 2022ರ ಐಪಿಎಲ್ ಹರಾಜಿನಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಖರೀದಿ ಮಾಡಲು ಚೆನ್ನೈ ದೊಡ್ಡ ಮಟ್ಟದಲ್ಲಿ ಪ್ರಯತ್ನ ನಡೆಸಿತು. ಆದರೆ, ಆರ್ ಸಿಬಿ ಪಟ್ಟು ಬಿಡದೆ ದಿನೇಶ್ ಕಾರ್ತಿಕ್ ರನ್ನು ಖರೀದಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ ಡೆವೋನ್  ಕಾನ್ವೆಯನ್ನು ಖರೀದಿ ಮಾಡಿತು. ಇನ್ನೊಂದೆಡೆ ದೀಪಿಕಾ ಪಲ್ಲಿಕ್ಕಲ್ ಮಗುವಿನ ಜನ್ಮ ನೀಡಿದ 6 ತಿಂಗಳ ಒಳಗೆ ಗ್ಲಾಸ್ಗೋದಲ್ಲಿ ನಡೆದ ವಿಶ್ವ ಚಾಂಪಿಯನ್ ಷಿಪ್ ನ ಮಿಶ್ರ ಡಬಲ್ಸ್ ಹಾಗೂ ಮಹಿಳಾ ಡಬಲ್ಸ್ ನಲ್ಲಿ ಪದಕ ಜಯಿಸಿದರು.  ಅವಳಿ ಮಕ್ಕಳದ ತಂದೆಯಾಗಿ ಮಕ್ಕಳದ ಪಾಲನೆಯಲ್ಲಿ ತೊಡಗಿರುವ ದೀನೇಶ್ ಕಾರ್ತಿಕ್ ಮೈದಾನದಲ್ಲಿ ಆರ್ ಸಿಬಿ ಪರವಾಗಿ ಅಬ್ಬರದ ಬ್ಯಾಟಿಂಗ್ ಮೂಲಕ ಮಿಂಚಿದ್ದಾರೆ. ಎಂಎಸ್ ಧೋನಿ ಮೂಲಕ ತೆರವಾಗಿರುವ ರಾಷ್ಟ್ರೀಯ ಟಿ20 ತಂಡದ ವಿಕೆಟ್ ಕೀಪರ್ ಸ್ಥಾನಕ್ಕೆ ಆಯ್ಕೆಯಾಗುವ ಹಂಬಲದಲ್ಲಿರುವ ದಿನೇಶ ಕಾರ್ತಿಕ್, ಫಿನಿಶರ್ ಆಗಿ ತಮ್ಮ ಸಾಮರ್ಥ್ಯವನ್ನೂ ತೋರಿಸಿದ್ದಾರೆ.

Follow Us:
Download App:
  • android
  • ios