* ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿದೆ ಟೀಂ ಇಂಡಿಯಾ* ಮ್ಯಾಚ್ ಫಿನಿಶರ್ ಪಾತ್ರದ ಮೇಲೆ ಕಣ್ಣಿಟ್ಟಿದ್ದಾರೆ ಈ ನಾಲ್ವರು ವಿಕೆಟ್ ಕೀಪರ್* ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡ್ತಾರಾ ದಿನೇಶ್ ಕಾರ್ತಿಕ್?
ಬೆಂಗಳೂರು(ಏ.19): ಐಸಿಸಿ ಟಿ20 ವಿಶ್ವಕಪ್ ಟೂರ್ನಿ (ICC T20 World Cup Tournament) ದೃಷ್ಟಿಯಿಂದ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಬರೋಬ್ಬರಿ 30 ಆಟಗಾರರನ್ನ ಸಿದ್ದಪಡಿಸಿದ್ದಾರೆ. ಬಹುತೇಕ 15 ಆಟಗಾರರ ತಂಡ ರೆಡಿ ಇದೆ ಅಂತ ನಾವು ಸಹ ಹೇಳಿದ್ವಿ. ಆದ್ರೆ ಐಪಿಎಲ್ ಪರ್ಫಾಮೆನ್ಸ್ ನೋಡಿಕೊಂಡು ಕೆಲ ಆಟಗಾರರು ಇನ್ನೂ, ಔಟೂ ಆಗಬಹುದು ಅನ್ನೋದನ್ನೂ ಹೇಳಿದ್ವಿ. ಈಗ ಒಂದು ಸ್ಥಾನಕ್ಕೆ ನಾಲ್ವರ ನಡುವೆ ಫೈಟ್ ಏರ್ಪಟ್ಟಿದೆ. ಆರ್ಸಿಬಿ ಪ್ಲೇಯರ್, ಟೀಂ ಇಂಡಿಯಾ (Team India) ಉಪನಾಯಕನಿಗೆ ಟಕ್ಕರ್ ಕೊಡಲು ರೆಡಿಯಾಗಿದ್ದಾನೆ.
ಪಂತ್ಗೆ ಭಯ ಹುಟ್ಟಿಸ್ತಿದ್ದಾರೆ ತ್ರಿಮೂರ್ತಿಗಳು:
ಮಹೇಂದ್ರ ಸಿಂಗ್ ಧೋನಿ (MS Dhoni) ರಿಟೈರ್ಡ್ ಆದ್ಮೇಲೆ ರಿಷಭ್ ಪಂತ್, ಟೀಂ ಇಂಡಿಯಾದ ಖಾಯಂ ವಿಕೆಟ್ ಕೀಪರ್. ಆದ್ರೆ ಅವರು ಅಸ್ಥಿರ ಪ್ರದರ್ಶನ ನೀಡುತ್ತಿರುವುದರಿಂದ ಆಗಾಗ ಟೀಕೆಗೂ ಒಳಗಾಗಿದ್ದಾರೆ. ಟೆಸ್ಟ್ನಲ್ಲಿ ವಿಕೆಟ್ ಹಿಂದೆ-ಮುಂದೆ ವೈಲೆಂಟ್ ಆಗೋ ಪಂತ್, ಒನ್ಡೇ-ಟಿ20ಯಲ್ಲಿ ಮಾತ್ರ ಸೈಲೆಂಟ್ ಆಗಿ ಬಿಡ್ತಾರೆ. ಹಾಗಾಗಿ ಅವರ ಸ್ಥಾನ ಇನ್ನೂ ಭದ್ರವಾಗಿಲ್ಲ. ಈ ನಡುವೆ ಐಪಿಎಲ್ನಲ್ಲಿ ದಿನೇಶ್ ಕಾರ್ತಿಕ್ (Dinesh Karthik), ಇಶಾನ್ ಕಿಶನ್ (Ishan Kishan) ಮತ್ತು ಸಂಜು ಸ್ಯಾಮ್ಸನ್ (Sanju Samson) ಆಟ ಪಂತ್ಗೆ ಭಯ ಹುಟ್ಟಿಸಿದೆ.
ಭಾರತಕ್ಕೆ ಬೇಕಿದ್ದಾನೆ ಮ್ಯಾಚ್ ಫಿನಿಶರ್..!:
ಟೀಂ ಇಂಡಿಯಾದಲ್ಲಿ ಸಾಕಷ್ಟು ಮಂದಿ ಟಾಪ್ ಆರ್ಡರ್ ಬ್ಯಾಟರ್ಗಳು ಇದ್ದಾರೆ. ಆದ್ರೆ ಮ್ಯಾಚ್ ಫಿನಿಶರ್ ಮಾತ್ರ ಇಲ್ಲ. ಹಾರ್ದಿಕ್ ಪಾಂಡ್ಯ ಇದ್ದರೂ ಅವರಿಗೆ ಫಿಟ್ನೆಸ್ ಸಮಸ್ಯೆ ಇದೆ. ಹಾಗಾಗಿ ಐಪಿಎಲ್ನಲ್ಲಿ ರಾಹುಲ್ ದ್ರಾವಿಡ್ ಒಬ್ಬ ಮ್ಯಾಚ್ ಫಿನಿಶರ್ ಹುಡುಕುತ್ತಿದ್ದಾರೆ. ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಮತ್ತು ರಿಷಭ್ ಪಂತ್ ಮೂವರು ಐಪಿಎಲ್ನಲ್ಲಿ ಟಾಪ್ ಆರ್ಡರ್ನಲ್ಲಿ ಆಡ್ತಿದ್ದಾರೆ. ಜೊತೆಗೆ ಇದುವರೆಗೂ ಈ ತ್ರಿಮೂರ್ತಿಗಳು ಮ್ಯಾಚ್ ಫಿನಿಶ್ ಮಾಡಿಲ್ಲ. ಇನ್ನು ದಿನೇಶ್ ಕಾರ್ತಿಕ್, ಆರ್ಸಿಬಿ ಪರ ಲೋ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದು ಮ್ಯಾಚ್ ಸಹ ಫಿನಿಶ್ ಮಾಡ್ತಿದ್ದಾರೆ.
RCB ಮ್ಯಾಚ್ ಫಿನಿಶರ್ ಟಿ20 ವಿಶ್ವಕಪ್ಗೆ ಸೆಲೆಕ್ಟ್ ಆಗ್ತಾರಾ..?
ದಿನೇಶ್ ಕಾರ್ತಿಕ್ ಆಡಿರೋ 6 ಪಂದ್ಯಗಳಿಂದ 209ರ ಸ್ಟ್ರೈಕ್ರೇಟ್ನಲ್ಲಿ 197 ರನ್ ಬಾರಿಸಿದ್ದಾರೆ. ಒಂದು ಅರ್ಧಶತಕ ಬಾರಿಸಿದ್ರೂ ಐದು ಪಂದ್ಯಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ. ವಯಸ್ಸಾಗಿದೆ ಅನ್ನೋದಕ್ಕೆ ದಿನೇಶ್ ಕಾರ್ತಿಕ್ ಈಗಲೂ ಫಿಟ್ & ಫೈನ್. ಕೀಪಿಂಗ್ ಜೊತೆ ಬ್ಯಾಟಿಂಗ್ನಲ್ಲೂ ಅದ್ಭುತ ಫಾರ್ಮ್ನಲ್ಲಿದ್ದಾರೆ. ಅನುಭವಿ ಆಟಗಾರ ಬೇರೆ. ಹಾಗಾಗಿನೇ ರಿಷಭ್ ಪಂತ್ಗೆ ಡಿಕೆ ಭಯ ಶುರುವಾಗಿರೋದು.
ಹಾರ್ದಿಕ್ ಪಾಂಡ್ಯ ಫಿಟ್ ಆಗಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ್ರೆ ಅವರ ಜೊತೆ ಡಿಕೆನೂ ಸ್ಥಾನ ಪಡೆದ್ರೆ ಆಗ ಇಬ್ಬರು ಮ್ಯಾಚ್ ಫಿನಿಶರ್ಗಳು ಸಿಗಲಿದ್ದಾರೆ. ಟೀಂ ಇಂಡಿಯಾ ಟಾಪ್ ಆರ್ಡರ್ನಂತೆ ಲೋ ಆರ್ಡರ್ನಲ್ಲೂ ಬ್ಯಾಟಿಂಗ್ನಲ್ಲಿ ಸ್ಟ್ರಾಂಗ್ ಆಗಲಿದೆ. ಆಗ ಭಾರತಕ್ಕೆ 15 ವರ್ಷಗಳ ನಂತರ ಟಿ20 ವರ್ಲ್ಡ್ಕಪ್ ಗೆಲ್ಲೋ ಅವಕಾಶ ಹೆಚ್ಚಾಗಲಿದೆ. 2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯ, ನೆರೆಯ ಪಾಕಿಸ್ತಾನ ತಂಡವನ್ನು ಬಗ್ಗುಬಡಿದು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಾದ ಬಳಿಕ ಚುಟುಕು ವಿಶ್ವಕಪ್ ಗೆಲ್ಲುವ ಭಾರತದ ಕನಸು ಮತ್ತೊಮ್ಮೆ ನನಸಾಗಲೇ ಇಲ್ಲ. ಈ ಬಾರಿಯಾದರೂ ಟೀಂ ಇಂಡಿಯಾ ಟಿ20 ವಿಶ್ವಚಾಂಪಿಯನ್ ಆಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
