ಅಂದಾಜು 11 ತಿಂಗಳ ಬಳಿಕ ಜಸ್‌ಪ್ರೀತ್‌ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಆತಿಥೇಯ ಐರ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. 

ಡುಬ್ಲಿನ್‌ (ಆ.18):  ಭಾರತ ಹಾಗೂ ಆತಿಥೇಯ ಐರ್ಲೆಂಡ್‌ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಡುಬ್ಲಿನ್‌ನ ದಿ ವಿಲೇಜ್‌ ಸ್ಟೇಡಿಯಂನಲ್ಲಿ ನಡೆಯಲಿದೆ. ಟಾಸ್‌ ಗೆದ್ದ ಭಾರತ ತಂಡದ ನಾಯಕ ಜಸ್‌ಪ್ರೀತ್‌ ಬುಮ್ರಾ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಈ ಪಂದ್ಯದ ಮೂಲಕ ಕನ್ನಡಿಗ ಪ್ರಸಿದ್ಧ ಕೃಷ್ಣ ಟೀಂ ಇಂಡಿಯಾ ಪರವಾಗಿ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಅವರೊಂದಿಗೆ ಕಳೆದ ಐಪಿಎಲ್‌ನಲ್ಲಿ ಗಮನಸೆಳೆದಿದ್ದ ರಿಂಕು ಸಿಂಗ್‌ ಕೂಡ ಪಾದಾರ್ಪಣೆ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. ಈ ಪಂದ್ಯದ ಮೂಲಕ ಅನುಭವಿ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಕೂಡ ತಂಡಕ್ಕೆ ವಾಪಸಾಗಿದ್ದಾರೆ. ಗಾಯದ ಕಾರಣದಿಂದಾಗಿ ಕಳೆದ 11 ತಿಂಗಳಿನಿಂದ ಅವರು ಚೇತರಿಕೆಯಲ್ಲಿದ್ದರು.

ಟಿ20 ವಿಶ್ವಕಪ್‌ನ ಯುರೋಪಿಯನ್‌ ಕ್ವಾಲಿಫೈಯರ್‌ ಗೇಮ್‌ಗಳಲ್ಲಿ ಆತಿಥೇಯ ಐರ್ಲೆಂಡ್‌ ತಂಡ ಉತ್ತಮನಿರ್ವಹಣೆ ತೋರಿತ್ತು. ಎರಡು ಪಂದ್ಯಗಳ ಹೊರತಾಗಿ ಮತ್ತೆಲ್ಲಾ ಪಂದ್ಯಗಳಲ್ಲಿ ಗೆಲುವು ಕಂಡಿತ್ತು. ಸ್ಕಾಟ್ಲೆಂಡ್‌ ವಿರುದ್ಧ ಸೋಲು ಕಂಡಿದ್ದರೆ, ಜರ್ಮನಿ ವಿರುದ್ಧದ ಪಂದ್ಯ ವಾಶ್‌ಔಟ್‌ ಆಗಿತ್ತು. ಆದರೆ, ಭಾರತ ಈ ಎರಡೂ ತಂಡಗಳ ರೀತಿ ಅಲ್ಲ ಎನ್ನುವುದು ಐರ್ಲೆಂಡ್‌ಗೂ ಗೊತ್ತಿದೆ. ಆದರೆ, ಪೌಲ್‌ ಸ್ಟಿರ್ಲಿಂಗ್‌, ಆಂಡ್ರ್ಯೂ ಬಾಲ್ಬಿರ್ನಿ ಹಾಗೂ ಜೋಶುವಾ ಲಿಟಲ್ ರಂಥ ಆಟಗಾರರನ್ನು ತಂಡ ಹೊಂದಿದೆ. ಕಳೆದ ವರ್ಷದ ಒಂದು ಟಿ20 ಪಂದ್ಯದಲ್ಲಿ ಐರ್ಲೆಂಡ್‌ ಭಾರತಕ್ಕೆ ಆಘಾತ ನೀಡುವ ಹಾದಿಯಲ್ಲಿತ್ತು. ಈಗ ಅನನುಭವಿ ಭಾರತ ತಂಡದ ವಿರುದ್ಧ ಇದೇ ರೀತಿಯ ನಿರ್ವಹಣೆ ತೋರಲು ಉತ್ಸುಕವಾಗಿದೆ. 

Ind vs Ire ಐರ್ಲೆಂಡ್ ಎದುರಿನ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ..!

ಐರ್ಲೆಂಡ್ (ಪ್ಲೇಯಿಂಗ್ ಇಲೆವೆನ್‌): ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಲೋರ್ಕನ್ ಟಕರ್ (ವಿ.ಕೀ), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಕ್ರೇಗ್ ಯಂಗ್, ಜೋಶುವಾ ಲಿಟಲ್, ಬೆಂಜಮಿನ್ ವೈಟ್

ಏಷ್ಯಾಕಪ್ ತಂಡದ ಆಯ್ಕೆಗೂ ಮುನ್ನ ದ್ರಾವಿಡ್ - ಜಯ್ ಶಾ 2 ಗಂಟೆಗಳ ಸುದೀರ್ಘ ಮೀಟಿಂಗ್..!

ಭಾರತ (ಪ್ಲೇಯಿಂಗ್ ಇಲೆವೆನ್‌):
ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ವಿ.ಕೀ), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ (ನಾಯಕ), ರವಿ ಬಿಷ್ಣೋಯ್