ನವದೆಹಲಿ(ಜ.29): ಭಾರತ-ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಜಯ ಸಾಧಿಸಿದೆ. ಕ್ರಿಕೆಟ್‌ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯ ಸೂಪರ್ ಓವರ್‌ನಲ್ಲಿ ಭಾರತದ ಪಾಲಾಯಿತು. ಸತತ 2 ಸಿಕ್ಸರ್ ಸಿಡಿಸುವ ಮೂಲಕ ರೋಹಿತ್ ಶರ್ಮಾ ಟೀಂ ಇಂಡಿಯಾದ ಗೆಲುವಿನ ರೂವಾರಿ ಎನಿಸಿದರು.

ಟೀಂ ಇಂಡಿಯಾಗೆ ಹಿಟ್‌ಮ್ಯಾನ್ ಗಿಫ್ಟ್ : ಸೂಪರ್‌ ಓವರ್‌ನಲ್ಲಿ ಗೆದ್ದ ಭಾರತ

ಟೀಂ ಇಂಡಿಯಾ ಅಭಿಮಾನಿಗಳು ಈ ರೀತಿಯ ರೋಚಕ ಪಂದ್ಯವನ್ನು ಸಾಕಷ್ಟು ವರ್ಷಗಳಿಂದ ಮಿಸ್ ಮಾಡಿಕೊಂಡಿದ್ದರು.  ಪಾಕಿಸ್ತಾನದ ಬ್ಯಾಟ್ಸ್‌ಮನ್ ಜಾವೇದ್ ಮಿಯಾಂದಾದ್ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಟೀಂ ಇಂಡಿಯಾ ವೇಗಿ ಚೇತನ್ ಶರ್ಮಾ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸಿ ಭಾರತದ ಗೆಲುವನ್ನು ಕಸಿದುಕೊಂಡಿದ್ದರು. ಆದರೆ ಬುಧವಾರ ರೋಹಿತ್ ಶರ್ಮಾ ಸತತ ಎರಡು ಮುಗಿಲೆತ್ತರದ ಸಿಕ್ಸರ್ ಬಾರಿಸುವ ಮೂಲಕ ಟೀಂ ಇಂಡಿಯಾ ಅಭಿಮಾನಿಗಳ ಪಾಲಿಗೆ ಎಂದೆಂದೂ ಮರೆಯಲಾರದ ಗಿಫ್ಟ್ ನೀಡಿದ್ದಾರೆ. 

ಅಂತಿಮ ಎಸೆತದಲ್ಲಿ ಟೇಲರ್ ಕ್ಲೀನ್ ಬೋಲ್ಡ್, T20 ಪಂದ್ಯ ರೋಚಕ ಟೈ!

ಕ್ರಿಕೆಟ್ ಅಭಿಮಾನಿಯಾಗಿರುವ ಬಾಲಿವುಡ್ 'ಬಿಗ್ ಬಿ' ಅಮಿತಾಬ್ ಬಚ್ಚನ್ ಅತ್ಯದ್ಭುತ, ಅವಿಸ್ಮರಣೀಯ ಎಂದು ಉದ್ಘರಿಸಿದ್ದಾರೆ. ಕಿವೀಸ್ ನೆಲದಲ್ಲಿ ಚೊಚ್ಚಲ ಟಿ20 ಸರಣಿ ಗೆದ್ದ ಟೀಂ ಇಂಡಿಯಾಗೆ ಅಭಿನಂದನೆಗಳು ಎಂದು ಬಚ್ಚನ್ ಟ್ವೀಟ್ ಮಾಡಿದ್ದಾರೆ.

ಪಂದ್ಯ ಹೇಗಿತ್ತು..?

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 179 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ನ್ಯೂಜಿಲೆಂಡ್  ಸಹಾ 6 ವಿಕೆಟ್ ಕಳೆದುಕೊಂಡು 179 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು.

ಸೂಪರ್ ಓವರ್‌ನಲ್ಲಿ ಬುಮ್ರಾ ಭಾರತ ಪರ ಬೌಲಿಂಗ್ ದಾಳಿ ನಡೆಸಿದರು. ನ್ಯೂಜಿಲೆಂಡ್ 6 ಎಸೆತಗಳಲ್ಲಿ 17 ರನ್ ಬಾರಿಸಿತು. ಸೂಪರ್ ಓವರ್‌ನಲ್ಲಿ ಗೆಲ್ಲಲು 18 ರನ್‌ಗಳ ಗುರಿ ಪಡೆದ ಭಾರತ ಟಿಮ್ ಸೌಥಿ ಎಸೆದ ಮೊದಲ 4 ಎಸೆತಗಳಲ್ಲಿ ಕೇವಲ 8 ರನ್‌ಗಳಿಸಿತ್ತು. ಇನ್ನು ಗೆಲ್ಲಲು ಕೊನೆಯ ಎರಡು ಎಸೆತಗಳಲ್ಲಿ 10 ರನ್‌ಗಳ ಅವಶ್ಯಕತೆಯಿತ್ತು. ರೋಹಿತ್ ಶರ್ಮಾ ಸತತ 2 ಸಿಕ್ಸರ್ ಚಚ್ಚುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.