Asianet Suvarna News Asianet Suvarna News

ಟೀಂ ಇಂಡಿಯಾಗೆ ಹಿಟ್‌ಮ್ಯಾನ್ ಗಿಫ್ಟ್ : ಸೂಪರ್‌ ಓವರ್‌ನಲ್ಲಿ ಗೆದ್ದ ಭಾರತ

ಟೀಂ ಇಂಡಿಯಾ ಸೂಪರ್‌ ಓವರ್‌ನಲ್ಲಿ ರೋಚಕ ಜಯ ಸಾಧಿಸಿದೆ. ಹಿಟ್‌ಮ್ಯಾನ್ ರೋಹಿತ್ ಶರ್ಮಾ ಸತತ 2 ಸಿಕ್ಸರ್ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಕುರಿತಾದ ವಿವರ ಇಲ್ಲಿದೆ ನೋಡಿ.. 

Team India thrash New zealand in Super over and clinch t20 series
Author
Hamilton, First Published Jan 29, 2020, 4:27 PM IST

ಹ್ಯಾಮಿಲ್ಟನ್(ಜ.29): ಸೂಪರ್ ಓವರ್‌ನಲ್ಲಿ ರೋಹಿತ್ ಶರ್ಮಾ ಬಾರಿಸಿದ ಸತತ 2 ಸಿಕ್ಸರ್ ನೆರವಿನಿಂದ ಟೀಂ ಇಂಡಿಯಾ 3ನೇ ಟಿ20 ಪಂದ್ಯದಲ್ಲಿ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಇನ್ನೂ 2 ಪಂದ್ಯಗಳು ಬಾಕಿ ಇರುವಾಗಲೇ ಟೀಂ ಇಂಡಿಯಾ 3-0 ಅಂತರದಲ್ಲಿ ಚುಟುಕು ಸರಣಿ ಕೈವಶ ಮಾಡಿಕೊಂಡಿದೆ.

ಅಂತಿಮ ಎಸೆತದಲ್ಲಿ ಟೇಲರ್ ಕ್ಲೀನ್ ಬೋಲ್ಡ್, T20 ಪಂದ್ಯ ರೋಚಕ ಟೈ!

ಮೂರನೇ ಪಂದ್ಯ ಟೈ ಆಗಿದ್ದರಿಂದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಭಾರತ ಪರ ಸೂಪರ್ ಓವರ್ ಮಾಡುವ ಜವಾಬ್ದಾರಿ ವಹಿಸಿಕೊಂಡ ಬುಮ್ರಾ 17 ರನ್ ನೀಡಿದರು. ಮೊದಲೆರಡು ಎಸೆತಗಳಲ್ಲಿ ಬುಮ್ರಾ ತಲಾ ಒಂದು ರನ್ ನೀಡಿದರು. ಮೂರನೇ ಎಸೆತದಲ್ಲಿ ನಾಯಕ ವಿಲಿಯಮ್ಸನ್‌ ಚೆಂಡನ್ನು ಸಿಕ್ಸರ್‌ಗಟ್ಟುವಲ್ಲಿ ಯಶಸ್ವಿಯಾದರು. ನಾಲ್ಕನೇ ಎಸೆತವನ್ನು ಬೌಂಡರಿಗಟ್ಟುವಲ್ಲಿ ಯಶಸ್ವಿಯಾದರು. 5ನೇ ಎಸೆತದಲ್ಲಿ ಬುಮ್ರಾ 1 ರನ್ ನೀಡಿದರು. ಕೊನೆಯ ಎಸೆತದಲ್ಲಿ ಗಪ್ಟಿಲ್ ಬೌಂಡರಿ ಬಾರಿಸಿದರು. ಈ ಮೂಲಕ ಟೀಂ ಇಂಡಿಯಾಗೆ ಗೆಲ್ಲಲು 18 ರನ್‌ಗಳ ಗುರಿ ನೀಡಿತು.

ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಲಿಳಿದ ಭಾರತ ಮೊದಲ ಎಸೆತದಲ್ಲಿ ಎರಡು ರನ್ ಗಳಿಸಿತು. ಎರಡನೇ ಎಸೆತದಲ್ಲಿ ಸೌಥಿ ಕೇವಲ 1 ರನ್ ನೀಡಿದರು. ಇನ್ನು ಮೂರನೇ ಎಸೆತದಲ್ಲಿ ರಾಹುಲ್ ಬೌಂಡರಿ ಬಾರಿಸಿದರು. ಇನ್ನು ಕೊನೆಯ 3 ಎಸೆತಗಳಲ್ಲಿ 11 ರನ್‌ಗಳ ಅವಶ್ಯಕತೆಯಿತ್ತು. ನಾಲ್ಕನೇ ಎಸೆತದಲ್ಲಿ ರಾಹುಲ್ ಒಂದು ರನ್ ಗಳಿಸಿದರು. ಕೊನೆಯ ಎರಡು ಎಸೆತಗಳಲ್ಲಿ ಭಾರತಕ್ಕೆ ಗೆಲ್ಲಲು 10 ರನ್‌ಗಳ ಅವಶ್ಯಕತೆಯಿತ್ತು. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಸತತ 2 ಸಿಕ್ಸರ್ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಭಾರತ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಮತ್ತೊಮ್ಮೆ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ಮಾರ್ಟಿನ್ ಗಪ್ಟಿಲ್-ಕಾಲಿನ್ ಮನ್ರೋ ಜೋಡಿ 47 ರನ್‌ಗಳ ಜತೆಯಾಟವಾಡಿತು. ಕೇವಲ 21 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 31 ರನ್ ಬಾರಿಸಿದ್ದ ಗಪ್ಟಿಲ್ ವೇಗಿ ಶಾರ್ದೂಲ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಮನ್ರೋ ಅವರನ್ನು ಜಡೇಜಾ ಪೆವಿಲಿಯನ್ನಿಗಟ್ಟಿದರು. 

ನಾಯಕನ ಏಕಾಂಗಿ ಹೋರಾಟ: 52 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕಿವೀಸ್ ತಂಡಕ್ಕೆ ನಾಯಕ ಕೇನ್ ವಿಲಿಯಮ್ಸನ್ ಆಸರೆಯಾದರು. ತಂಡದ ಪರ ಏಕಾಂಗಿ ಹೋರಾಟ ಮಾಡಿದ ವಿಲಿಯಮ್ಸನ್ 48 ಎಸೆತಗಳಲ್ಲಿ  8 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 95 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ನಾಯಕನಿಗೆ ರಾಸ್ ಟೇಲರ್ ಉತ್ತಮ ಸಾಥ್ ನೀಡಿದರು.

ಪಂದ್ಯದ ಗತಿ ಬದಲಿಸಿದ ಶಮಿ:
ಕೊನೆಯ ಓವರ್‌ನಲ್ಲಿ ನ್ಯೂಜಿಲೆಂಡ್ ಗೆಲ್ಲಲು 10 ರನ್‌ಗಳ ಅವಶ್ಯಕತೆಯಿತ್ತು. ರಾಸ್ ಟೇಲರ್ ಮೊದಲ ಎಸೆತದಲ್ಲೇ ಚೆಂಡನ್ನು ಸಿಕ್ಸರ್‌ಗಟ್ಟಿದರು. ಎರಡನೇ ಎಸೆತದಲ್ಲಿ ಶಮಿ ಒಂದು ರನ್ ನೀಡಿದರು. ಮೂರನೇ ಎಸೆತದಲ್ಲಿ ವಿಲಿಯಮ್ಸನ್ ವಿಕೆಟ್ ಪಡೆಯುವಲ್ಲಿ ಶಮಿ ಯಶಸ್ವಿಯಾದರು. ನಾಲ್ಕನೇ ಎಸೆತದಲ್ಲಿ ಸೈಫರ್ಟ್‌ಗೆ ರನ್ ನೀಡಲಿಲ್ಲ. ಕೊನೆಯ ಎರಡು ಎಸೆತಗಳಲ್ಲಿ 2 ರನ್ ಅವಶ್ಯಕತೆಯಿತ್ತು. 5ನೇ ಎಸೆತದಲ್ಲಿ ಬೈ ರೂಪದಲ್ಲಿ ಒಂದು ರನ್ ಕಲೆಹಾಕಿದರು. ಆರನೇ ಎಸೆತದಲ್ಲಿ ಟೇಲರ್ ಬೌಲ್ಡ್ ಮಾಡುವ ಮೂಲಕ ಪಂದ್ಯವನ್ನು ರೋಚಕ ಟೈ ಮಾಡಿದರು.

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ರೋಹಿತ್ ಶರ್ಮಾ(65) ಹಾಗೂ ವಿರಾಟ್ ಕೊಹ್ಲಿ(38) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 179 ರನ್‌ಗಳ ಸ್ಫರ್ಧಾತ್ಮಕ ಮೊತ್ತ ಕಲೆಹಾಕಿತ್ತು.

ಜನವರಿ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios