ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ಪರ್ತ್‌ನಲ್ಲಿ ಭಾರತ vs ಭಾರತ ಎ ನಡುವೆ ಅಭ್ಯಾಸ ಪಂದ್ಯ!
ನವೆಂಬರ್ 22ರಿಂದ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾ, ಭಾರತ 'ಎ' ತಂಡದ ವಿರುದ್ಧವೇ ಒಂದು ಅಭ್ಯಾಸ ಪಂದ್ಯ ಆಡಲಿದೆ.
ನವದೆಹಲಿ: ನವೆಂಬರ್ 22ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಗೂ ಭಾರತ ತಂಡ ಭಾರತ ‘ಎ’ ವಿರುದ್ಧ ಅಭ್ಯಾಸ ಪಂದ್ಯ ಆಡಲಿದೆ. ಪಂದ್ಯ ನ.15ರಿಂದ 17ರ ವರೆಗೆ ಪರ್ತ್‌ನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಭಾರತ ‘ಎ’ ತಂಡ ಇದೇ ತಿಂಗಳ ಕೊನೆ ವಾರದಲ್ಲೇ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದೆ.
ಭಾರತ 'ಎ' ತಂಡವನ್ನು ಋತುರಾಜ್ ಗಾಯಕ್ವಾಡ್ ಮುನ್ನಡೆಸುವ ಸಾಧ್ಯತೆಯಿದ್ದು, ಆಸ್ಟ್ರೇಲಿಯಾ ‘ಎ’ ವಿರುದ್ಧ 2 ಪಂದ್ಯಗಳನ್ನಾಡಲಿದೆ. ಮೊದಲ ಪಂದ್ಯ ಅ.31ರಿಂದ ನ.3ರ ವರೆಗೆ ಹಾಗೂ 2ನೇ ಪಂದ್ಯ ನ.7ರಿಂದ 10ರ ವರೆಗೆ ನಡೆಯಲಿವೆ. ಭಾರತ ‘ಎ’ ತಂಡ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ನವೆಂಬರ್ 2ನೇ ವಾರ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವ ನಿರೀಕ್ಷೆಯಿದೆ.
ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ ಗೈರು?
ಟೀಂ ಇಂಡಿಯಾ ಕಳೆದೆರಡು ಬಾರಿ ಆಸ್ಟ್ರೇಲಿಯಾ ಪ್ರವಾಸ ಮಾಡಿದಾಗಲೂ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಜಯಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ಆಸೀಸ್ ನೆಲದಲ್ಲಿ ಹ್ಯಾಟ್ರಿಕ್ ಸಾಧಿಸಲು ಸಜ್ಜಾಗಿದೆ. ಪರ್ತ್ ಟೆಸ್ಟ್ ಬಳಿಕ ಡಿಸೆಂಬರ್ 06ರಿಂದ ಅಡಿಲೇಡ್ ಓವಲ್ ಮೈದಾನದಲ್ಲಿ ಪಿಂಕ್ ಬಾಲ್ ಟೆಸ್ಟ್ ಪಂದ್ಯವು ನಡೆಯಲಿದೆ. ಇನ್ನು ಡಿಸೆಂಬರ್ 14ರಿಂದ ಗಾಬಾದಲ್ಲಿ ಮೂರನೇ ಟೆಸ್ಟ್ ಪಂದ್ಯವು ನಡೆದರೆ, ಡಿಸೆಂಬರ್ 26ರಿಂದ ಐತಿಹಾಸಿಕ ಮೆಲ್ಬೊರ್ನ್ ಸ್ಟೇಡಿಯಂನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ನಡೆಯಲಿದೆ. ಇನ್ನು ಜನವರಿ 03ರಿಂದ ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವು ನಡೆಯಲಿದೆ.
ಐಪಿಎಲ್: ಮುಂಬೈಗೆ ಮತ್ತೆ ಜಯವರ್ಧನೆ ಹೆಡ್ ಕೋಚ್
ಮುಂಬೈ: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲ ಜಯವರ್ಧನೆ ಐಪಿಎಲ್‌ನ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೆ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಜಯವರ್ಧನೆ 2017ರಿಂದ 2022ರ ವರೆಗೆ ಮುಂಬೈಗೆ ಕೋಚ್ ಆಗಿದ್ದರು. ಈ ಅವಧಿಯಲ್ಲಿ ಮುಂಬೈ 2017, 2019, 2020ರಲ್ಲಿ ಚಾಂಪಿಯನ್ ಆಗಿತ್ತು.
ಕಳೆದೆರಡು ಆವೃತ್ತಿಗಳಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಮಾರ್ಕ್ ಬೌಷರ್ ಮುಂಬೈ ಇಂಡಿಯನ್ಸ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಆದರೆ 2 ಆವೃತ್ತಿಗಳಲ್ಲೂ ಫೈನಲ್‌ಗೇರಿರಲಿಲ್ಲ. ಸದ್ಯ ಬೌಷರ್ ಸ್ಥಾನಕ್ಕೆ ಜಯವರ್ಧನೆ ನೇಮಕಗೊಂಡಿದ್ದಾರೆ.