ಇಂಗ್ಲೆಂಡ್ ಸರಣಿ ಮುನ್ನ ಭಾರತಕ್ಕೆ 2 ಅಭ್ಯಾಸ ಪಂದ್ಯ
* ಇಂಗ್ಲೆಂಡ್ ಎದುರಿನ ಸರಣಿಗೂ ಮುನ್ನ ಟೀಂ ಇಂಡಿಯಾ ಅಭ್ಯಾಸ ಪಂದ್ಯ
* ಟೀಂ ಇಂಡಿಯಾ, ಇಂಗ್ಲೆಂಡ್ ಎದುರು 5 ಪಂದ್ಯಗಳ ಸರಣಿಯಾಡಲಿದೆ.
* ತನ್ನ ತಂಡದ ಆಟಗಾರರನ್ನೇ 2 ತಂಡಗಳನ್ನಾಗಿ ವಿಂಗಡಿಸಿ ಪಂದ್ಯವನ್ನಾಡಲಿರುವ ಭಾರತ
ನವದೆಹಲಿ(ಜೂ.26): ಇಂಗ್ಲೆಂಡ್ ವಿರುದ್ಧ ಆಗಸ್ಟ್ 4ರಿಂದ ಆರಂಭಗೊಳ್ಳಲಿರುವ 5 ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾ ಡರ್ಹಮ್‌ನಲ್ಲಿ 2 ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ಅಭ್ಯಾಸ ಪಂದ್ಯಕ್ಕೆ ಸ್ಥಳೀಯ ತಂಡ ಒದಗಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಿರಾಕರಿಸಿದ ಕಾರಣ, ತನ್ನ ತಂಡದ ಆಟಗಾರರನ್ನೇ 2 ತಂಡಗಳನ್ನಾಗಿ ವಿಂಗಡಿಸಿ ಪಂದ್ಯವನ್ನಾಡಲಿದೆ. ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಫೈನಲ್‌ಗೂ ಮುನ್ನ ಭಾರತ ತನ್ನ ಆಟಗಾರರನ್ನೇ 2 ತಂಡಗಳನ್ನಾಗಿ ಮಾಡಿ ಅಭ್ಯಾಸ ಪಂದ್ಯವನ್ನಾಡಿತ್ತು.
ನಮಗೆ ತಿಳಿದಿರುವ ಮಾಹಿತಿಯಂತೆ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಡರ್ಹಮ್‌ನಲ್ಲಿ ಜುಲೈ 15ರಿಂದ ಟೀಂ ಇಂಡಿಯಾ ಅಭ್ಯಾಸ ಶಿಬಿರ ಆರಂಭವಾಗಲಿದೆ. ಅವರು ತಂಡದ ಆಟಗಾರರನ್ನೇ 2 ತಂಡಗಳನ್ನಾಗಿ ವಿಂಗಡಿಸಿ 4 ದಿನಗಳ ಎರಡು ಅಭ್ಯಾಸ ಪಂದ್ಯಗಳನ್ನಾಡಲಿದೆ ಎಂದು ಇಸಿಬಿ ವಕ್ತಾರರು ಸ್ಪೋರ್ಟ್ಸ್‌ಸ್ಟಾರ್‌ಗೆ ತಿಳಿಸಿದ್ದಾರೆ.
2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವೇಳಾಪಟ್ಟಿ ಪ್ರಕಟ
ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಸೋಲಿನ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಾವು ಇಂಗ್ಲೆಂಡ್‌ಗೆ ಬಂದಿಳಿದ ಬಳಿಕ ಇಲ್ಲಿ ಕೌಂಟಿ ಪಂದ್ಯವನ್ನಾಡಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂದಿದ್ದರು. ಕಠಿಣ ಬಯೋ ಬಬಲ್ ಪ್ರೊಟೋಕಾಲ್ ಪಾಲಿಸಬೇಕಾಗಿದ್ದರಿಂದ ಟೀಂ ಇಂಡಿಯಾಗೆ ಸರಿಯಾಗಿ ಅಭ್ಯಾಸ ನಡೆಸಲು ಸಾಧ್ಯವಾಗಿರಲಿಲ್ಲ.