T20 World Cup: ಥ್ರೋಡೌನ್ ಸ್ಪೆಷಲಿಸ್ಟ್ ಕರ್ನಾಟಕದ ರಘು ಭಾರತದ ಗೆಲುವಿನ 'ಆಫ್‌ಫೀಲ್ಡ್ ಹೀರೋ'!
ಅಡಿಲೇಡ್‌ನಲ್ಲಿ ಬುಧವಾರ ನಡೆದ ಮಳೆಬಾಧಿತ ಪಂದ್ಯದಲ್ಲಿ ಟೀಮ್ ಇಂಡಿಯಾ 5 ರನ್‌ಗಳಿಂದ ಬಾಂಗ್ಲಾದೇಶ ತಂಡವನ್ನು ಸೋಲಿಸಿತು. ಟೀಮ್ ಇಂಡಿಯಾದ ಆಟಗಾರರ ನಿರ್ವಹಣೆಗೆ ಮೆಚ್ಚುಗೆ ಬರುತ್ತಿರುವ ಹೊತ್ತಲ್ಲಿ, ಆಫ್‌ಫೀಲ್ಡ್‌ನಲ್ಲಿ ನಿಂತು ಗೆಲುವಿನ ಹೀರೋ ಎನಿಸಿಕೊಂಡ ಥ್ರೋಡೌನ್ ಸ್ಪೆಷಲಿಸ್ಟ್ ಕುಮಟಾದ ರಘುವನ್ನು ಸೋಷಿಯಲ್ ಮೀಡಿಯಾ ಮೆಚ್ಚಿದೆ.
ಅಡಿಲೇಡ್ (ನ.3): ಸೋಶಿಯಲ್ ಮೀಡಿಯಾದಲ್ಲಿ ಯಾವ ವಿಚಾರಗಳು ಕೂಡ ಸುದ್ದಿಯಾಗದೇ ಹೋಗುವುದಿಲ್ಲ. 2022ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ತನ್ನ ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 5 ರನ್‌ಗಳಿಂದ ಮಣಿಸಿತು. ಮಳೆ ಬರುವ ಮುನ್ನ ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್‌ಮನ್ ಲಿಟನ್ ದಾಸ್ ಅಬ್ಬರದ ಬ್ಯಾಟಿಂಗ್ ಮೂಲಕ ಭಾರತವನ್ನು ಕಂಗೆಡಿಸಿದ್ದರು. ಆದರೆ, ಒಮ್ಮೆ ಮಳೆ ಬಂದು ಡಕ್‌ವರ್ತ್ ಲೂಯಿಸ್ ಸ್ಟರ್ನ್ ನಿಯಮದ ಪ್ರಕಾರ ಟಾರ್ಗೆಟ್ ನಿಗದಿಯಾದ ನಂತರ ಟೀಮ್ ಇಂಡಿಯಾ ಆಡುವ ರೀತಿಯೇ ಬದಲಾಗಿ ಹೋಯಿತು. ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಭರ್ಜರಿ ತಿರುಗೇಟು ನೀಡಿದ ಭಾರತ, 5 ರನ್‌ಗಳ ಆಕರ್ಷಕ ಗೆಲುವು ಸಂಪಾದಿಸಿತು. ತಂಡವು ಗೆಲುವಿನ ಖುಷಿಯನ್ನು ಮೈದಾನದಲ್ಲಿಯೇ ಆಚರಿಸಿದ್ದೂ ಕಂಡು ಬಂತು. ಹಾಗಿದ್ದರೂ, ತಂಡದ ಈ ಗೆಲುವಿಗೆ ಸಹಾಯ ಮಾಡಿದ ತೆರೆಮರೆಯ ಸಾಧಕರ ಪ್ರಯತ್ನಗಳು ಸಾಮಾನ್ಯವಾಗಿ ಗಮನಕ್ಕೆ ಬರುವುದಿಲ್ಲ. ಆದರೆ, ಅಡಿಲೇಡ್ ಪಂದ್ಯದಲ್ಲಿ ಹಾಗಾಗಿಲ್ಲ. ಭಾರತದ ಗೆಲುವಿಗೆ ಆಫ್‌ಫೀಲ್ಡ್‌ನಲ್ಲಿ ನಿಂತು ಸಹಕರಿಸಿದ ಕರ್ನಾಟಕ ಕುಮಟಾದ ರಘುವಿಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದಿದೆ.
ಹೌದು ಟೀಮ್ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ. ಆಟಗಾರರು ಹಾಗೂ ಕೆಲವು ಅಭಿಮಾನಿಗಳಿಗೆ ಮಾತ್ರವೇ ಗೊತ್ತಿರುವ ರಘು, ಅಡಿಲೇಡ್‌ನಲ್ಲಿ ಮೈದಾನದ ಬೌಂಡರಿ ಲೈನ್‌ನಲ್ಲಿ ಬ್ರಶ್ ಹಿಡಿದುಕೊಂಡು ಓಡಾಡುತ್ತಿದ್ದರು. ಇದನ್ನು ನೋಡಿದವರೆಲ್ಲರೂ ಆಶ್ಚರ್ಯಪಟ್ಟಿದ್ದರು. ಮರು ಓವರ್ ಬೌಲಿಂಗ್ ಮಾಡಲು ಹೋಗುವಂಥ ಬೌಲರ್‌ಗಳ ಬಳಿ ನಿಲ್ಲುತ್ತಿದ್ದ ರಘು, ತನ್ನ ಕೈಯಲ್ಲಿದ್ದ ಬ್ರಶ್‌ನಿಂದ ಅವರ ಶೂಗಳನ್ನು ಉಜ್ಜುತ್ತಿದ್ದ. ಮಳೆ ಬಂದು ಒದ್ದೆಯಾಗಿದ್ದ ಪಿಚ್‌ನಲ್ಲಿ ಓಡುವಾಗ ಶೂಗಳಿಗೆ ಮಣ್ಣು ಮೆತ್ತಿಕೊಳ್ಳುತ್ತಿತ್ತು. ಬೌಂಡರಿ ಲೈನ್‌ನ ಬಳಿ ಬೌಲರ್‌ಗಳು ನಿಂತಾಗ, ರಘು ಬ್ರಶ್‌ನಿಂದ ಅವರ ಶೂಗಳಿಗೆ ಮೆತ್ತಿದ್ದ ಮಣ್ಣುಗಳನ್ನು ತೆಗೆಯುತ್ತಿದ್ದರು. ಅದಲ್ಲದೆ, ಕೆಲ ಫೀಲ್ಡರ್‌ಗಳ ಶೂಗಳನ್ನೂ ಬ್ರಶ್‌ನ ಮೂಲಕ ಉಜ್ಜಿದ್ದರು.
ಏನಿದು ಥ್ರೋಡೌನ್ ಸ್ಪೆಷಲಿಸ್ಟ್: ಟೀಮ್ ಇಂಡಿಯಾದ (Team India) ಪ್ರ್ಯಾಕ್ಟೀಸ್ ಅವಧಿಯಲ್ಲಿ ಥ್ರೋಡೌನ್ (Throw Down Speclist) ಮಾಡುವ ವಿಶೇಷ ಕೌಶಲವನ್ನು ರಘು ಹೊಂದಿದ್ದಾರೆ. ಇದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಂತಹ ಪಿಚ್‌ಗಳ ವೇಗ ಮತ್ತು ಬೌನ್ಸ್‌ಗೆ ತಯಾರಾಗಲು ಅವರಿಗೆ ಸಹಾಯ ಮಾಡುತ್ತದೆ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದ ಪಿಚ್‌ಗಳು ಬೌನ್ಸರ್‌ಗಳಿಗೆ ಹೆಸರುವಾಸಿ. ನೆಟ್ಸ್ ಅಭ್ಯಾಸ ವೇಳೆ ಬೌಲರ್‌ಗಳಿಂದ ಬೌನ್ಸರ್ ಎದುರಿಸುವ ಅಭ್ಯಾಸ ಮಾಡುವುದರೊಂದಿಗೆ, ಥ್ರೋಡೌನ್ ಸ್ಪೆಷಲಿಸ್ಟ್‌ಗಳ ಸಹಾಯವನ್ನು ಪಡೆಯುತ್ತಾರೆ. ಥ್ರೋಡೌನ್ ಸ್ಟಿಕ್‌ನಿಂದ ಚೆಂಡನ್ನು ಹಿಡಿದು ರಘು, ಬ್ಯಾಟ್ಸ್‌ಮನ್‌ಗಳತ್ತ ಎಸೆಯುತ್ತಾರೆ. ಕಳೆದ ಒಂದು ದಶಕದಿಂದ ಟೀಮ್ ಇಂಡಿಯಾ ಸಿಬ್ಬಂದಿಯಾಗಿ ಕೆಲಸ ಮಾಡಿರುವ ರಘು ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಅವರಿಗೆ ಥ್ರೋಡೌನ್ ಸ್ಪೆಷಲಿಸ್ಟ್ ಜವಾಬ್ದಾರಿ ನೀಡಲಾಗಿದೆ. ಆದರೆ, ಬುಧವಾರ ಅವರು ಇನ್ನೊಂದು ರೀತಿಯಲ್ಲಿ ತಂಡಕ್ಕೆ ಸಹಾಯ ಮಾಡಿದ್ದಾರೆ.
T20 World Cup ಬಾಂಗ್ಲಾ ಎದುರು ರೋಚಕ ಜಯ, ಸೆಮೀಸ್‌ಗೆ ಟೀಂ ಇಂಡಿಯಾ ಸನಿಹ..!
ಬಾಂಗ್ಲಾದೇಶದ ರನ್-ಚೇಸ್ ಸಮಯದಲ್ಲಿ, ಮಳೆಯಿಂದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು ಮತ್ತು ಪಂದ್ಯವನ್ನು ಪುನರಾರಂಭಿಸಿದಾಗ, ಔಟ್‌ಫೀಲ್ಡ್ ಸಾಕಷ್ಟು ತೇವವಾಗಿತ್ತು.ರಘು ಬ್ರಶ್ ಹಿಡಿದು ಆಟಗಾರರ ಸಹಾಯಕ್ಕೆ ಬಂದಿದ್ದರಿಂದ ರೋಚಕವಾಗಿದ್ದ ಪಂದ್ಯದಲ್ಲಿ ಭಾರತದ ಫೀಲ್ಡರ್‌ಗಳು ಜಾರಿ ಬೀಳದಂತೆ ನೋಡಿಕೊಂಡಿದ್ದರು.
ಬಾಂಗ್ಲಾ ಗೆಲುವಿನ ಬೆನ್ನಲ್ಲೇ ಭಾರತದ ಸೆಮಿಫೈನಲ್ ಲೆಕ್ಕಾಚಾರ, ಪಾಕ್‌ಗೆ ಇನ್ನೂ ಇದೆಯಾ ಅವಕಾಶ?
ಭಾರತದ ಸೈಡ್ ಆರ್ಮ್ ಥ್ರೋವರ್ 'ರಘು' ಭಾರತೀಯ ಆಟಗಾರರ ಶೂಗಳನ್ನು ಸ್ವಚ್ಛಗೊಳಿಸಲು ಕೈಯಲ್ಲಿ ಬ್ರಷ್ ಹಿಡಿದು ಮೈದಾನದ ಸುತ್ತಲೂ ಓಡುತ್ತಿದ್ದರು. ಮಳೆಯಿಂದಾಗಿ, ಆಟಗಾರರು ಒದ್ದೆಯಾದ ಬೂಟುಗಳೊಂದಿಗೆ ಜಾರಿಬೀಳುವ ಸಾಧ್ಯತೆ ಇರುತ್ತದೆ. ಆದರೆ ಅದು ಸಂಭವಿಸದ ರೀತಿಯಲ್ಲಿ ರಘು ಕೆಲಸ ಮಾಡಿದ್ದಾರೆ. ಗ್ರೇಟ್ ಜಾಬ್ ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. ಭಾರತೀಯ ತಂಡದ ಆಫ್ ಫೀಲ್ಡ್ ಹೀರೋ. ಇವರು ಭಾರತದ ಸೈಡ್‌ಆರ್ಮ್ ಥ್ರೋವರ್ ರಘು ಅವರು ಭಾರತೀಯ ಆಟಗಾರರು ಮೈದಾನದಲ್ಲಿ ಜಾರಿ ಬೀಳುವ ಸಾಧ್ಯತೆಯನ್ನು ತಪ್ಪಿಸಲು ಕೈಯಲ್ಲಿ ಬ್ರಷ್ ಹಿಡಿದು ಮೈದಾನದ ಸುತ್ತಲೂ ಓಡುತ್ತಿದ್ದರು. ಆಟಗಾರರ ಬೂಟುಗಳನ್ನು ಅವರು ಸ್ವಚ್ಛ ಮಾಡುತ್ತಿದ್ದರು ಎಂದು ಇನ್ನೊಬ್ಬರು ಬರೆದಿದ್ದಾರೆ.