T20 World Cup ಬಾಂಗ್ಲಾ ಎದುರು ರೋಚಕ ಜಯ, ಸೆಮೀಸ್‌ಗೆ ಟೀಂ ಇಂಡಿಯಾ ಸನಿಹ..!

ಬಾಂಗ್ಲಾದೇಶ ಎದುರು ರೋಚಕ ಜಯ ಸಾಧಿಸಿದ ಟೀಂ ಇಂಡಿಯಾ

ಸೂಪರ್ 12 ಹಂತದಲ್ಲಿ ಮೂರನೇ ಗೆಲುವು ದಾಖಲಿಸಿದ ರೋಹಿತ್ ಶರ್ಮಾ ಪಡೆ

ಮಳೆಯ ಅಡಚಣೆಯ ಹೊರತಾಗಿಯೂ ರೋಚಕ ಪಂದ್ಯಕ್ಕೆ ಸಾಕ್ಷಿಯಾದ ಅಡಿಲೇಡ್ ಓವಲ್ ಮೈದಾನ

T20 World Cup Team India Thriller victory over Bangladesh and Close to Semis spot kvn

ಅಡಿಲೇಡ್‌(ನ.02): ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಟೀಂ ಇಂಡಿಯಾ 5 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಸೂಪರ್ 12 ಹಂತದ ಗ್ರೂಪ್ 2 ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಿದ್ದು ಸೆಮೀಸ್‌ಗೆ ಮತ್ತಷ್ಟು ಹತ್ತಿರವಾಗಿದೆ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 184 ರನ್ ಕಲೆಹಾಕುವ ಮೂಲಕ ಬಾಂಗ್ಲಾದೇಶಕ್ಕೆ ಸವಾಲಿನ ಗುರಿ ನೀಡಿತು. ಮಳೆಯಿಂದಾಗಿ 151 ರನ್‌ಗಳ ಸವಾಲಿನ ಗುರಿ ಪಡೆದ ಬಾಂಗ್ಲಾದೇಶ ತಂಡವು ದಿಟ್ಟ ಹೋರಾಟ ನಡೆಸಿತಾದರೂ 6 ವಿಕೆಟ್ ಕಳೆದುಕೊಂಡು 145 ರನ್ ಬಾರಿಸುವ ಮೂಲಕ ರೋಚಕ ಸೋಲು ಅನುಭವಿಸಿತು. 

ಭಾರತ ನೀಡಿದ್ದ ಕಠಿಣ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಪವರ್‌ ಪ್ಲೇನಲ್ಲೇ ಮೊದಲ ವಿಕೆಟ್‌ಗೆ 60 ರನ್‌ಗಳ ಜತೆಯಾಟವಾಡುವ ಮೂಲಕ ಭರ್ಜರಿ ಆರಂಭ ಒದಗಿಸಿಕೊಟ್ಟರು. ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ಲಿಟನ್ ದಾಸ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಭಾರತೀಯ ಬೌಲರ್‌ಗಳು ಕಂಗಾಲಾಗುವಂತೆ ಮಾಡಿದರು. 7 ಓವರ್ ಅಂತ್ಯದ ವೇಳೆಗೆ ಬಾಂಗ್ಲಾದೇಶ ತಂಡವು ವಿಕೆಟ್‌ ನಷ್ಟವಿಲ್ಲದೇ 66 ರನ್‌ ಗಳಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. 

ಪರಿಷ್ಕೃತ ಗುರಿ ಪಡೆದ ಬಾಂಗ್ಲಾಗೆ ಟೀಂ ಇಂಡಿಯಾ ಶಾಕ್: 20 ನಿಮಿಷಗಳ ಕಾಲ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಬಾಂಗ್ಲಾದೇಶ ತಂಡಕ್ಕೆ ಗೆಲ್ಲಲು 16 ಓವರ್‌ಗಳಲ್ಲಿ 151 ರನ್‌ಗಳ ಗುರಿ ನೀಡಲಾಯಿತು. ಇದರ ಲಾಭ ಪಡೆದ ಟೀಂ ಇಂಡಿಯಾ, ಆಕ್ರಮಣಕಾರಿಯಾಟದ ಮೂಲಕ ಬಾಂಗ್ಲಾದೇಶದ ಮೇಲೆ ಒತ್ತಡ ಹೇರಲಾರಂಭಿಸಿತು. 

ಪರಿಷ್ಕೃತ ಗುರಿ ಪಡೆದು ಕ್ರೀಸ್‌ಗಿಳಿದ ಬಾಂಗ್ಲಾದೇಶ ತಂಡವು ಎರಡನೇ ಎಸೆತದಲ್ಲೇ ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಲಿಟನ್ ದಾಸ್ ವಿಕೆಟ್ ಕಳೆದುಕೊಂಡಿತು. ಲಿಟನ್ ದಾಸ್ ಎರಡನೇ ರನ್ ಓಡುವ ಪ್ರಯತ್ನದಲ್ಲಿ ರಾಹುಲ್ ಎಸೆದ ಡೈರೆಕ್ಟ್‌ ಹಿಟ್‌ನಿಂದಾಗಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ಲಿಟನ್ ದಾಸ್ ಕೇವಲ 27 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 60 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಲಿಟನ್ ದಾಸ್ ರನೌಟ್ ಪಂದ್ಯದ ದಿಕ್ಕನ್ನೇ ಬದಲಿಸಿಬಿಟ್ಟಿತು. ಲಿಟನ್ ದಾಸ್ ವಿಕೆಟ್ ಪತನದ ಬಳಿಕ ಬಾಂಗ್ಲಾದೇಶ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು.

T20 World Cup ಬಾಂಗ್ಲಾದೇಶಕ್ಕೆ ಪರಿಷ್ಕೃತ ಗುರಿ..! ಪಂದ್ಯ ಕೆಲವೇ ಕ್ಷಣಗಣಗಳಲ್ಲಿ ಆರಂಭ

ಇನ್ನು 10ನೇ ಓವರ್‌ನ ಮೊದಲ ಎಸೆತದಲ್ಲಿ ಶಾಂಟೋ ಅವರನ್ನು ಬಲಿಪಡೆಯುವಲ್ಲಿ ವೇಗಿ ಮೊಹಮ್ಮದ್ ಶಮಿ ಯಶಸ್ವಿಯಾದರು. ಇನ್ನು 12ನೇ ಓವರ್‌ನಲ್ಲಿ ಆರ್ಶದೀಪ್ ಸಿಂಗ್, ಆಫಿಫ್ ಹೊಸೈನ್ ಹಾಗೂ ಶಕೀಬ್ ಅಲ್ ಹಸನ್ ಅವರನ್ನು ಬಲಿಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಇದರ ಬೆನ್ನಲ್ಲೇ 13ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ, ಯಾಸಿರ್ ಅಲಿ ಹಾಗೂ ಮೊಸದೆಕ್ ಹೊಸೈನ್ ಅವರನ್ನು ಬಲಿಪಡೆಯುವ ಮೂಲಕ ಭಾರತಕ್ಕೆ ಮೇಲುಗೈ ತಂದುಕೊಟ್ಟರು

ಕೊನೆಯ ಎರಡು ಓವರ್‌ಗಳಲ್ಲಿ ಬಾಂಗ್ಲಾದೇಶ ಗೆಲ್ಲಲು 31 ರನ್‌ಗಳ ಅಗತ್ಯವಿತ್ತು. 15ನೇ ಓವರ್ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ 11 ರನ್ ಬಿಟ್ಟುಕೊಟ್ಟರು. ಹೀಗಾಗಿ ಕೊನೆಯ ಓವರ್‌ನಲ್ಲಿ ಬಾಂಗ್ಲಾಗೆ ಗೆಲ್ಲಲು 20 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತುಕೊಂಡ ಆರ್ಶದೀಪ್ ಸಿಂಗ್ ಮೊದಲ ಎಸೆತದಲ್ಲಿ ಒಂದು ರನ್ ನೀಡಿದರು. ಆದರೆ ಎರಡನೇ ಎಸೆತದಲ್ಲಿ ನೂರುಲ್ ಹಸನ್ ಡೀಪ್ ಸ್ಕ್ವೇರ್‌ನತ್ತ ಸಿಕ್ಸರ್ ಚಚ್ಚಿದರು. ಇನ್ನು ಮೂರನೇ ಎಸೆತದಲ್ಲಿ ಆರ್ಶದೀಪ್ ಸಿಂಗ್ ಯಾವುದೇ ರನ್ ನೀಡಲಿಲ್ಲ. ಹೀಗಾಗಿ ಕೊನೆಯ 3 ಎಸೆತಗಳಲ್ಲಿ 13 ರನ್‌ಗಳ ಅಗತ್ಯವಿತ್ತು. ನಾಲ್ಕನೇ ಎಸೆತದಲ್ಲಿ ನೂರುಲ್ ಹಸನ್ 2 ರನ್ ಗಳಿಸಿದರು. ಕೊನೆತ ಎರಡು ಎಸೆತದಲ್ಲಿ ಬಾಂಗ್ಲಾಗೆ ಗೆಲ್ಲಲು 11 ರನ್‌ಗಳ ಅಗತ್ಯವಿತ್ತು. ಆದರೆ 5ನೇ ಎಸೆತದಲ್ಲಿ ಹಸನ್ ಬೌಂಡರಿ ಬಾರಿಸಿದರು. ಹೀಗಾಗಿ ಗೆಲ್ಲಲು ಬಾಂಗ್ಲಾಗೆ 7 ರನ್‌ಗಳ ಅಗತ್ಯವಿತ್ತು. ಆದರೆ ಕೊನೆಯ ಎಸೆತದಲ್ಲಿ ಕೇವಲ ಒಂದು ರನ್ ನೀಡುವ ಮೂಲಕ ಭಾರತಕ್ಕೆ ರೋಚಕ ಜಯ ತಂದುಕೊಟ್ಟರು.

ಭಾರತ ತಂಡದ ಪರ ಹಾರ್ದಿಕ್ ಪಾಂಡ್ಯ ಹಾಗೂ ಆರ್ಶದೀಪ್ ಸಿಂಗ್ ತಲಾ 2 ವಿಕೆಟ್ ಪಡೆದರೆ, ಅನುಭವಿ ವೇಗಿ ಮೊಹಮ್ಮದ್ ಶಮಿ ಒಂದು ವಿಕೆಟ್ ಕಬಳಿಸಿ ಮಿಂಚಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಕೆ ಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಜೋಡಿ 67 ರನ್‌ಗಳ ಜತೆಯಾಟವಾಡುವ ಮೂಲಕ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದರು. ಇನ್ನು ಮೊದಲ 3 ಪಂದ್ಯಗಳಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದ ಕೆ ಎಲ್ ರಾಹುಲ್, ಬಾಂಗ್ಲಾದೇಶ ವಿರುದ್ದ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಆಕರ್ಷಕ ಅರ್ಧಶತಕ ಚಚ್ಚಿದರು. ಕೇವಲ 32 ಎಸೆತಗಳನ್ನು ಎದುರಿಸಿದ ಕೆ ಎಲ್ ರಾಹುಲ್ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 50 ರನ್ ಬಾರಿಸಿ ಶಕೀಬ್ ಅಲ್‌ ಹಸನ್‌ಗೆ ವಿಕೆಟ್ ಒಪ್ಪಿಸಿದರು.

ಅಡಿಲೇಡ್‌ನಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ವಿರಾಟ್ ಕೊಹ್ಲಿ, ಅಡಿಲೇಡ್‌ನಲ್ಲಿ ಮತ್ತೊಮ್ಮೆ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ವಿರಾಟ್ ಕೊಹ್ಲಿ 16 ರನ್ ಬಾರಿಸುತ್ತಿದ್ದಂತೆಯೇ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ ಆಗಿ ಹೊರಹೊಮ್ಮಿದರು. ಈ ಮೊದಲು ಶ್ರೀಲಂಕಾದ ಮಾಜಿ ನಾಯಕ ಮಹೆಲಾ ಜಯವರ್ಧನೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ 1,016 ರನ್ ಬಾರಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರು. ಆದರೆ ಇದೀಗ ಜಯವರ್ಧನೆ ದಾಖಲೆ ಹಿಂದಿಕ್ಕುವಲ್ಲಿ ಯಶಸ್ವಿಯಾದರು. ವಿರಾಟ್ ಕೊಹ್ಲಿ 37 ಎಸೆತಗಳನ್ನು ಎದುರಿಸಿ 50 ರನ್ ಪೂರೈಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಕೊಹ್ಲಿ 44 ಎಸೆತಗಳಲ್ಲಿ ಅಜೇಯ 64 ರನ್ ಬಾರಿಸಿದರು. 

ಇನ್ನು  ಕೊಹ್ಲಿ ಜತೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 16 ಎಸೆತಗಳಲ್ಲಿ 4 ಬೌಂಡರಿ ಸಹಿತ ಚುರುಕಿನ 30 ರನ್ ಬಾರಿಸುವ ಮೂಲಕ ಟೀಂ ಇಂಡಿಯಾ ಸವಾಲಿನ ಮೊತ್ತ ಕಲೆಹಾಕಲು ನೆರವಾದರು,

ಬಾಂಗ್ಲಾದೇಶ ತಂಡದ ಪರ ಟಸ್ಕಿನ್ ಅಹಮ್ಮದ್ 4 ಓವರ್ ಬೌಲಿಂಗ್ ಮಾಡಿ ಕೇವಲ 15 ರನ್ ನೀಡಿದರಾದರೂ ಯಾವುದೇ ವಿಕೆಟ್ ಕಬಳಿಸಲು ಯಶಸ್ವಿಯಾಗಲಿಲ್ಲ. ಆದರೆ ಹಸನ್ ಮೊಹಮೂದ್ 47 ರನ್ ನೀಡಿ 3 ವಿಕೆಟ್ ಪಡೆದರೆ, ನಾಯಕ ಶಕೀಬ್ ಅಲ್ ಹಸನ್ 33 ರನ್ ನೀಡಿ 2 ವಿಕೆಟ್ ಪಡೆದರು.

Latest Videos
Follow Us:
Download App:
  • android
  • ios