Asianet Suvarna News Asianet Suvarna News

Pink Ball Test: ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಡೇಲ್ ಸ್ಟೇನ್ ದಾಖಲೆ ಮುರಿದ ರವಿಚಂದ್ರನ್ ಅಶ್ವಿನ್‌

* ಪಿಂಕ್‌ ಬಾಲ್ ಟೆಸ್ಟ್‌ನಲ್ಲಿ ದಾಖಲೆ ಬರೆದ ರವಿಚಂದ್ರನ್ ಅಶ್ವಿನ್‌

* ಮೂರನೇ ದಿನದಾಟದಲ್ಲಿ ಲಂಕಾ ತಂಡದಿಂದ ದಿಟ್ಟ ಪ್ರತಿರೋಧ

* ಡೇಲ್ ಸ್ಟೇನ್ ದಾಖಲೆ ಮುರಿದ ರವಿಚಂದ್ರನ್ ಅಶ್ವಿನ್

Pink Ball Test Ravichandran Ashwin becomes 8th highest wicket taker in Test cricket history in Bengaluru Test kvn
Author
Bengaluru, First Published Mar 14, 2022, 4:19 PM IST

ಬೆಂಗಳೂರು(ಮಾ.14): ಭಾರತ ಹಾಗೂ ಶ್ರೀಲಂಕಾ (India vs Sri Lanka) ತಂಡಗಳ ನಡುವಿನ ಪಿಂಕ್ ಬಾಲ್ ಟೆಸ್ಟ್ (Pink Ball Test) ಪಂದ್ಯದ ಮೂರನೇ ದಿನದಾಟದಲ್ಲಿ ಪ್ರವಾಸಿ ಶ್ರೀಲಂಕಾ ತಂಡವು ದಿಟ್ಟ ಪ್ರತಿರೋಧ ನೀಡುತ್ತಿದೆ. ಮೂರನೇ ದಿನದಾಟದ ಚಹಾ ವಿರಾಮದ ವೇಳೆಗೆ ಶ್ರೀಲಂಕಾ ತಂಡವು 4 ವಿಕೆಟ್ ಕಳೆದುಕೊಂಡು 151 ರನ್ ಬಾರಿಸಿದ್ದು, ಇನ್ನೂ 296 ರನ್‌ಗಳ ಹಿನ್ನಡೆಯಲ್ಲಿದೆ. ಮೂರನೇ ದಿನದಾಟದಲ್ಲಿ ಅಶ್ವಿನ್ 2 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ (Ravindra Jadeja) ಒಂದು ವಿಕೆಟ್ ಪಡೆದಿದ್ದಾರೆ. ರವಿಚಂದ್ರನ್ ಅಶ್ವಿನ್ (Ravi Chandran) ಎರಡು ವಿಕೆಟ್ ಕಬಳಿಸುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದವರ ಪಟ್ಟಿಯಲ್ಲಿ ಡೇಲ್ ಸ್ಟೇನ್ ಅವರನ್ನು ಹಿಂದಿಕ್ಕಿ 8ನೇ ಸ್ಥಾನಕ್ಕೇರಿದ್ದಾರೆ.

ಇಲ್ಲಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಎರಡನೇ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 28 ರನ್ ಬಾರಿಸಿತ್ತು. ಎರಡನೇ ವಿಕೆಟ್‌ಗೆ ದೀಮುತ್ ಕರುಣರತ್ನೆ ಹಾಗೂ ಕುಸಾಲ್ ಮೆಂಡೀಸ್ 97 ರನ್‌ಗಳ ಜತೆಯಾಟವಾಡುವ ಮೂಲಕ ಲಂಕಾ ತಂಡಕ್ಕೆ ಉತ್ತಮ ಆರಂಭವನ್ನೇ ಒದಗಿಸಿಕೊಟ್ಟರು. ಎರಡನೇ ದಿನದಾಟದಲ್ಲಿ  ಒಟ್ಟು 13 ವಿಕೆಟ್‌ಗಳು ಪತನವಾಗಿದ್ದವು. ಸಾಕಷ್ಟು ತಿರುವು ಪಡೆಯುತ್ತಿರುವ ಪಿಚ್‌ನಲ್ಲಿ ಲಂಕಾದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಎಚ್ಚರಿಕೆಯ ಬ್ಯಾಟಿಂಗ್ ನಡೆಸುವ ಮೂಲಕ ಭಾರತೀಯ ಬೌಲರ್‌ಗಳನ್ನು ಕಾಡಿದರು. ಚುರುಕಿನ ಬ್ಯಾಟಿಂಗ್ ನಡೆಸಿದ ಕುಸಾಲ್ ಮೆಂಡೀಸ್ 60 ಎಸೆತಗಳನ್ನು ಎದುರಿಸಿ 54 ರನ್ ಬಾರಿಸಿ ರವಿಚಂದ್ರನ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಇದರ ಬೆನ್ನಲ್ಲೇ ಏಂಜಲೋ ಮ್ಯಾಥ್ಯೂಸ್ ಕೇವಲ ಒಂದು ರನ್ ಬಾರಿಸಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು. 

ಡೇಲ್ ಸ್ಟೇನ್ ದಾಖಲೆ ಅಳಿಸಿಹಾಕಿದ ಅಶ್ವಿನ್: ಟೀಂ ಇಂಡಿಯಾ (Team India) ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎರಡನೇ ಇನಿಂಗ್ಸ್‌ನಲ್ಲಿ ಧನಂಜಯ ಡಿ ಸಿಲ್ವಾ ಅವರನ್ನು ಪೆವಿಲಿಯನ್ನಿಗಟ್ಟುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಡೇಲ್ ಸ್ಟೇನ್ ಅವರನ್ನು ಹಿಂದಿಕ್ಕಿ 8ನೇ ಸ್ಥಾನಕ್ಕೇರಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್‌ (Dale Steyn) 439 ವಿಕೆಟ್ ಕಬಳಿಸಿದ್ದರು. ಇದೀಗ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 440 ವಿಕೆಟ್ ಕಬಳಿಸಿದಂತಾಗಿದೆ. ಮೊಹಾಲಿ ಟೆಸ್ಟ್ ಪಂದ್ಯದ ವೇಳೆ ಕಪಿಲ್ ದೇವ್ ಹೆಸರಿನಲ್ಲಿದ್ದ 434 ವಿಕೆಟ್‌ಗಳ ದಾಖಲೆಯನ್ನು ಹಿಂದಿಕ್ಕಿ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಪರ ಗರಿಷ್ಠ ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿದ್ದರು. ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎನ್ನುವ ದಾಖಲೆ ಕನ್ನಡಿಗ ಅನಿಲ್ ಕುಂಬ್ಳೆ ಹೆಸರಿನಲ್ಲಿದೆ. ಕುಂಬ್ಳೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 619 ವಿಕೆಟ್ ಪಡೆದಿದ್ದಾರೆ.

ಆಕರ್ಷಕ ಅರ್ಧಶತಕ ಬಾರಿಸಿದ ನಾಯಕ ಕರುಣರತ್ನೆ: ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಖಾತೆ ತೆರೆಯುವ ಮುನ್ನವೇ ಲಂಕಾ ತಂಡವು ಲಹಿರು ತಿರುಮನ್ನೆ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿತ್ತು. ಆದರೆ ಎರಡನೇ ವಿಕೆಟ್‌ಗೆ ನಾಯಕ ಕರುಣರತ್ನೆ ಹಾಗೂ ಕುಸಾಲ್ ಮೆಂಡೀಸ್ ನೆಲಕಚ್ಚಿ ಆಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಅದರಲ್ಲೂ ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸುತ್ತಿರುವ ನಾಯಕ ದೀಮುತ್ ಕರುಣರತ್ನೆ ಅಜೇಯ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಲು ಯತ್ನಿಸುತ್ತಿದ್ದಾರೆ.

Follow Us:
Download App:
  • android
  • ios