ಭಾರತ ಟೆಸ್ಟ್ ತಂಡದಿಂದ ಹೊರಬಿದ್ದ ಬೆನ್ನಲ್ಲೇ ವಿಡಿಯೋ ಸಂದೇಶ ರವಾನಿಸಿದ ಚೇತೇಶ್ವರ್ ಪೂಜಾರ..!
ವೆಸ್ಟ್ ಇಂಡೀಸ್ ಸರಣಿಗೆ ಭಾರತ ತಂಡದಿಂದ ಹೊರಬಿದ್ದ ಚೇತೇಶ್ವರ್ ಪೂಜಾರ
ಟ್ವಿಟರ್‌ನಲ್ಲಿ ಸೈಲೆಂಟ್ ವಿಡಿಯೋ ಹಂಚಿಕೊಂಡ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ
ಆದಷ್ಟು ಬೇಗ ಕಮ್‌ಬ್ಯಾಕ್ ಮಾಡುವಂತಾಗಲಿ ಎನ್ನುವುದು ಪೂಜಾರ ಅಭಿಮಾನಿಗಳ ಹಾರೈಕೆ
ನವದೆಹಲಿ(ಜೂ.25): ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡದಿಂದ ಕೈಬಿಟ್ಟಿದೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹೀಗಿರುವಾಗಲೇ ಸೌರಾಷ್ಟ್ರ ಮೂಲದ ಬ್ಯಾಟರ್ ಚೇತೇಶ್ವರ್ ಪೂಜಾರ, ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋ ಸಂದೇಶ ರವಾನಿಸಿ ಗಮನ ಸೆಳೆದಿದ್ದಾರೆ.
ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ನಲ್ಲಿ ಭಾರತ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಮಹತ್ವದ ಸರಣಿಯಿಂದ ಚೇತೇಶ್ವರ್ ಪೂಜಾರ ಅವರನ್ನು ಕೈಬಿಟ್ಟ ಆಯ್ಕೆ ಸಮಿತಿ ನಿರ್ಧಾರದ ಕುರಿತಂತೆ ಈಗಾಗಲೇ ವ್ಯಾಪಕ ಚರ್ಚೆ ಆರಂಭವಾಗಿದೆ. ಇನ್ನು ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಈ ಕುರಿತಂತೆ ಪೂಜಾರ ಅವರನ್ನು ಹರಕೆಯ ಕುರಿಯನ್ನಾಗಿ ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
"ಆತನನ್ನು ಯಾಕೆ ತಂಡದಿಂದ ಕೈಬಿಡಲಾಗಿದೆ? ನಮ್ಮ ಬ್ಯಾಟಿಂಗ್ ವೈಫಲ್ಯಕ್ಕಾಗಿ ಆತನನ್ನು ಏಕೆ ಹರಕೆಯ ಕುರಿಯನ್ನಾಗಿ ಮಾಡಲಾಗಿದೆ. ಅವರೊಬ್ಬ ಭಾರತ ಕ್ರಿಕೆಟ್ ತಂಡದ ನಂಬಿಗಸ್ಥ ಸೇವಕರಾಗಿದ್ದಾರೆ. ಆತ ನಂಬಿಗಸ್ಥ ಆಟಗಾರನೂ ಹೌದು ಸಾಧಕನೂ ಹೌದು. ಆದರೆ ಆತನನ್ನು ತಂಡದಿಂದ ಕೈಬಿಟ್ಟಾಗ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಮಂದಿ ಫಾಲೋವರ್ಸ್ ಇಲ್ಲ. ಆ ಕಾರಣಕ್ಕಾಗಿ ಅವರನ್ನು ತಂಡದಿಂದ ಕೈಬಿಟ್ರಾ?. ಅವರನ್ನೇಕೆ ತಂಡದಿಂದ ಕೈಬಿಟ್ಟಿರಿ ಎನ್ನುವುದು ತರ್ಕಕ್ಕೆ ಸಿಗುತ್ತಿಲ್ಲ. ಆತನನ್ನು ತಂಡದಿಂದ ಕೈಬಿಡಲು ಹಾಗೂ ಇನ್ನುಳಿದ ವೈಫಲ್ಯತೆ ಅನುಭವಿಸಿರುವ ಬ್ಯಾಟರ್‌ಗಳು ತಂಡದಲ್ಲಿರುವ ನೀವು ಮಾಡಿರುವ ಮಾನದಂಡವಾದರೂ ಏನು?. ಇತ್ತೀಚಿಗಿನ ದಿನಗಳಲ್ಲಿ ಯಾವುದೇ ಮಾಧ್ಯಮ ಸಂವಾದ ಅಥವಾ ಪತ್ರಿಕಾಗೋಷ್ಟಿಗಳು ಯಾಕಾಗಿ ನಡೆಯುತ್ತಿಲ್ಲವೆಂದು ನನಗಂತೂ ಅರ್ಥವಾಗುತ್ತಿಲ್ಲ ಎಂದು ಸ್ಪೋರ್ಟ್ಸ್ ಟುಡೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಚೇತೇಶ್ವರ್ ಪೂಜಾರರನ್ನು ಹರಕೆ ಕುರಿ ಮಾಡಲಾಗಿದೆ: ಸುನಿಲ್ ಗವಾಸ್ಕರ್ ಆಕ್ರೋಶ
"ಅವರು ಕೌಂಟಿ ಕ್ರಿಕೆಟ್ ಆಡುತ್ತಿದ್ದರು. ಹೀಗಾಗಿ ಅವರು ರೆಡ್ ಬಾಲ್ ಕ್ರಿಕೆಟ್ ಬಗ್ಗೆ ಸಾಕಷ್ಟು ತಿಳಿದಿದೆ. ಈಗಂತೂ ಕೆಲವರು 39-40 ವರ್ಷದವರೆಗೂ ಕ್ರಿಕೆಟ್ ಆಡುತ್ತಾ ಬಂದಿದ್ದಾರೆ. ಎಲ್ಲಿಯವರೆಗೆ ನೀವು ರನ್ ಗಳಿಸುತ್ತೀರೋ ಅಲ್ಲಿಯವರೆಗೆ ನೀವು ಆಡಬಹುದು. ವಯಸ್ಸು ಮುಖ್ಯವಾಗುತ್ತದೆ ಎಂದು ನನಗೇನು ಅನಿಸುತ್ತಿಲ್ಲ. ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಅಜಿಂಕ್ಯ ರಹಾನೆ ಹೊರತುಪಡಿಸಿದರೆ, ಉಳಿದೆಲ್ಲಾ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದಾರೆ. ಈಗ ಚೇತೇಶ್ವರ್ ಪೂಜಾರ ಅವರನ್ನು ಕೈಬಿಟ್ಟಿದ್ದೇಕೆ ಎನ್ನುವುದನ್ನು ಆಯ್ಕೆ ಸಮಿತಿ ಮುಖ್ಯಸ್ಥರು ವಿವರಿಸಬೇಕು ಎಂದು ಸನ್ನಿ ಆಗ್ರಹಿಸಿದ್ದರು
ಲಂಡನ್‌ನ ದಿ ಓವಲ್ ಮೈದಾನದಲ್ಲಿ ನಡೆದ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಚೇತೇಶ್ವರ್ ಪೂಜಾರ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಚೇತೇಶ್ವರ್ ಪೂಜಾರ ಮೊದಲ ಇನಿಂಗ್ಸ್‌ನಲ್ಲಿ 14 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 27 ರನ್ ಬಾರಿಸಿದ್ದರು
ಇದೀಗ ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಚೇತೇಶ್ವರ್ ಪೂಜಾರ, ಕ್ರಿಕೆಟ್ ಅಭ್ಯಾಸ ನಡೆಸುತ್ತಿರುವುದು ಕಂಡು ಬಂದಿದೆ. ಇದರ ಜತೆಗೆ ಕ್ರಿಕೆಟ್ ಮೇಲಿನ ಪ್ರೀತಿ ತಮಗೆ ಇನ್ನೂ ಕಮ್ಮಿಯಾಗಿಲ್ಲ ಎಂಬರ್ಥದ ಎಮೋಜಿಯನ್ನು ಪೂಜಾರ ಶೇರ್ ಮಾಡಿದ್ದಾರೆ.
ಚೇತೇಶ್ವರ್ ಪೂಜಾರ ಆದಷ್ಟು ಬೇಗ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ.
ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಶುಭ್‌ಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ(ಉಪನಾಯಕ), ಕೆ ಎಸ್ ಭರತ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಯದೇವ್ ಉನಾದ್ಕತ್, ನವದೀಪ್ ಸೈನಿ.