ವಿಂಡೀಸ್ ಎದುರಿನ ಟೆಸ್ಟ್ ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟಟೆಸ್ಟ್ ತಂಡದಿಂದ ಹೊರಬಿದ್ದ ಚೇತೇಶ್ವರ್ ಪೂಜಾರಪೂಜಾರರನ್ನು ಹರಕೆಯ ಕುರಿ ಮಾಡಲಾಗಿದೆ ಎಂದು ಸುನಿಲ್ ಗವಾಸ್ಕರ್

ನವದೆಹಲಿ(ಜೂ.24): ವೆಸ್ಟ್ ಇಂಡೀಸ್ ವಿರುದ್ದ ಜುಲೈ 12ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿಯು 16 ಆಟಗಾರರನ್ನೊಳಗೊಂಡ ಭಾರತ ತಂಡವನ್ನು ಪ್ರಕಟಿಸಿದ್ದು, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಅವರನ್ನು ತಂಡದಿಂದ ಕೈಬಿಡಲಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯವನ್ನು ಮುಚ್ಚಿಡಲು ಚೇತೇಶ್ವರ್ ಪೂಜಾರ ಅವರನ್ನು ಹರಕೆಯ ಕುರಿಯನ್ನಾಗಿ ಮಾಡಲಾಗಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ವಿರುದ್ದ ಸುನಿಲ್ ಗವಾಸ್ಕರ್ ಆಕ್ರೋಶ ಹೊರಹಾಕಿದ್ದಾರೆ.

ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿ ಭಾರತ ತಂಡವು ವಿಂಡೀಸ್ ಪ್ರವಾಸದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಈ ಸರಣಿಯಿಂದ ಸೌರಾಷ್ಟ್ರ ಬ್ಯಾಟರ್ ಚೇತೇಶ್ವರ್ ಪೂಜಾರ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕಳೆದೊಂದು ದಶಕದಿಂದ ಭಾರತ ಟೆಸ್ಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಚೇತೇಶ್ವರ್ ಪೂಜಾರ ಬದಲಿಗೆ ವಿಂಡೀಸ್ ಎದುರಿನ ಟೆಸ್ಟ್ ಸರಣಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಯುವ ಪ್ರತಿಭೆ ಯಶಸ್ವಿ ಜೈಸ್ವಾಲ್ ಸ್ಥಾನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ಬಿಸಿಸಿಐ ಆಯ್ಕೆ ಸಮಿತಿಯು ಚೇತೇಶ್ವರ್ ಪೂಜಾರ ಅವರನ್ನು ಟೆಸ್ಟ್ ತಂಡದಿಂದ ಕೈಬಿಟ್ಟಿದ್ದರ ಕುರಿತಂತೆ ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ತಂಡವನ್ನು ಆಯ್ಕೆ ಮಾಡಿದ ಬಳಿಕ ಈ ಕುರಿತಂತೆ ಆಯ್ಕೆ ಸಮಿತಿ ಯಾವ ಕಾರಣಕ್ಕಾಗಿ ಪತ್ರಿಕಾಘೋಷ್ಟಿ ನಡೆಸಲಿಲ್ಲ ಎಂದು ಸನ್ನಿ ಪ್ರಶ್ನಿಸಿದ್ದಾರೆ.

IPL ಮಾನದಂಡವಾದರೇ, ಯುವಕರು ರಣಜಿ ಯಾಕೆ ಆಡಬೇಕು? ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆಗೆ ಸನ್ನಿ ಸಿಡಿಮಿಡಿ

"ಆತನನ್ನು ಯಾಕೆ ತಂಡದಿಂದ ಕೈಬಿಡಲಾಗಿದೆ? ನಮ್ಮ ಬ್ಯಾಟಿಂಗ್ ವೈಫಲ್ಯಕ್ಕಾಗಿ ಆತನನ್ನು ಏಕೆ ಹರಕೆಯ ಕುರಿಯನ್ನಾಗಿ ಮಾಡಲಾಗಿದೆ. ಅವರೊಬ್ಬ ಭಾರತ ಕ್ರಿಕೆಟ್‌ ತಂಡದ ನಂಬಿಗಸ್ಥ ಸೇವಕರಾಗಿದ್ದಾರೆ. ಆತ ನಂಬಿಗಸ್ಥ ಆಟಗಾರನೂ ಹೌದು ಸಾಧಕನೂ ಹೌದು. ಆದರೆ ಆತನನ್ನು ತಂಡದಿಂದ ಕೈಬಿಟ್ಟಾಗ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಮಂದಿ ಫಾಲೋವರ್ಸ್‌ ಇಲ್ಲ. ಆ ಕಾರಣಕ್ಕಾಗಿ ಅವರನ್ನು ತಂಡದಿಂದ ಕೈಬಿಟ್ರಾ?. ಅವರನ್ನೇಕೆ ತಂಡದಿಂದ ಕೈಬಿಟ್ಟಿರಿ ಎನ್ನುವುದು ತರ್ಕಕ್ಕೆ ಸಿಗುತ್ತಿಲ್ಲ. ಆತನನ್ನು ತಂಡದಿಂದ ಕೈಬಿಡಲು ಹಾಗೂ ಇನ್ನುಳಿದ ವೈಫಲ್ಯತೆ ಅನುಭವಿಸಿರುವ ಬ್ಯಾಟರ್‌ಗಳು ತಂಡದಲ್ಲಿರುವ ನೀವು ಮಾಡಿರುವ ಮಾನದಂಡವಾದರೂ ಏನು?. ಇತ್ತೀಚಿಗಿನ ದಿನಗಳಲ್ಲಿ ಯಾವುದೇ ಮಾಧ್ಯಮ ಸಂವಾದ ಅಥವಾ ಪತ್ರಿಕಾಗೋಷ್ಟಿಗಳು ಯಾಕಾಗಿ ನಡೆಯುತ್ತಿಲ್ಲವೆಂದು ನನಗಂತೂ ಅರ್ಥವಾಗುತ್ತಿಲ್ಲ ಎಂದು ಸ್ಪೋರ್ಟ್ಸ್‌ ಟುಡೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ

ಚೇತೇಶ್ವರ್ ಪೂಜಾರ ಅವರನ್ನು ಕೇವಲ ವಯಸ್ಸಿನ ಕಾರಣದಿಂದಾಗಿ ಭಾರತ ಟೆಸ್ಟ್ ತಂಡದಿಂದ ಕೈಬಿಡಬಾರದು ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಕೇವಲ ಚೇತೇಶ್ವರ್ ಪೂಜಾರ ಮಾತ್ರವೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿಲ್ಲ ಎಂದು ಹೇಳಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನ ಮೊದಲ ಇನಿಂಗ್ಸ್‌ನಲ್ಲಿ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ತಂಡ 71 ರನ್‌ ಗಳಿಸುವಷ್ಟರಲ್ಲಿ ಪೆವಿಲಿಯನ್ ಸೇರಿದ್ದರು. ಆಸ್ಟ್ರೇಲಿಯಾ ಎದುರಿನ ಟೆಸ್ಟ್ ವಿಶ್ವಕಪ್‌ನಲ್ಲಿ ಚೇತೇಶ್ವರ್ ಪೂಜಾರ ಮೊದಲ ಇನಿಂಗ್ಸ್‌ನಲ್ಲಿ 14 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 27 ರನ್ ಬಾರಿಸಿದ್ದರು. ಟೆಸ್ಟ್ ವಿಶ್ವಕಪ್‌ನಲ್ಲಿ ಅಜಿಂಕ್ಯ ರಹಾನೆಯೊಬ್ಬರೇ 50+ ರನ್ ಬಾರಿಸುವಲ್ಲಿ ಯಶಸ್ವಿಯಾಗಿದ್ದರು.

ಕೌಂಟಿ ಕ್ರಿಕೆಟ್ ಆಡಲು ಲಂಡನ್‌ಗೆ ಬಂದಿಳಿದ ಸೈನಿಗೆ ಸರ್ಪ್ರೈಸ್‌ ಕೊಟ್ಟ ಬಿಸಿಸಿಐ ಆಯ್ಕೆ ಸಮಿತಿ..!

"ಅವರು ಕೌಂಟಿ ಕ್ರಿಕೆಟ್‌ ಆಡುತ್ತಿದ್ದರು. ಹೀಗಾಗಿ ಅವರು ರೆಡ್‌ ಬಾಲ್‌ ಕ್ರಿಕೆಟ್‌ ಬಗ್ಗೆ ಸಾಕಷ್ಟು ತಿಳಿದಿದೆ. ಈಗಂತೂ ಕೆಲವರು 39-40 ವರ್ಷದವರೆಗೂ ಕ್ರಿಕೆಟ್ ಆಡುತ್ತಾ ಬಂದಿದ್ದಾರೆ. ಎಲ್ಲಿಯವರೆಗೆ ನೀವು ರನ್ ಗಳಿಸುತ್ತೀರೋ ಅಲ್ಲಿಯವರೆಗೆ ನೀವು ಆಡಬಹುದು. ವಯಸ್ಸು ಮುಖ್ಯವಾಗುತ್ತದೆ ಎಂದು ನನಗೇನು ಅನಿಸುತ್ತಿಲ್ಲ. ಟೆಸ್ಟ್‌ ವಿಶ್ವಕಪ್‌ ಫೈನಲ್‌ನಲ್ಲಿ ಅಜಿಂಕ್ಯ ರಹಾನೆ ಹೊರತುಪಡಿಸಿದರೆ, ಉಳಿದೆಲ್ಲಾ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದಾರೆ. ಈಗ ಚೇತೇಶ್ವರ್ ಪೂಜಾರ ಅವರನ್ನು ಕೈಬಿಟ್ಟಿದ್ದೇಕೆ ಎನ್ನುವುದನ್ನು ಆಯ್ಕೆ ಸಮಿತಿ ಮುಖ್ಯಸ್ಥರು ವಿವರಿಸಬೇಕು ಎಂದು ಸನ್ನಿ ಆಗ್ರಹಿಸಿದ್ದಾರೆ.