Asianet Suvarna News Asianet Suvarna News

ಮುಂಬೈನಲ್ಲಿ ಭಾರತ vs ಕಿವೀಸ್‌ ಸೆಮೀಸ್ ಕದನಕ್ಕೆ ಕ್ಷಣಗಣನೆ..!

ಟೂರ್ನಿಯುದ್ದಕ್ಕೂ ಅಧಿಪತ್ಯ ಸಾಧಿಸಿರುವ ಟೀಂ ಇಂಡಿಯಾ ರೌಂಡ್‌ ರಾಬಿನ್‌ ಮಾದರಿಯಲ್ಲಿ ಆಡಿರುವ 9 ಪಂದ್ಯಗಳನ್ನೂ ಗೆದ್ದಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿಯೇ ಸೆಮಿಫೈನಲ್‌ ಪ್ರವೇಶಿಸಿದೆ. ಅತ್ತ ನ್ಯೂಜಿಲೆಂಡ್‌ ಆರಂಭಿಕ ಪ್ರಾಬಲ್ಯದ ಬಳಿಕ ತೀವ್ರ ಹಿನ್ನಡೆ ಅನುಭವಿಸಿದರೂ ನಿರ್ಣಾಯಕ ಪಂದ್ಯದಲ್ಲಿ ಗೆದ್ದು ಉಪಾಂತ್ಯಕ್ಕೇರಿದೆ. ತಂಡ 5 ಪಂದ್ಯಗಳಲ್ಲಿ ಗೆದ್ದು 4ನೇ ಸ್ಥಾನಿಯಾಗಿತ್ತು.

Team India take on New Zealand Challenge at Mumbai kvn
Author
First Published Nov 14, 2023, 10:59 AM IST

ಮುಂಬೈ(ನ.14): 12 ವರ್ಷಗಳ ಬಳಿಕ ಮತ್ತೊಮ್ಮೆ ತವರಿನ ಅಂಗಳದಲ್ಲಿ ಐಸಿಸಿ ಏಕದಿನ ವಿಶ್ವಕಪ್‌ ಕಿರೀಟಕ್ಕೆ ಮುತ್ತಿಡಲು ಕಾತರಿಸುತ್ತಿರುವ ಟೀಂ ಇಂಡಿಯಾಗೆ ಈಗ ನಿರ್ಣಾಯಕ ಟಾಸ್ಕ್‌ ಎದುರಾಗಿದೆ. ವಿಶ್ವಕಪ್‌ನ ಸೆಮಿಫೈನಲ್‌ ಕದನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮೊದಲ ಸೆಮೀಸ್‌ನಲ್ಲಿ ಬುಧವಾರ ಭಾರತ ಹಾಗೂ ನ್ಯೂಜಿಲೆಂಡ್‌ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಪರಸ್ಪರ ಸೆಣಸಾಡಲಿವೆ. 2 ಬಾರಿ ಚಾಂಪಿಯನ್‌ ಭಾರತ 4ನೇ ಫೈನಲ್‌ ಮೇಲೆ ಕಣ್ಣಿಟ್ಟಿದ್ದರೆ, ಕಳೆದೆರಡು ಬಾರಿ ಪ್ರಶಸ್ತಿ ತಪ್ಪಿಸಿಕೊಂಡಿರುವ ಕಿವೀಸ್‌, ಸತತ 3ನೇ ಬಾರಿ ಫೈನಲ್‌ಗೇರಲು ಕಾತರಿಸುತ್ತಿದೆ.

ಟೂರ್ನಿಯುದ್ದಕ್ಕೂ ಅಧಿಪತ್ಯ ಸಾಧಿಸಿರುವ ಟೀಂ ಇಂಡಿಯಾ ರೌಂಡ್‌ ರಾಬಿನ್‌ ಮಾದರಿಯಲ್ಲಿ ಆಡಿರುವ 9 ಪಂದ್ಯಗಳನ್ನೂ ಗೆದ್ದಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿಯೇ ಸೆಮಿಫೈನಲ್‌ ಪ್ರವೇಶಿಸಿದೆ. ಅತ್ತ ನ್ಯೂಜಿಲೆಂಡ್‌ ಆರಂಭಿಕ ಪ್ರಾಬಲ್ಯದ ಬಳಿಕ ತೀವ್ರ ಹಿನ್ನಡೆ ಅನುಭವಿಸಿದರೂ ನಿರ್ಣಾಯಕ ಪಂದ್ಯದಲ್ಲಿ ಗೆದ್ದು ಉಪಾಂತ್ಯಕ್ಕೇರಿದೆ. ತಂಡ 5 ಪಂದ್ಯಗಳಲ್ಲಿ ಗೆದ್ದು 4ನೇ ಸ್ಥಾನಿಯಾಗಿತ್ತು.

ಪಾಕಿಸ್ತಾನ ಸೋಲಿಗೆ ಬೌಲಿಂಗ್ ಕೋಚ್ ತಲೆದಂಡ, ಮತ್ತಷ್ಟು ರಾಜೀನಾಮೆ ಶೀಘ್ರದಲ್ಲೇ ಎಂದ ಫ್ಯಾನ್ಸ್!

ಭಾರತವೇ ಫೇವರಿಟ್‌: ಭಾರತದ ಆಟಗಾರರು ಈ ವರೆಗೂ ಅಬ್ಬರದ ಪ್ರದರ್ಶನ ನೀಡಿದ್ದು, ಸೆಮೀಸ್‌ನಲ್ಲೂ ಮುಂದುವರಿಸುವ ಹೊಣೆಗಾರಿಕೆ ಇದೆ. ನಾಯಕ ರೋಹಿತ್‌, ವಿರಾಟ್‌ ಕೊಹ್ಲಿ, ಶುಭ್‌ಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಕೆ.ಎಲ್‌.ರಾಹುಲ್‌ ಸೇರಿದಂತೆ ಎಲ್ಲರೂ ಅಭೂತಪೂರ್ವ ಲಯದಲ್ಲಿದ್ದು, ಇವರನ್ನು ಕಟ್ಟಿಹಾಕುವುದೇ ಕಿವೀಸ್‌ ಬೌಲರ್‌ಗಳ ಮುಂದಿರುವ ಸವಾಲು. ಬೌಲರ್‌ಗಳಂತೂ ಪ್ರಚಂಡ ದಾಳಿ ಸಂಘಟಿಸುತ್ತಿದ್ದು, ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಸಿರಾಜ್‌ರ ಆರಂಭಿಕ ಸ್ಪೆಲ್‌ ಹಾಗೂ ಮೊಹಮದ್‌ ಶಮಿ, ಕುಲ್ದೀಪ್‌, ಜಡೇಜಾರ ವಿಕೆಟ್‌ ಕೀಳುವ ಚಾಕಚಕ್ಯತೆ ತಂಡದ ಪ್ಲಸ್‌ ಪಾಯಿಂಟ್‌. ಈಗಾಗಲೇ ಲೀಗ್‌ ಹಂತದಲ್ಲೂ ಕಿವೀಸ್‌ಗೆ ಸೋಲುಣಿಸಿರುವ ಭಾರತ ಸೆಮೀಸ್‌ ಪಂದ್ಯದಲ್ಲೂ ಗೆಲ್ಲುವ ತಂಡ ಎಂದೇ ಕರೆಸಿಕೊಳ್ಳುತ್ತಿದೆ. ಜೊತೆಗೆ 2019ರ ಸೆಮಿಫೈನಲ್‌ ಸೋಲಿಗೆ ಸೇಡು ತೀರಿಸಿಕೊಳ್ಳಲೂ ಕಾತರಿಸುತ್ತಿದೆ.

ಶಾಕ್‌ ನೀಡುತ್ತಾ ಕಿವೀಸ್‌: ಭಾರತ ಎಷ್ಟೇ ಪ್ರಬಲವಾಗಿದ್ದರೂ ವಿಶ್ವಕಪ್‌ ಇತಿಹಾಸ ಗಮನಿಸಿದರೆ ಭಾರತಕ್ಕೆ ಹೆಚ್ಚಿನ ಆಘಾತ ನೀಡಿದ್ದು ನ್ಯೂಜಿಲೆಂಡ್‌. ಈ ಬಾರಿಯೂ ತಂಡ ಆತಿಥೇಯರಿಗೆ ಆಘಾತ ನೀಡಲು ಕಾತರಿಸುತ್ತಿದೆ. ಯುವ ತಾರೆ ರಚಿನ್‌ ರವೀಂದ್ರ ಜೊತೆ ಡ್ಯಾರಿಲ್‌ ಮಿಚೆಲ್‌, ಕಾನ್‌ವೇ, ವಿಲಿಯಮ್ಸನ್‌ ಅಬ್ಬರದ ಆಟವಾಡುತ್ತಿದ್ದು, ಇವರನ್ನು ಕಟ್ಟಿಹಾಕಲು ಭಾರತೀಯ ಬೌಲರ್‌ಗಳು ಎಷ್ಟರಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಬಹುದು.

ವಿಶ್ವಕಪ್ ಲೀಗ್ ಹಂತದ ಶ್ರೇಷ್ಠ ತಂಡ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ..! ವಿರಾಟ್ ಕೊಹ್ಲಿಗೆ ನಾಯಕ ಪಟ್ಟ

ಒಟ್ಟು ಮುಖಾಮುಖಿ: 117

ಭಾರತ: 59

ನ್ಯೂಜಿಲೆಂಡ್‌: 50

ಟೈ: 01

ಫಲಿತಾಂಶವಿಲ್ಲ: 07

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌(ನಾಯಕ), ಶುಭ್‌ಮನ್‌, ಕೊಹ್ಲಿ, ಶ್ರೇಯಸ್‌, ರಾಹುಲ್‌, ಸೂರ್ಯ, ಜಡೇಜಾ, ಶಮಿ, ಬೂಮ್ರಾ, ಕುಲ್ದೀಪ್‌, ಸಿರಾಜ್‌.

ನ್ಯೂಜಿಲೆಂಡ್‌: ಕಾನ್‌ವೇ, ರಚಿನ್‌, ವಿಲಿಯಮ್ಸನ್‌(ನಾಯಕ), ಮಿಚೆಲ್‌, ಚಾಪ್ಮನ್‌, ಫಿಲಿಪ್ಸ್‌, ಲೇಥಮ್‌, ಸ್ಯಾಂಟ್ನರ್‌, ಸೌಥಿ, ಫರ್ಗ್ಯೂಸನ್‌, ಬೌಲ್ಟ್‌.

ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌

ಪಿಚ್‌ ರಿಪೋರ್ಟ್‌

ಮುಂಬೈ ಪಿಚ್‌ ಬ್ಯಾಟಿಂಗ್‌ ಸ್ನೇಹಿ ಎನಿಸಿಕೊಂಡಿದ್ದು, ಮತ್ತೊಮ್ಮೆ ದೊಡ್ಡ ಮೊತ್ತದ ನಿರೀಕ್ಷೆಯಿದೆ. ಇಲ್ಲಿ ಈ ವಿಶ್ವಕಪ್‌ನ 3 ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ 350+ ರನ್ ಕಲೆಹಾಕಿದೆ. ಆದರೆ 4 ಪಂದ್ಯಗಳಲ್ಲಿ 3ರಲ್ಲಿ ಚೇಸಿಂಗ್‌ ತಂಡ ಸೋತಿದೆ. ಹೀಗಾಗಿ ಟಾಸ್‌ ನಿರ್ಣಾಯಕ ಎನಿಸಿಕೊಳ್ಳಬಹುದು.

ಪಂದ್ಯಕ್ಕಿದೆ ಮೀಸಲು ದಿನ

2 ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯಕ್ಕೆ ಐಸಿಸಿ ಮೀಸಲು ದಿನ ನಿಗದಿಪಡಿಸಿದೆ. ಅಂದರೆ ಮಳೆಯಿಂದಾಗಿ ಬುಧವಾರ ತಲಾ 20 ಓವರ್ ಆಟವೂ ಸಾಧ್ಯವಾಗದಿದ್ದರೆ ಮೀಸಲು ದಿನದಂದು ಪಂದ್ಯ ಮುಂದುವರಿಯಲಿದೆ.

4 ಬಾರಿ ಸೆಮೀಸ್‌ ಸೋತಿದೆ ಭಾರತ!

ಈ ವರೆಗೆ 7 ಬಾರಿ ಸೆಮೀಸ್‌ ಆಡಿರುವ ಭಾರತಕ್ಕೆ ಇದು 8ನೇ ಸೆಮಿಫೈನಲ್‌. 3 ಬಾರಿ ಫೈನಲ್‌ಗೇರಿರುವ ಭಾರತ 4 ಬಾರಿ ಸೆಮಿಫೈನಲ್‌ನಲ್ಲೇ ಮುಗ್ಗರಿಸಿದೆ. 1987, 1996, 2015, 2019ರಲ್ಲಿ ಸೆಮೀಸ್‌ನಲ್ಲಿ ಅಭಿಯಾನ ಕೊನೆಗೊಳಿಸಿದೆ. 1983, 2003 ಹಾಗೂ 2011ರಲ್ಲಿ ಫೈನಲ್‌ಗೇರಿದ್ದು, 2003ರಲ್ಲಿ ರನ್ನರ್‌-ಅಪ್‌ ಆಗಿತ್ತು.

ಕಿವೀಸ್‌ನ ಸೆಮೀಸ್‌ ಇತಿಹಾಸ ಕಳಪೆ

ಭಾರತಕ್ಕೆ ಹೋಲಿಸಿದರೆ ನ್ಯೂಜಿಲೆಂಡ್‌ನ ಸೆಮೀಸ್‌ ದಾಖಲೆ ಕಳಪೆಯಾಗಿದ್ದು, ಕಳೆದೆರಡು ಬಾರಿ ಫೈನಲ್‌ಗೇರಿದ್ದು ಬಿಟ್ಟರೆ ಉಳಿದ 6 ಬಾರಿ ಸೆಮೀಸ್‌ನಲ್ಲಿ ಸೋಲುಂಡಿದೆ. 1975, 1979, 1992, 1999, 2007 ಹಾಗೂ 2011ರಲ್ಲಿ ಸೆಮಿಫೈನಲ್‌ನಲ್ಲಿ ಸೋಲನಭುವಿಸಿದೆ.

ಟಕ್ಕರ್‌, ಇಲ್ಲಿಂಗ್‌ವರ್ಥ್‌ ಸೆಮೀಸ್‌ಗೆ ಅಂಪೈರ್ಸ್‌

ಭಾರತ-ನ್ಯೂಜಿಲೆಂಡ್‌ ಸೆಮಿಫೈನಲ್‌ ಪಂದ್ಯದಲ್ಲಿ ರಿಚರ್ಡ್‌ ಇಲ್ಲಿಂಗ್‌ವರ್ಥ್‌ ಹಾಗೂ ರಾಡ್‌ ಟಕ್ಕರ್‌ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಇಲ್ಲಿಂಗ್‌ವರ್ಥ್‌ ಉಭಯ ತಂಡಗಳ 2019ರ ಸೆಮೀಸ್‌ ಪಂದ್ಯದಲ್ಲೂ ಅಂಪೈರ್ ಆಗಿದ್ದರು. ಇನ್ನು, ಆಸ್ಟ್ರೇಲಿಯಾ-ದ.ಆಫ್ರಿಕಾ ನಡುವಿನ 2ನೇ ಸೆಮೀಸ್‌ಗೆ ನಿತಿನ್‌ ಮೆನನ್‌, ರಿಚರ್ಡ್ ಕೆಟ್ಲೆಬೊರೋ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
 

Follow Us:
Download App:
  • android
  • ios