ಬ್ಲೂಮ್‌ಫಾಂಟೈನ್‌(ಜ.20): ಐಸಿಸಿ ಅಂಡರ್‌-19 ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್‌ ಭಾರತ ಗೆಲುವಿನ ಆರಂಭ ಪಡೆದುಕೊಂಡಿದೆ. ಭಾನುವಾರ ಇಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 90 ರನ್‌ಗಳ ಜಯ ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 297 ಗಳಿಸಿತು. ಕಠಿಣ ಗುರಿ ಬೆನ್ನತ್ತಿದ ಲಂಕಾ 45.2 ಓವರ್‌ಗಳಲ್ಲಿ 207 ರನ್‌ಗಳಿಗೆ ಆಲೌಟ್‌ ಆಯಿತು.

ಅಂಡರ್‌ 19 ವಿಶ್ವಕಪ್‌: ಜಯದ ವಿಶ್ವಾಸದಲ್ಲಿ ಪ್ರಿಯಂ ಗರ್ಗ್‌ ಪಡೆ

ದೊಡ್ಡ ಗುರಿ ಬೆನ್ನತ್ತಿದ ಲಂಕಾ 19 ರನ್‌ ಗಳಿಸಿದ್ದಾಗ ಮೊದಲ ವಿಕೆಟ್‌ ಕಳೆದುಕೊಂಡಿತು. ಸುಶಾಂತ್‌ ಮಿಶ್ರಾ ಬೌಲಿಂಗ್‌ನಲ್ಲಿ ಪರಣವಿತನ (06) ಔಟಾದರು. 2ನೇ ವಿಕೆಟ್‌ಗೆ ಮಿಶಾರಾ (39) ಹಾಗೂ ರಸಂತಾ (49) ಉತ್ತಮ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಇವರಿಬ್ಬರು ತಂಡದ ಮೊತ್ತವನ್ನು 100 ರನ್‌ ಗಡಿ ದಾಟಿಸಿದರು.

ಇವರಿಬ್ಬರ ಜೊತೆಯಾಟ ಅಪಾಯಕಾರಿಯಾಗಿ ತೋರುತ್ತಿದ್ದಾಗ, ಯಶಸ್ವಿ ಜೈಸ್ವಾಲ್‌ ಜಾದೂ ಪ್ರದರ್ಶಿಸಿ 87 ರನ್‌ಗಳ ಜೊತೆಯಾಟ ಮುರಿದರು. ನಾಯಕ ನಿಪುನ್‌ ಪೆರೇರಾ (50) ಹೋರಾಟ ನಡೆಸಿದರು. ಒಂದು ಹಂತದಲ್ಲಿ 3 ವಿಕೆಟ್‌ ನಷ್ಟಕ್ಕೆ 148 ರನ್‌ ಗಳಿಸಿ, ಜಯದತ್ತ ಹೆಜ್ಜೆ ಹಾಕಿದ್ದ ಲಂಕಾ ದಿಢೀರ್‌ ಕುಸಿತ ಅನುಭವಿಸಿತು. 59 ರನ್‌ಗೆ ಕೊನೆ 7 ವಿಕೆಟ್‌ ಕಳೆದುಕೊಂಡು ಸೋಲಿಗೆ ಶರಣಾಯಿತು.

ಭಾರತ 8 ಬೌಲರ್‌ಗಳನ್ನು ಬಳಸಿಕೊಂಡಿತು. ಆಕಾಶ್‌ ಸಿಂಗ್‌, ಸಿದ್ಧೇಶ್‌ ವೀರ್‌, ರವಿ ಬಿಶ್ನೋಯಿ ತಲಾ 2 ವಿಕೆಟ್‌ ಕಬಳಿಸಿದರು.

ಉತ್ತಮ ಆರಂಭ: ಟಾಸ್‌ ಗೆದ್ದ ಲಂಕಾ, ಭಾರತವನ್ನು ಮೊದಲು ಬ್ಯಾಟ್‌ ಮಾಡುವಂತೆ ಆಹ್ವಾನಿಸಿತು. ಯಶಸ್ವಿ ಜೈಸ್ವಾಲ್‌ ಹಾಗೂ ದಿವ್ಯಾನ್‌್ಶ ಸಕ್ಸೇನಾ ಮೊದಲ ವಿಕೆಟ್‌ಗೆ 66 ರನ್‌ ಸೇರಿಸಿ ಭದ್ರ ಅಡಿಪಾಯ ಹಾಕಿಕೊಟ್ಟರು. ದಿವ್ಯಾನ್‌್ಶ (23) ಔಟಾದ ಬಳಿಕ, ಯಶಸ್ವಿ ಜತೆ ಕ್ರೀಸ್‌ ಹಂಚಿಕೊಂಡ ತಿಲಕ್‌ ವರ್ಮಾ ತಂಡದ ಮೊತ್ತ 100 ರನ್‌ ದಾಟಲು ನೆರವಾದರು.

74 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 59 ರನ್‌ ಗಳಿಸಿ ಯಶಸ್ವಿ ಔಟಾದರೆ, ತಿಲಕ್‌ 46 ರನ್‌ಗೆ ವಿಕೆಟ್‌ ಕಳೆದುಕೊಂಡರು. ನಾಯಕ ಪ್ರಿಯಂ ಗರ್ಗ್‌ (56) ಹಾಗೂ ವಿಕೆಟ್‌ ಕೀಪರ್‌ ಧೃವ್‌ ಜುರೆಲ್‌ (52) ಬಾರಿಸಿದ ಅರ್ಧಶತಕ ತಂಡಕ್ಕೆ ನೆರವಾಯಿತು. ಕೇವಲ 27 ಎಸೆತಗಳಲ್ಲಿ 44 ರನ್‌ ಸಿಡಿಸಿದ ಸಿದ್ಧೇಶ್‌ ವೀರ್‌, ತಂಡ ದೊಡ್ಡ ಮೊತ್ತ ಕಲೆಹಾಕಲು ನೆರವಾದರು.

ಆಲ್ರೌಂಡ್‌ ಆಟ ಪ್ರದರ್ಶಿಸಿದ ಸಿದ್ಧೇಶ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಭಾರತ ತನ್ನ ಮುಂದಿನ ಪಂದ್ಯ ಜ.21ರಂದು ಜಪಾನ್‌ ವಿರುದ್ಧ ಆಡಲಿದೆ.

ಸ್ಕೋರ್‌:

ಭಾರತ 297/4 (ಯಶಸ್ವಿ 59, ಪ್ರಿಯಂ 56, ಧೃವ್‌ 52, ಡೇನಿಯಲ್‌ 1-39)

ಶ್ರೀಲಂಕಾ 207/10 (ನಿಪುನ್‌ 50, ರಸಂತಾ 49, ಆಕಾಶ್‌ 2-29, ಸಿದ್ಧೇಶ್‌ 2-34)