WTC Final ಸೋಲಿನ ಬೆನ್ನಲ್ಲೇ ಕಿಡಿಕಾರಿದ ಟೀಂ ಇಂಡಿಯಾ ಹೆಡ್‌ ಕೋಚ್ ರಾಹುಲ್ ದ್ರಾವಿಡ್..!

* ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾಗೆ ಶರಣಾದ ಟೀಂ ಇಂಡಿಯಾ
* ಟೀಂ ಇಂಡಿಯಾ ಪ್ರದರ್ಶನದ ಬಗ್ಗೆ ಮೊದಲ ಬಾರಿಗೆ ತುಟಿಬಿಚ್ಚಿದ ರಾಹುಲ್ ದ್ರಾವಿಡ್

Frustrated Rahul Dravid not happy with Indian Cricket Team Performance WTC Final Loss kvn

ಲಂಡನ್‌(ಜೂ.12): ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಟೀಂ ಇಂಡಿಯಾ 209 ರನ್ ಅಂತರದ ಹೀನಾಯ ಸೋಲು ಅನುಭವಿಸುವ ಮೂಲಕ ಸತತ ಎರಡನೇ ಬಾರಿಗೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇಲ್ಲಿನ ದಿ ಓವಲ್ ಮೈದಾನದಲ್ಲಿ ನಡೆದ ಟೆಸ್ಟ್ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಳ್ಳಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. 2021ರಲ್ಲಿ ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿ ನಡೆದ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಟೀಂ ಇಂಡಿಯಾ 7 ವಿಕೆಟ್ ಸೋಲು ಅನುಭವಿಸಿತ್ತು. ಇದೀಗ ಆಸ್ಟ್ರೇಲಿಯಾ ಎದುರು ಗೆಲ್ಲಲು 444 ರನ್ ಗುರಿ ಪಡೆದಿದ್ದ ಟೀಂ ಇಂಡಿಯಾ, ಎರಡನೇ ಇನಿಂಗ್ಸ್‌ನಲ್ಲಿ ಕೇವಲ 234 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಹೀನಾಯ ಸೋಲು ಕಂಡಿದೆ.  

ಟೆಸ್ಟ್ ವಿಶ್ವಕಪ್‌ ಫೈನಲ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ, ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 169 ರನ್ ಬಾರಿಸಿ ಸರ್ವಪತನ ಕಂಡಿತು. ಇನ್ನು ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ, ರಹಾನೆ ಹಾಗೂ ಶಾರ್ದೂಲ್ ಠಾಕೂರ್ ಸಮಯೋಚಿತ ಅರ್ಧಶತಕದ ನೆರವಿನಿಂದ 296 ರನ್‌ಗಳಿಗೆ ಸರ್ವಪತನ ಕಂಡಿತು. 

ಇನ್ನು 173 ರನ್‌ಗಳ ಭಾರೀ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ, ಅಲೆಕ್ಸ್ ಕ್ಯಾರಿ ಬಾರಿಸಿದ ಅರ್ಧಶತಕದ ನೆರವಿನಿಂದ 8 ವಿಕೆಟ್ ಕಳೆದುಕೊಂಡು 270 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ಭಾರತಕ್ಕೆ 444 ರನ್ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಭಾರತ ಎರಡನೇ ಇನಿಂಗ್ಸ್‌ನಲ್ಲಿ 234 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಆಸ್ಟ್ರೇಲಿಯಾ ಎದುರು ಮಂಡಿಯೂರಿತು

ಇನ್ನು ಭಾರತ ತಂಡವು ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಸೋಲು ಕಾಣುತ್ತಿದ್ದಂತೆಯೇ, ತಂಡದ ಸಿದ್ದತೆ ಬಗ್ಗೆ ನಿಮಗೆ ತೃಪ್ತಿಯಿದೆಯೇ ಎನ್ನುವ ಪ್ರಶ್ನೆಗೆ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಓರ್ವ ಕೋಚ್ ಆಗಿ ಹೇಳುವುದಾದರೇ, ನಮ್ಮ ತಂಡದ ಪ್ರದರ್ಶನದ ಬಗ್ಗೆ ನನಗೆ ಖುಷಿಯಿಲ್ಲ. ಈ ಸತ್ಯವನ್ನು ಒಪ್ಪಿಕೊಳ್ಳಲು ನಾನು ಸಿದ್ದನಿದ್ದೇನೆ. ನಾನು ಮಾತ್ರವಲ್ಲ ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಸತ್ಯವಿದು. ನಮ್ಮ ಆಟಗಾರರ ಕ್ರಿಕೆಟ್‌ ವೇಳಾಪಟ್ಟಿಯೂ ಸಾಕಷ್ಟು ಒತ್ತೊಟ್ಟಿಗಿತ್ತು. ಅದು ಆಟಗಾರರಿಗೂ ಗೊತ್ತಿಗೆ. ಮಹತ್ವದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನಾಡುತ್ತಿದ್ದೀರಾ ಎಂದರೆ ಕನಿಷ್ಠ ಮೂರು ವಾರ ಮುಂಚಿತವಾಗಿ ನಾವಿಲ್ಲಿಗೆ ಪ್ರವಾಸ ಮಾಡಬೇಕಿತ್ತು. ಇಲ್ಲಿನ ವಾತಾವರಣದಲ್ಲಿ ಕನಿಷ್ಠ ಎರಡು ಅಭ್ಯಾಸ ಪಂದ್ಯಗಳನ್ನಾದರೂ ಆಡಬೇಕಿತ್ತು. ಆಗ ಒಳ್ಳೆಯ ಸಿದ್ದತೆಯಿಂದ ಕಣಕ್ಕಿಳಿಯಲು ಸಾಧ್ಯವಾಗುತ್ತಿತ್ತು" ಎಂದು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

"ನಮಗೆ ಇದ್ಯಾವುದನ್ನು ಮಾಡಲು ಸಾಧ್ಯವಾಗಲಿಲ್ಲ. ಯಾಕೆಂದರೆ ಪರಿಸ್ಥಿತಿ ನಮಗೆ ಪೂರಕವಾಗಿರಲಿಲ್ಲ. ನಾವೇನು ಮಾಡುತ್ತಿದ್ದೀವೋ ಅದಕ್ಕೆ ಬದ್ದರಾಗಿರಬೇಕಾಗುತ್ತದೆ. ಅಲ್ಲಿ ಯಾವುದೇ ತಪ್ಪೊಪ್ಪಿಕೊಳ್ಳಬೇಕಾದ, ದೂರುವ ಪ್ರಮೇಯವಿರಬಾರದು. ಎಲ್ಲಾ ಐದು ದಿನ ನಮಗಿಂತಲೂ ಚೆನ್ನಾಗಿ ಆಡಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಸ್ಟ್ರೇಲಿಯಾ ತಂಡವನ್ನು ನಾನು ಅಭಿನಂದಿಸುತ್ತೇನೆ" ಎಂದು ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

WTC Champions 3 ಮಾದ​ರಿ​ ವಿಶ್ವಕಪ್‌ ಗೆದ್ದ ಮೊದಲ ತಂಡ ಆಸೀಸ್‌! ಇತಿಹಾಸ ಬರೆದ ಕಾಂಗರೂ ಪಡೆ

"ನಾವು ಹೇಗೆ ಇನ್ನಷ್ಟು ಉತ್ತಮ ಕ್ರಿಕೆಟ್ ಆಡಬಹುದು ಎನ್ನುವುದನ್ನು ನಾವು ನಮ್ಮೊಳಗೆ ನೋಡಿಕೊಳ್ಳಬೇಕು. ಯಾವ ವಿಭಾಗದಲ್ಲಿ ನಾವು ಇನ್ನಷ್ಟು ಉತ್ತಮ ಪ್ರದರ್ಶನ ತೋರಬಹುದು ಎನ್ನುವುದನ್ನು ಗಮನ ಹರಿಸಬೇಕಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದ ಕೇವಲ ಒಂದು ವಾರದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯವು ಆರಂಭವಾಗಿತ್ತು. ಐಪಿಎಲ್‌ ಫೈನಲ್ ಆಡಿದ ಶುಭ್‌ಮನ್ ಗಿಲ್, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ, ಟೆಸ್ಟ್ ವಿಶ್ವಕಪ್ ಆರಂಭಕ್ಕೆ ಒಂದು ವಾರ ಬಾಕಿ ಇದ್ದಾಗ ತಂಡ ಕೂಡಿಕೊಂಡಿದ್ದರು. ಈ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗಾಗಿ ಯಾವೊಬ್ಬ ಆಟಗಾರನೂ ಐಪಿಎಲ್‌ನಿಂದ ವಿಶ್ರಾಂತಿ ಪಡೆದಿರಲಿಲ್ಲ. ಇನ್ನು ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಕೂಡಾ ಇಂಗ್ಲೆಂಡ್‌ನಲ್ಲೇ ಕೌಂಟಿ ಕ್ರಿಕೆಟ್ ಆಡುತ್ತಿದ್ದರಾದರೂ, ಅವರು ಕೂಡಾ ಕೊನೆಯ ಹಂತದಲ್ಲಿ ಭಾರತ ತಂಡ ಕೂಡಿಕೊಂಡಿದ್ದರು.

Latest Videos
Follow Us:
Download App:
  • android
  • ios