Asianet Suvarna News Asianet Suvarna News

FTP Cycle 2023-27: ಒಟ್ಟು 20 ಟೆಸ್ಟ್‌ ಪಂದ್ಯಗಳನ್ನಾಡಲಿದೆ ಟೀಂ ಇಂಡಿಯಾ..!

FTP Cycle 2023-27 ವೇಳಾಪಟ್ಟಿ ಪ್ರಕಟ
ಮುಂದಿನ ವರ್ಷಗಳಲ್ಲಿ 20 ಟೆಸ್ಟ್ ಪಂದ್ಯವನ್ನಾಡಲಿರುವ ಭಾರತ
ಆಸ್ಟ್ರೇಲಿಯಾ ಎದುರು 4 ಪಂದ್ಯಗಳ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಲಿರುವ ಭಾರತ

Team India set to play 20 Test matches in ICC new Future Tours Program cycle 2023 to 2027 kvn
Author
Bengaluru, First Published Aug 17, 2022, 3:18 PM IST

ದುಬೈ(ಆ.17): ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ನೂತನವಾಗಿ ಬಿಡುಗಡೆಗೊಳಿಸಿರುವ ಟೀಂ ಇಂಡಿಯಾದ ಭವಿಷ್ಯದ ಪ್ರವಾಸ ಮತ್ತು ಕಾರ್ಯಕ್ರಮ(ಎಫ್‌ಟಿಪಿ) ಪಟ್ಟಿಯನ್ನು ಪ್ರಕಟಿಸಿದ್ದು, ಮುಂದಿನ ವರ್ಷ(2023) ಭಾರತ ಕ್ರಿಕೆಟ್ ತಂಡವು ಒಟ್ಟು 20 ಟೆಸ್ಟ್ ಪಂದ್ಯಗಳನ್ನಾಡಲಿದೆ. ಈ ವರ್ಷಾಂತ್ಯದಲ್ಲಿ ಭಾರತ ಕ್ರಿಕೆಟ್‌ ತಂಡವು ಬಾಂಗ್ಲಾದೇಶ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುವುದರೊಂದಿಗೆ 2023ರ ಭಾರತದ ವೇಳಾಪಟ್ಟಿ ಆರಂಭವಾಗಲಿದೆ.

ಮುಂದಿನ ವರ್ಷ ಭಾರತ ಕ್ರಿಕೆಟ್ ತಂಡವು, ತವರಿನಲ್ಲಿ ಆಸ್ಟ್ರೇಲಿಯಾ ಎದುರು 4 ಪಂದ್ಯಗಳ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಲಿದೆ. ಈ ಸರಣಿಯು  ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳಿನಲ್ಲಿ ನಡೆಯಲಿದೆ. ಇದಾದ ಬಳಿಕ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ಎದುರು 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಪ್ರವಾಸ ಕೈಗೊಳ್ಳಲಿದೆ.

ಇನ್ನು 2024ರಲ್ಲಿ ಟೀಂ ಇಂಡಿಯಾ, ತವರಿನಲ್ಲಿ ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ಎದುರು ಟೆಸ್ಟ್ ಸರಣಿಯನ್ನಾಡಲಿದೆ. ಇದಾದ ಬಳಿಕ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಇನ್ನು 2025ರಲ್ಲಿ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಇಂಗ್ಲೆಂಡ್‌ ಪ್ರವಾಸದಲ್ಲಿ ಭಾರತ ತಂಡವು 5 ಪಂದ್ಯಗಳ ಟೆಸ್ಟ್ ಸರಣಿಯನ್ಣಾಡಲಿದೆ. ನಂತರ ತವರಿನಲ್ಲಿ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ಎದುರು ಟೆಸ್ಟ್ ಸರಣಿಯನ್ನಾಡಲಿದೆ. 2026ರಲ್ಲಿ ಭಾರತ ತಂಡವು ಆಫ್ಘಾನಿಸ್ತಾನ ಎದುರು ಏಕೈಕ ಟೆಸ್ಟ್ ಪಂದ್ಯವನ್ನಾಡಲಿದೆ. ಇದಾದ ನಂತರ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. 2023-27ರ ಅವಧಿಯ ಕೊನೆಯ ಟೆಸ್ಟ್‌ ಸರಣಿಯು ಟೀಂ ಇಂಡಿಯಾ ತವರಿನಲ್ಲಿ ಆಸ್ಟ್ರೇಲಿಯಾ ಎದುರು ಸೆಣಸಲಿದೆ.

ಐಸಿಸಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ನಾನಿಲ್ಲ: ಗಾಳಿಸುದ್ದಿಗಳಿಗೆ ತೆರೆ ಎಳೆದ ಸೌರವ್ ಗಂಗೂಲಿ

2023-2027 FTP ಅವಧಿಯಲ್ಲಿ ಐಸಿಸಿ ಪೂರ್ಣಾವಧಿ ಸದಸ್ಯತ್ವ ಪಡೆದ 12 ರಾಷ್ಟ್ರಗಳು ಒಟ್ಟು 777 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಲಿದೆ. ಇವುಗಳ ಪೈಕಿ 173 ಟೆಸ್ಟ್‌, 281 ಏಕದಿನ ಹಾಗೂ 323 ಟಿ20 ಪಂದ್ಯಗಳು ಸೇರಿವೆ. ಈ ಅವಧಿಯಲ್ಲಿ ಇಂಗ್ಲೆಂಡ್ ಅತಿಹೆಚ್ಚು(22) ಟೆಸ್ಟ್ ಪಂದ್ಯವನ್ನಾಡಲಿದ್ದರೇ ಆನಂತರ ಆಸ್ಟ್ರೇಲಿಯಾ(21) ಹಾಗೂ ಭಾರತ 20 ಪಂದ್ಯಗಳನ್ನು ಆಡಲಿದೆ. 2023-2027ರ ಅವಧಿಯಲ್ಲಿ 5 ಪ್ರಮುಖ ಐಸಿಸಿ ಟೂರ್ನಿಗಳು ಕೂಡಾ ಜರುಗಲಿವೆ. ಈ ಅವಧಿಯಲ್ಲಿ ಎರಡು  ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ನಡೆಯಲಿದೆ. ಇದಷ್ಟೇ ಅಲ್ಲದೇ  2023ರ ಐಸಿಸಿ ಏಕದಿನ ವಿಶ್ವಕಪ್‌, 2024ರ ಟಿ20 ವಿಶ್ವಕಪ್‌, 2025ರಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಹಾಗೂ 2026ರಲ್ಲಿ ಟಿ20  ವಿಶ್ವಕಪ್ ಹಾಗೂ 2027ರಲ್ಲಿ  ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಜರುಗಲಿದೆ.

Follow Us:
Download App:
  • android
  • ios