* ಐಸಿಸಿ ಅಧ್ಯಕ್ಷರಾಗುವ ಗಾಳಿ ಸುದ್ದಿಗೆ ತೆರೆ ಎಳೆದ ಸೌರವ್ ಗಂಗೂಲಿ* ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ದಾದಾ* ಈ ಬಗ್ಗೆ ‘ಬಿಸಿಸಿಐ, ಕೇಂದ್ರ ಸರ್ಕಾರ ನಿರ್ಧರಿಸಲಿದೆ’ ಎಂದು ಗಂಗೂಲಿ

ನವದೆಹಲಿ(ಆ.17): ಐಸಿಸಿ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ತಾವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿರುವ ಬಿಸಿಸಿಐ ಅಧ್ಯಕ್ಷ, ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ, ‘ಆ ಕುರಿತ ನಿರ್ಧಾರಗಳು ಬಿಸಿಸಿಐ, ಕೇಂದ್ರ ಸರ್ಕಾರ ಕೈಗೊಳ್ಳಲಿದೆ’ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಗಂಗೂಲಿ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಅವರು ಆ ಕುರಿತು ಸ್ಪಷ್ಟನೆ ನೀಡಿದ್ದಾರೆ. 

‘ಬಿಸಿಸಿಐ, ಕೇಂದ್ರ ಸರ್ಕಾರ ನಿರ್ಧರಿಸಲಿದೆ’ ಎನ್ನುವ ಅವರ ಹೇಳಿಕೆಯು ಪರೋಕ್ಷವಾಗಿ ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ ಅವರನ್ನು ಉದ್ದೇಶಿಸಿದೆ ಎನ್ನಲಾಗಿದೆ. ಏಷ್ಯಾ ಕ್ರಿಕೆಟ್‌ ಸಂಸ್ಥೆ(ಎಸಿಸಿ) ಅಧ್ಯಕ್ಷರೂ ಆಗಿರುವ ಜಯ್‌ ಶಾ, ಬಿಸಿಸಿಐನ ಆಡಳಿತದಲ್ಲಿ ಸಂಪೂರ್ಣ ಹಿಡಿತ ಹೊಂದಿದ್ದು, ಐಸಿಸಿ ಅಧ್ಯಕ್ಷ ಸ್ಥಾನದ ಮೇಲೂ ಕಣ್ಣಿಟ್ಟಿದ್ದಾರೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ.

ಬಿಸಿಸಿಐ ಅರ್ಜಿ: ಆ್ಯಮಿಕಸ್‌ ಕ್ಯೂರಿ ನೇಮಿಸಿದ ಸುಪ್ರೀಂ

ನವದೆಹಲಿ: ಪದಾಧಿಕಾರಿಗಳ ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ಮಂಡಳಿಯ ನಿಯಮಾವಳಿಯ ಪರಿಷ್ಕರಣೆಗೆ ಕೋರಿ ಬಿಸಿಸಿಐ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಗೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಚ್‌ ಆ್ಯಮಿಕಸ್‌ ಕ್ಯೂರಿ(ನ್ಯಾಯಾಲಯ ಮಿತ್ರ)ಯನ್ನು ನೇಮಕ ಮಾಡಿದೆ. 

ಪ್ರಧಾನಿ ಮೋದಿ, ಅಮಿತ್ ಶಾ ಭೇಟಿಯಾದ ಸೌರವ್ ಗಂಗೂಲಿ, ರಾಜಕೀಯದಲ್ಲಿ ತಲ್ಲಣ!

ನ್ಯಾಯಮೂರ್ತಿ ಎನ್‌.ವಿ.ರಮಣ, ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ಈ ವಿಚಾರದ ಕುರಿತಂತೆ ವಿಚಾರಣೆ ನಡೆಸಿ, ಹಿರಿಯ ವಕೀಲ ಮನೀಂದರ್‌ ಸಿಂಗ್‌ರನ್ನು ಆ್ಯಮಿಕಸ್‌ ಕ್ಯೂರಿಯಾಗಿ ನೇಮಿಸಿದೆ. ಮಂಡಳಿಯ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ್ಯದರ್ಶಿ ಜಯ್‌ ಶಾ ಸೇರಿದಂತೆ ಇನ್ನೂ ಕೆಲ ಪದಾಧಿಕಾರಿಗಳ ಅಧಿಕಾರಾವಧಿಯ ಕುರಿತು ಇರುವ ನಿಯಮವನ್ನು ಪರಿಷ್ಕರಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ.

ಮುಂದಿನ 3 ವರ್ಷ ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕೆ 65 ಅಂತರರಾಷ್ಟ್ರೀಯ ಪಂದ್ಯ

ದುಬೈ: 2022ರಿಂದ 2025ರ ಅವಧಿಯಲ್ಲಿ ಭಾರತ ಮಹಿಳಾ ಕ್ರಿಕೆಟ್‌ ತಂಡ ಒಟ್ಟು 65 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಭವಿಷ್ಯದ ಪ್ರವಾಸ ಮತ್ತು ಕಾರ‍್ಯಕ್ರಮಗಳ(ಎಫ್‌ಟಿಪಿ) ಪಟ್ಟಿಯನ್ನು ಪ್ರಕಟಗೊಳಿಸಿತು. ಭಾರತ ತಂಡವು 2 ಟೆಸ್ಟ್‌, 27 ಏಕದಿನ ಮತ್ತು 36 ಟಿ20 ಪಂದ್ಯಗಳನ್ನು ಆಡಲಿದೆ. ಇಂಗ್ಲೆಂಡ್‌, ಆಸ್ಪ್ರೇಲಿಯಾ ವಿರುದ್ಧ ಟೆಸ್ಟ್‌ ಆಡಲಿದ್ದು ತವರಿನಲ್ಲಿ ನ್ಯೂಜಿಲೆಂಡ್‌, ದ.ಆಫ್ರಿಕಾ, ವೆಸ್ಟ್‌ಇಂಡೀಸ್‌ ಹಾಗೂ ಐರ್ಲೆಂಡ್‌ ವಿರುದ್ಧ ಸರಣಿಗಳನ್ನು ಆಡಲಿದೆ. ಆಸ್ಪ್ರೇಲಿಯಾ, ಇಂಗ್ಲೆಂಡ್‌ ಮತ್ತು ಬಾಂಗ್ಲಾದೇಶ ಪ್ರವಾಸಗಳನ್ನು ಕೈಗೊಳ್ಳಲಿದೆ.