ಮುಂಬೈ(ಡಿ.11): ಸರಣಿ ಗೆಲುವು ನಿರ್ಧರಿಸುವು 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 240 ರನ್ ಸಿಡಿಸಿದೆ. ಈ ಮೂಲಕ ವಿಂಡೀಸ್ ಗೆಲುವಿಗೆ  241ರನ್ ಟಾರ್ಗೆಟ್ ನೀಡಿದೆ. 

ಇದನ್ನೂ ಓದಿ: ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್, ಭಾರತದಲ್ಲಿ 2 ಬದಲಾವಣೆ.

ಸತತ 2ನೇ ಬಾರಿಗೆ ಟಾಸ್ ಸೋತ ಟೀಂ ಇಂಡಿಯಾ ಒಲ್ಲದ ಮನಸ್ಸಿನಿಂದ ಬ್ಯಾಟಿಂಗ್ ಇಳಿಯಿತು. ಆದರೆ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಸ್ಫೋಟಕ ಆರಂಭ ಅಭಿಮಾನಿಗಳಿಗೆ ಖುಷಿ ನೀಡಿತು. ಮೊದಲ ವಿಕೆಟ್‌ಗೆ ಈ ಜೋಡಿ 135 ರನ್ ಚಚ್ಚಿದರು. ರೋಹಿತ್ ಶರ್ಮಾ 34 ಎಸೆತದಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 71 ರನ್ ಸಿಡಿಸಿ ಔಟಾದರು.

ಇದನ್ನೂ ಓದಿ: ಗಾಯಾಳು ಧವನ್ ಬದಲಿಗೆ ಟೀಂ ಇಂಡಿಯಾ ಸೇರಿಕೊಂಡ ಮಯಾಂಕ್!

ಕೆಎಲ್ ರಾಹುಲ್ ಬ್ಯಾಟಿಂಗ್ ಮುಂದುವರಿಸಿದರು. ಕಳೆದ ಪಂದ್ಯದಲ್ಲಿ ಶಿವಂ ದುಬೆಗೆ 3ನೇ ಕ್ರಮಾಂಕ ಬಿಟ್ಟುಕೊಟ್ಟು ಯಶಸ್ವಿಯಾಗಿದ್ದ ಕೊಹ್ಲಿ, ಈ ಪಂದ್ಯದಲ್ಲಿ ರಿಷಬ್ ಪಂತ್‌ಗೆ ನೀಡಿ ಕೈ ಸುಟ್ಟುಕೊಂಡರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆಗರೂ ಪಂತ್ ಹಣೆಬರಹ ಬದಲಾಗಲಿಲ್ಲ. ಪಂತ್ ಶೂನ್ಯಕ್ಕೆ ಔಟಾದರು.

ನಾಯಕ ವಿರಾಟ್ ಕೊಹ್ಲಿ ಹಾಗೂ ರಾಹುಲ್ ಜೊತೆಯಾಟದಿಂದ ಟೀಂ ಇಂಡಿಯಾ ಮತ್ತೆ ರನ್ ಗಳಿಕೆ ವೇಗವನ್ನು ಹೆಚ್ಚಿಸಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೊಹ್ಲಿ ಕೇವಲ 21 ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಇತ್ತ ರಾಹುಲ್ ಕೂಡ ಅಬ್ಬರ ಮುಂದುವರಿಸಿದರು. ರಾಹುಲ್ 56 ಎಸೆತದಲ್ಲಿ 9 ಬೌಂಡರಿ, 4 ಸಿಕ್ಸರ್ ನೆರವಿನಿಂದ 91 ರನ್ ಸಿಡಿಸಿ ಔಟಾದರು. ಈ ಮೂಲಕ ಶತಕ ವಂಚಿತರಾದರು.  ಕೊಹ್ಲಿ 29 ಎಸೆತದಲ್ಲಿ ಅಜೇಯ 70 ರನ್ ಭಾರಿಸಿದರು. ಈ ಮೂಲಕ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 240 ರನ್ ಸಿಡಿಸಿತು.