ಮುಂಬೈ(ಡಿ.11): ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಅತ್ಯುತ್ತಮ ಪ್ರದರ್ಶನದ  ಮೂಲಕ ತಂಡದ  ಖಾಯಂ ಸದಸ್ಯತ್ವ ಪಡೆದಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಇದೀಗ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ  3 ಪಂದ್ಯಗಳ ಏಕದಿನ ಸರಣಿಯಿಂದ ಗಾಯಾಳು ಶಿಖರ್ ಧವನ್ ಹೊರಬಿದ್ದಿದ್ದು, ಈ ಸ್ಥಾನಕ್ಕೆ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ICC ರ‍್ಯಾಂಕಿಂಗ್‌ ಪ್ರಕಟ; ಟಾಪ್ 10 ಪಟ್ಟಿಯಲ್ಲಿ ಮಯಾಂಕ್ ಅಗರ್ವಾಲ್!

ಟೀಂ ಇಂಡಿಯಾ ಆಯ್ಕೆ ಸಮಿತಿ ಧವನ್ ಬದಲಿಗೆ ಮಯಾಂಕ್ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಸಯ್ಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಮಹಾರಾಷ್ಟ್ರಯ ವಿರುದ್ಧದ ಪಂದ್ಯದಲ್ಲಿ ದೆಹಲಿ ತಂಡದ ಶಿಖರ್ ಧವನ್ ಮೊಣಕಾಲಿಗೆ ಗಾಯವಾಗಿ, ಸ್ಟಿಚ್ ಹಾಕಲಾಗಿತ್ತು. ಹೀಗಾಗಿ ಸದ್ಯ ನಡೆಯುತ್ತಿರುವ ಟಿ20 ಸರಣಿಯಿಂದಲೂ ಹೊರಬಿದ್ದಿದ್ದರು. ಇದೀಗ ವೈದ್ಯರು ಹೆಚ್ಚಿನ ವಿಶ್ರಾಂತಿಗೆ ಸೂಚಿಸಿದ್ದಾರೆ. ಹೀಗಾಗಿ ಏಕದಿನ ಸರಣಿಯಿಂದಲೂ ಹೊರಬಿದ್ದಿದ್ದಾರೆ. 

ಇದನ್ನೂ ಓದಿ: ಒಂದೇ ವರ್ಷದಲ್ಲಿ ದಿಗ್ಗಜರನ್ನು ಹಿಂದಿಕ್ಕಿದ ಕನ್ನಡಿಗ ಮಯಾಂಕ್!

ಮಯಾಂಕ್ ಅಗರ್ವಾಲ್ ಆಯ್ಕೆಯಿಂದ ಏಕದಿನ ಸರಣಿಗೆ ಒಟ್ಟು ಮೂವರು ಕನ್ನಡಿಗರು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಕೆಎಲ್ ರಾಹುಲ್, ಮನೀಶ್ ಪಾಂಡೆ ಹಾಗೂ ಇದೀಗ ಮಯಾಂಕ್ ಅಗರ್ವಾಲ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವಿಂಡೀಸ್ ಸರಣಿಗೆ ಭಾರತ ಏಕದಿನ ತಂಡ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್, ಶಿವಂ ದುಬೆ, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ದೀಪಕ್ ಚಹಾರ್ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್

ಡಿಸೆಂಬರ್ 15 ರಿಂದ ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಡಿಸೆಂಬರ್ 15 ರಂದು ಚೆನ್ನೈ, ಡಿಸೆಂಬರ್ 18 ವಿಶಾಖಪಟ್ಟಣಂ ಹಾಗೂ ಡಿಸೆಂಬರ್ 22 ರಂದು ಕಟಕ್‌ನಲ್ಲಿ ಪಂದ್ಯ ನಡೆಯಲಿದೆ.