ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟ ಬಿಸಿಸಿಐಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡ ಭಾಗಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರ ವರೆಗೆ ಚೀನಾದ ಹ್ಯಾಂಗ್ಝೂನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ 

ನವದೆಹಲಿ(ಜೂ.25): ಮುಂಬರುವ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರ ವರೆಗೆ ಚೀನಾದ ಹ್ಯಾಂಗ್ಝೂನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಪುರುಷ ಹಾಗೂ ಮಹಿಳಾ ಕ್ರಿಕೆಟ್‌ ತಂಡಗಳನ್ನು ಕಣಕ್ಕಿಳಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಕ್ಟೋಬರ್ 5ರಿಂದ ಭಾರತದಲ್ಲೇ ಏಕದಿನ ವಿಶ್ವಕಪ್‌ ನಡೆಯಲಿರುವ ಕಾರಣ ಭಾರತ ಪುರುಷರ ತಂಡವನ್ನು ಏಷ್ಯಾಡ್‌ಗೆ ಕಳುಹಿಸುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿತ್ತು.

ಆದರೆ ಸದ್ಯದ ವರದಿ ಪ್ರಕಾರ ವಿಶ್ವಕಪ್‌ಗೆ ಆಯ್ಕೆಯಾಗದಿರುವ ತಾರಾ ಆಟಗಾರರನ್ನೊಳಗೊಂಡ ದ್ವಿತೀಯ ದರ್ಜೆ ತಂಡವನ್ನು ಏಷ್ಯಾಡ್‌ಗೆ ಕಳುಹಿಸಲಾಗುತ್ತದೆ. ಮಹಿಳೆಯರ ವಿಭಾಗದಲ್ಲಿ ಮೊದಲ ದರ್ಜೆ ತಂಡವನ್ನೇ ಕೂಟದಲ್ಲಿ ಆಡಿಸಲಾಗುತ್ತದೆ ಎಂದು ವರದಿಯಾಗಿದೆ. ಈ ಬಗ್ಗೆ ಬಿಸಿಸಿಐ ಕೆಲ ದಿನಗಳಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು. ಜೂನ್‌ 30ರೊಳಗೆ ಭಾರತೀಯ ಒಲಿಂಪಿಕ್ಸ್‌ ಸಮಿತಿಗೆ ಆಟಗಾರರ ಪಟ್ಟಿಯನ್ನು ನೀಡಬೇಕಿದೆ.

83ರ ವಿಶ್ವಕಪ್‌ ಜಯಕ್ಕೆ ಇಂದು 40ರ ಸಂಭ್ರಮ!

ನವದೆಹಲಿ: ಭಾರತ 1983ರ ಐಸಿಸಿ ಏಕದಿನ ವಿಶ್ವಕಪ್ ಗೆದ್ದು ಜೂ.25(ಭಾನುವಾರ)ಕ್ಕೆ 40 ವರ್ಷ ತುಂಬಿದೆ. ವೆಸ್ಟ್‌ಇಂಡೀಸ್‌ ವಿರುದ್ಧ ನಡೆದಿದ್ದ ಫೈನಲ್‌ನಲ್ಲಿ ಭಾರತ 43 ರನ್‌ ಜಯ ಸಾಧಿಸಿ ಇತಿಹಾಸ ಬರೆದಿತ್ತು. ಕಪಿಲ್‌ ದೇವ್ ನಾಯಕತ್ವದಲ್ಲಿ ಭಾರತ ಚೊಚ್ಚಲ ಬಾರಿಗೆ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. 28 ವರ್ಷಗಳ ಬಳಿಕ ಎಂ.ಎಸ್‌.ಧೋನಿ ನೇತೃತ್ವದಲ್ಲಿ ತವರಿನಲ್ಲೇ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಎತ್ತಿಹಿಡಿದಿತ್ತು.ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಎರಡು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಜಿಂಬಾಬ್ವೆ ವಿರುದ್ಧವಿಂಡೀಸ್‌ಗೆ ಸೋಲು!

ಹರಾರೆ: ಐಸಿಸಿ ಏಕದಿನ ವಿಶ್ವಕಪ್ ಅರ್ಹತಾ ಟೂರ್ನಿಯ "ಎ" ಗುಂಪಿನ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಜಿಂಬಾಬ್ವೆ 35 ರನ್‌ ಗೆಲುವು ಸಾಧಿಸಿದೆ. ಗುಂಪಿನಲ್ಲಿ ಸದ್ಯ ಮೊದಲ ಸ್ಥಾನದಲ್ಲಿರುವ ಜಿಂಬಾಬ್ವೆ ಸೂಪರ್‌-6 ಹಂತಕ್ಕೆ ಪ್ರವೇಶಿಸಿದೆ. ವಿಂಡೀಸ್‌ ಹಾಗೂ ನೆದರ್‌ಲೆಂಡ್ಸ್‌ ಸಹ ಸೂಪರ್‌-6 ಹಂತದಲ್ಲಿ ಸ್ಥಾನ ಖಚಿತಪಡಿಸಿಕೊಂಡಿವೆ. 

ಅಂದು ಸ್ಲಂ ಬಾಡಿಗೆ ಮನೆಯಲ್ಲಿ ವಾಸ..! ಇಂದು ಕೋಟಿ ಬೆಲೆ ಬಾಳೋ ಮನೆಗೆ ಮಾಲೀಕ..! ಸಿರಾಜ್‌ ಸ್ಪೂರ್ತಿಯ ಕಥೆ

ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ 49.5 ಓವರಲ್ಲಿ 268 ರನ್‌ ಗಳಿಸಿತು. 175ಕ್ಕೆ 4 ವಿಕೆಟ್‌ ಕಳೆದುಕೊಂಡು ಜಯದತ್ತ ಮುನ್ನುಗ್ಗುತ್ತಿದ್ದ ವಿಂಡೀಸ್‌ ದಿಢೀರ್‌ ಕುಸಿತ ಕಂಡು 44.4 ಓವರಲ್ಲಿ 233 ರನ್‌ಗೆ ಆಲೌಟ್‌ ಆಯಿತು. ಮತ್ತೊಂದು ಪಂದ್ಯದಲ್ಲಿ ನೇಪಾಳ ವಿರುದ್ಧ ನೆದರ್‌ಲೆಂಡ್ಸ್‌ 7 ವಿಕೆಟ್‌ ಜಯ ಪಡೆಯಿತು. ನೇಪಾಳ 167ಕ್ಕೆ ಆಲೌಟ್‌ ಆದರೆ, ನೆದರ್‌ಲೆಂಡ್ಸ್‌ 27.1 ಓವರಲ್ಲಿ 3 ವಿಕೆಟ್‌ಗೆ 168 ರನ್ ಗಳಿಸಿತು.

ಟಿ20ಯಲ್ಲಿ 10000 ರನ್‌: ಬಟ್ಲರ್‌ 9ನೇ ಕ್ರಿಕೆಟಿಗ

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ನ ತಾರಾ ಬ್ಯಾಟರ್‌ ಜೋಸ್‌ ಬಟ್ಲರ್‌ ಟಿ20 ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಕ್ಲಬ್‌ ಸೇರ್ಪಡೆಗೊಂಡಿದ್ದು, ಈ ಸಾಧನೆಗೈದ ವಿಶ್ವದ 9ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನ ಟಿ20 ಬ್ಲಾಸ್ಟ್‌ ಲೀಗ್‌ನಲ್ಲಿ ಲಂಕಾಶೈರ್ ಪರ ಆಡುತ್ತಿರುವ ಬಟ್ಲರ್‌ ಶುಕ್ರವಾರ ಡರ್ಬಿಶೈರ್‌ ವಿರುದ್ಧದ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದರು.

ಕೇವಲ 39 ಎಸೆತಗಳಲ್ಲಿ 83 ರನ್‌ ಸಿಡಿಸಿದ ಅವರು ಟಿ20 ರನ್‌ ಗಳಿಕೆಯನ್ನು 10080ಕ್ಕೆ ಏರಿಸಿದರು. ಕ್ರಿಸ್‌ ಗೇಲ್‌ 14,562 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಶೋಹೆಬ್‌ ಮಲಿಕ್‌ (12,528), ಪೊಲ್ಲಾರ್ಡ್‌(12,175), ಕೊಹ್ಲಿ(11965), ವಾರ್ನರ್‌(11,695), ಫಿಂಚ್‌(11,392), ಅಲೆಕ್ಸ್‌ ಹೇಲ್ಸ್‌(11,214) ಹಾಗೂ ರೋಹಿತ್‌ ಶರ್ಮಾ(11,035) ಹತ್ತು ಸಾವಿರ ರನ್‌ ಕ್ಲಬ್‌ನಲ್ಲಿರುವ ಇತರ ಆಟಗಾರರು.