ಮದುವೆ ವದಂತಿ ನಡುವೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಕ್ರಿಕೆಟಿಗ ಕೆಎಲ್ ರಾಹುಲ್!
ಜನವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವ ನಿರೀಕ್ಷೆಯಲ್ಲಿರುವ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್, ಬುಧವಾರ ಕುಕ್ಕು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ.
ಮಂಗಳೂರು (ನ.23): ಟಿ20 ವಿಶ್ವಕಪ್‌ನ ವೈಫಲ್ಯದ ನಿರಾಸೆಯ ನಡುವೆ ವೈಯಕ್ತಿಕ ಜೀವನದಲ್ಲಿ ದೊಡ್ಡ ನಿರ್ಧಾರ ಮಾಡಿರುವ ಕೆಎಲ್ ರಾಹುಲ್, ಜನವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಟೀಮ್ ಇಂಡಿಯಾ ಆಟಗಾರ ಕೆ.ಎಲ್.ರಾಹುಲ್ ಬುಧವಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅವರು ಸ್ನೇಹಿತರೊಂದಿಗೆ ಭೇಟಿ ನೀಡಿ ದರ್ಶನ ಮಾಡಿದ್ದಾರೆ. ಭಾರತ ತಂಡದ ಉಪನಾಯಕನಾಗಿರುವ ಮಂಗಳೂರು ಮೂಲದ ಕೆ.ಎಲ್. ರಾಹುಲ್ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ಅವರ ಸ್ನೇಹಿತರು ಜೊತೆಯಾಗಿದ್ದರು. ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ಮಹಾಪೂಜೆಯಲ್ಲೂ ಕೂಡ ಅವರು ಭಾಗಿಯಾದರು. ಈ ಸಮಯದಲ್ಲಿ ದೇವಳದ ವತಿಯಿಂದ ಕೆ.ಎಲ್. ರಾಹುಲ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು. ದೇವಸ್ಥಾನದ ವತಿಯಿಂದ ಕೆ.ಎಲ್. ರಾಹುಲ್ ಗೆ ಸನ್ಮಾನ ಕೂಡ ಮಾಡಲಾಗಿದೆ.
ಕೆಎಲ್ ರಾಹುಲ್ ಮೇಲೆ ನಮ್ಮ ಸಂಪೂರ್ಣ ಬೆಂಬಲವಿದೆ: ವಿಶ್ವಾಸ ವ್ಯಕ್ತಪಡಿಸಿದ ಗುರು ದ್ರಾವಿಡ್
ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಕೆ.ಎಲ್. ರಾಹುಲ್ ಕಳಪೆ ಪ್ರದರ್ಶನ ತೋರಿದ್ದರು. ಪ್ರಮುಖ ಪಂದ್ಯಗಳಲ್ಲಿ ಅವರು ಕಂಡಿದ್ದ ವೈಫಲ್ಯ ದೊಡ್ಡ ಮಟ್ಟದ ಟೀಕೆಗೆ ಕಾರಣವಾಗಿತ್ತು. ವಿಶ್ವಕಪ್ ಮುಗಿದ ಬೆನ್ನಲ್ಲಿಯೇ ಅವರು ಕುಕ್ಕೆಗೆ ಭೇಟಿ ನೀಡಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ನಾಗ ಕ್ಷೇತ್ರಕ್ಕೆ ಕೆಎಲ್ ರಾಹುಲ್ ಭೇಟಿ ನೀಡಿದ್ದು ಇದು ಮೊದಲೇನಲ್ಲ.
ಕೆಎಲ್ ರಾಹುಲ್ ಜೊತೆ ಮಗಳ ಮದುವೆ ಬಗ್ಗೆ ದೊಡ್ಡ ವಿಷಯ ಬಹಿರಂಗಪಡಿಸಿದ ಸುನೀಲ್ ಶೆಟ್ಟಿ
ಹಿಂದೆಯೂ ಸಾಕಷ್ಟು ಬಾರಿ ಅವರು ಭೇಟಿ ನೀಡಿದ್ದರು. ಮೂಲಗಳ ಪ್ರಕಾರ ಅವರು ಪ್ರತಿ ವರ್ಷವೂ ಕುಕ್ಕೆಗೆ ಆಗಮಿಸಿ ಪೂಜೆ ಸಲ್ಲಿಸುವುದು ವಾಡಿಕೆ. 2017ರಲ್ಲಿಯೂ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ್ದು ಸುದ್ದಿಯಾಗಿತ್ತು.