ಚೆನ್ನೈ(ಫೆ.01): ಇತ್ತೀಚೆಗಷ್ಟೇ ಮುಕ್ತಾಯವಾದ ಆಸ್ಪ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ, ಅತ್ಯುತ್ತಮ ಪ್ರದರ್ಶನದೊಂದಿಗೆ ಗಮನ ಸೆಳೆದಿದ್ದ ವೇಗಿ ಟಿ. ನಟರಾಜನ್‌, ತಮಿಳುನಾಡಿನ ಪಳನಿ ಮುರುಗ ದೇವಾಲಯಕ್ಕೆ ಭೇಟಿ ನೀಡಿ ಮುಡಿಕೊಟ್ಟು ಹರಕೆ ತೀರಿಸಿದ್ದಾರೆ. 

ಟೀಂ ಇಂಡಿಯಾಗೆ ಆಯ್ಕೆಯಾದರೆ ಮುಡಿಕೊಡುವುದಾಗಿ ಅವರು ಹರಕೆ ಹೊತ್ತಿದ್ದರು ಎನ್ನಲಾಗಿದೆ. ನೆಟ್‌ ಬೌಲರ್‌ ಆಗಿ ಆಸ್ಟೇಲಿಯಾಗೆ ತೆರಳಿದ್ದ ನಟರಾಜನ್‌, ಮೂರು ಮಾದರಿಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಭಾರತದ ಮೊದಲ ಆಟಗಾರ ಎನ್ನುವ ದಾಖಲೆ ಬರೆದಿದ್ದರು.

ಪಾದಾರ್ಪಣೆ ಪಂದ್ಯದಲ್ಲೇ ಅಪರೂಪದ ದಾಖಲೆ ಬರೆದ ಟಿ ನಟರಾಜನ್‌

ಆಸ್ಟ್ರೇಲಿಯಾ ವಿರುದ್ದ ಏಕದಿನ ಸರಣಿಯಲ್ಲಿ ಮೊದಲೆರಡು ಪಂದ್ಯಗಳನ್ನು ಸೋತು ಸರಣಿ ಕೈಚೆಲ್ಲಿದ ಬಳಿಕ ಮೂರನೇ ಏಕದಿನ ಪಂದ್ಯದಲ್ಲಿ ನಟರಾಜನ್‌ಗೆ ಏಕದಿನ ತಂಡದಲ್ಲಿ ಪಾದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲೇ 2  ವಿಕೆಟ್ ಕಬಳಿಸಿದ್ದರು. ಇನ್ನು ಟಿ20 ಸರಣಿಯಲ್ಲಿ 3 ಪಂದ್ಯಗಳನ್ನಾಡಿ 6 ವಿಕೆಟ್‌ ಕಬಳಿಸುವ ಮೂಲಕ ಟಿ20 ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಟೆಸ್ಟ್ ಸರಣಿಯಲ್ಲಿನ ಕೊನೆಯ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ 78 ರನ್‌ ನೀಡಿ 3 ವಿಕೆಟ್‌ ಕಬಳಿಸಿ ಗಮನ ಸೆಳೆದಿದ್ದರು.