ಬ್ರಿಸ್ಬೇನ್‌(ಜ.15): ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ ಮೊದಲ ದಿನವೇ ಉತ್ತಮ ಆರಂಭ ಪಡೆದಿದೆ. ಭಾರತದ ಅನನುಭವಿ ಬೌಲಿಂಗ್‌ ಪಡೆ ಎದುರು ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದೆ.

ಇಲ್ಲಿನ ಗಾಬಾ ಮೈದಾನದಲ್ಲಿ ಆರಂಭವಾದ 4ನೇ ಟೆಸ್ಟ್ ಪಂದ್ಯದಲ್ಲಿ ಮಾರ್ನಸ್ ಲಬುಶೇನ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಮೊದಲ ದಿನದಾಟದ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 274 ರನ್‌ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡುವ ಮುನ್ಸೂಚನೆ ನೀಡಿದೆ.  

ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಪರ ವಾಷಿಂಗ್ಟನ್ ಸುಂದರ್ ಹಾಗೂ ತಂಗರಸು ನಟರಾಜನ್‌ ಪಾದಾರ್ಪಣೆ ಮಾಡಿದ್ದಾರೆ. ಕೇವಲ ಪಾದಾರ್ಪಣೆ ಮಾತ್ರವಲ್ಲ ಮೊದಲ ದಿನವೇ ಉಪಯುಕ್ತ ವಿಕೆಟ್ ಕಬಳಿಸುವ ಮೂಲಕ ತಮ್ಮ ಡೆಬ್ಯೂ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಲಬುಶೇನ್‌ ಆಕರ್ಷಕ ಶತಕ, ಆಸೀಸ್‌ಗೆ ಮೊದಲ ದಿನದ ಗೌರವ

ಇನ್ನು ಬ್ರಿಸ್ಬೇನ್ ಟೆಸ್ಟ್‌ ಪಂದ್ಯದಲ್ಲಿ ಟಿ. ನಟರಾಜನ್ ಕೆಲ ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ.

* ಒಂದೇ ಪ್ರವಾಸದಲ್ಲಿ ಮೂರು ಮಾದರಿಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಭಾರತದ ಮೊದಲ ಹಾಗೂ ಒಟ್ಟಾರೆ 17ನೇ ಆಟಗಾರ ಎನ್ನುವ ಅಪರೂಪದ ದಾಖಲೆಗೆ ಟಿ. ನಟರಾಜನ್ ಭಾಜನರಾಗಿದ್ದಾರೆ. ಆಸ್ಟ್ರೇಲಿಯಾ ಎದುರೇ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಕ್ರಮವಾಗಿ ಏಕದಿನ ಹಾಗೂ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ನಟರಾಜನ್‌, ಇದೀಗ ಟೆಸ್ಟ್‌ಗೂ ಯಾರ್ಕರ್ ಸ್ಪೆಷಲಿಸ್ಟ್ ಎಂಟ್ರಿ ಕೊಟ್ಟಿದ್ದಾರೆ.

* ಟಿ. ನಟರಾಜನ್‌ 3 ಮಾದರಿಯ ತಮ್ಮ ಪದಾರ್ಪಣೆ ಪಂದ್ಯದಲ್ಲಿ ಕನಿಷ್ಟ 2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಜಹೀರ್ ಖಾನ್ ಬಳಿಕ ಮೂರು ಮಾದರಿಯ ಕ್ರಿಕೆಟ್‌ನ ಮೊದಲ ಪಂದ್ಯದಲ್ಲೇ 2+ ವಿಕೆಟ್‌ ಕಬಳಿಸಿದ 2ನೇ ಭಾರತೀಯ ಬೌಲರ್ ಎನ್ನುವ ಕೀರ್ತಿ ನಟರಾಜನ್ ಪಾಲಾಗಿದೆ.

* ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಎಸೆತದಲ್ಲೇ ವಿಕೆಟ್‌ ಕಬಳಿದ ಮೊದಲ ಬೌಲರ್ ಎನ್ನುವ ಅಪರೂಪದ ದಾಖಲೆ ಶಾರ್ದೂಲ್ ಠಾಕೂರ್ ಪಾಲಾಗಿದೆ. ವೇಗಿ ಠಾಕೂರ್ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಮಾರ್ಕಸ್‌ ಹ್ಯಾರಿಸ್‌ ವಿಕೆಟ್‌ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

* ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ಪರ ಐದು ಆಟಗಾರರು ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸಾಧನೆ ಮಾಡಿದ್ದಾರೆ. 1996ರ ಬಳಿಕ ಸರಣಿಯೊಂದರಲ್ಲಿ ಅತಿಹೆಚ್ಚು ಆಟಗಾರರು ಪಾದಾರ್ಪಣೆ ಮಾಡಿದಂತಾಗಿದೆ. ಈ ಮೊದಲು 1996ರಲ್ಲಿ ಇಂಗ್ಲೆಂಡ್‌ ವಿರುದ್ದದ ಸರಣಿಯಲ್ಲಿ 6 ಆಟಗಾರರು ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದರು.