* ಮಾರಕ ಬೌಲಿಂಗ್ ಮೂಲಕ ಗಮನ ಸೆಳೆಯುತ್ತಿರುವ ವೇಗಿ ಭುವನೇಶ್ವರ್ ಕುಮಾರ್* ಎರಡನೇ ಟಿ20 ಪಂದ್ಯದ ವೇಳೆ ಅಪರೂಪದ ದಾಖಲೆ ಬರೆದ ಭುವಿ* ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 500 ಡಾಟ್ ಬಾಲ್ ಎಸೆದ ಮೊದಲ ಬೌಲರ್
ಬರ್ಮಿಂಗ್‌ಹ್ಯಾಮ್(ಜು.10): ಸತತ ಗಾಯ ಹಾಗೂ ಫಿಟ್ನೆಸ್ ಸಮಸ್ಯೆಯಿಂದಾಗಿ ಪದೇ ಪದೇ ತಂಡದಿಂ ಹೊರಗುಳಿಯುತ್ತಿದ್ದ ಟೀಂ ಇಂಡಿಯಾ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಇದೀಗ ಭರ್ಜರಿಯಾಗಿಯೇ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಇಂಗ್ಲೆಂಡ್ ಎದುರಿನ ಸೀಮಿತ ಓವರ್‌ಗಳ ಸರಣಿಯ ಮೊದಲೆರಡು ಟಿ20 ಪಂದ್ಯದಲ್ಲಿ ಭುವಿ ಮಿಂಚಿನ ಬೌಲಿಂಗ್ ದಾಳಿಯನ್ನು ನಡೆಸುವ ಮೂಲಕ ಆತಿಥೇಯ ತಂಡದ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದ್ದಾರೆ. ಇದೇ ವೇಳೆ ಬೌಲಿಂಗ್‌ನಲ್ಲಿ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್ ಅಪರೂಪದ ದಾಖಲೆ ಮಾಡಿದ್ದಾರೆ.
ಹೊಸ ಚೆಂಡಿನೊಂದಿಗೆ ದಾಳಿ ನಡೆಸುತ್ತಿರುವ ಭುವನೇಶ್ವರ್ ಕುಮಾರ್ (Bhuvneshwar Kumar), ಇಂಗ್ಲೆಂಡ್ ಎದುರಿನ ಮೊದಲೆರಡು ಟಿ20 ಪಂದ್ಯಗಳಲ್ಲೂ ಮೊದಲ ಓವರ್‌ನಲ್ಲೇ ವಿಕೆಟ್ ಕಬಳಿಸುವ ಮೂಲಕ ಜೋಸ್ ಬಟ್ಲರ್ ಪಡೆಯ ಮೇಲೆ ಪದೇ ಪದೇ ಒತ್ತಡ ಹೇರಲಾರಂಭಿಸಿದ್ದಾರೆ. ಇಂಗ್ಲೆಂಡ್ ತಂಡವು ಬ್ಯಾಟಿಂಗ್‌ನಲ್ಲಿ ಅಗ್ರಕ್ರಮಾಂಕದ ಸ್ಟಾರ್ ಬ್ಯಾಟರ್‌ಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಆದರೆ ಭುವಿ ಆರಂಭದಲ್ಲೇ ವಿಕೆಟ್ ಕಬಳಿಸಿ ಶಾಕ್ ನೀಡುತ್ತಿದ್ದಾರೆ. ಇಂಗ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ನಾಯಕ ಜೋಸ್ ಬಟ್ಲರ್ ಅವರನ್ನು ಶೂನ್ಯಕ್ಕೆ ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಮತ್ತೋರ್ವ ಆರಂಭಿಕ ಬ್ಯಾಟರ್ ಜೇಸನ್ ರಾಯ್ (Jason Roy) ಅವರನ್ನು ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್‌ಗೆ ಆಘಾತ ನೀಡುವಲ್ಲಿ ಭುವಿ ಯಶಸ್ವಿಯಾಗಿದ್ದಾರೆ.
ಭಾರತ ನೀಡಿದ್ದ 171 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಸ್ಪೋಟಕ ಬ್ಯಾಟರ್ ಜೇಸನ್ ರಾಯ್ ಬಲಿ ಪಡೆದು ಭಾರತಕ್ಕೆ ಆರಂಭಿಕ ಯಶಸ್ಸು ದಕ್ಕಿಸಿಕೊಟ್ಟರು. ಇದೇ ಆರಂಭವನ್ನು ಉತ್ತಮವಾಗಿ ಬಳಸಿಕೊಂಡ ಟೀಂ ಇಂಡಿಯಾ (Team India) ಬೌಲರ್‌ಗಳು ಎರಡನೇ ಟಿ20 ಪಂದ್ಯದಲ್ಲಿ 49 ರನ್‌ಗಳ ಗೆಲುವು ದಾಖಲಿಸುವ ಮೂಲಕ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿತು.
ಟಿ20 ಕ್ರಿಕೆಟ್‌ನಲ್ಲಿ 500 ಡಾಟ್ ಬಾಲ್ ಎಸೆದ ಮೊದಲ ಬೌಲರ್ ಭುವನೇಶ್ವರ್ ಕುಮಾರ್:
ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್, ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 500 ಚುಕ್ಕಿ ಎಸೆತ ಎಸೆದ ಜಗತ್ತಿನ ಮೊದಲ ಬೌಲರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಭುವಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 500+ ಡಾಟ್ ಬಾಲ್ ಎಸೆದಿದ್ದರೇ, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಹಾಗೂ ನ್ಯೂಜಿಲೆಂಡ್ ಟಿಮ್ ಸೌಥಿ, ಭುವಿಗಿಂತ 150ಕ್ಕೂ ಹೆಚ್ಚು ಎಸೆತಗಳ ಹಿಂದಿದ್ದಾರೆ.
Ind vs Eng ಇಂಗ್ಲೆಂಡ್‌ಗೆ ಹೀನಾಯ ಸೋಲು, ಟಿ20 ಸರಣಿ ಟೀಂ ಇಂಡಿಯಾ ಪಾಲು..!
ಇನ್ನು ಜೇಸನ್ ರಾಯ್ ಅವರ ವಿಕೆಟ್ ಕಬಳಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಮೊದಲ ಓವರ್‌ನಲ್ಲೇ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಭುವನೇಶ್ವರ್ ಕುಮಾರ್ ಮೊದಲ ಸ್ಥಾನಕ್ಕೇರಿದ್ದಾರೆ. ಭುವನೇಶ್ವರ್ ಕುಮಾರ್ 14 ಬಾರಿ ಮೊದಲ ಓವರ್‌ನಲ್ಲೇ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದಂತೆ ಡೇವಿಡ್ ವಿಲ್ಲೇ(13), ಏಂಜಲೋ ಮ್ಯಾಥ್ಯೂಸ್(11) ಟಾಪ್ 3 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ.
