* ಇಂಗ್ಲೆಂಡ್ ಬಗ್ಗುಬಡಿದು ಟಿ20 ಸರಣಿ ಗೆದ್ದ ಭಾರತ* ಇಂಗ್ಲೆಂಡ್ ಎದುರು ಎರಡನೇ ಟಿ20 ಪಂದ್ಯದಲ್ಲಿ 49 ರನ್‌ಗಳ ಗೆಲುವು* ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತಕ್ಕೆ 14ನೇ ಗೆಲುವು
ಬರ್ಮಿಂಗ್‌ಹ್ಯಾಮ್(ಜು..09): ಟೀಂ ಇಂಡಿಯಾ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಆತಿಥೇಯ ಇಂಗ್ಲೆಂಡ್ ತಂಡವು ಎರಡನೇ ಟಿ20 ಪಂದ್ಯದಲ್ಲಿ 49 ರನ್‌ಗಳ ಅಂತರದ ಹೀನಾಯ ಸೋಲು ಕಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಭಾಕಿ ಇರುವಂತೆಯೇ ಭಾರತ ತಂಡವು 2-0 ಅಂತರದಲ್ಲಿ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿದೆ. ರೋಹಿತ್ ಶರ್ಮಾ ಪೂರ್ಣ ಪ್ರಮಾಣದಲ್ಲಿ ಟೀಂ ಇಂಡಿಯಾ ನಾಯಕರಾಗಿ ಗೆಲುವಿನ ನಾಗಾಲೋಟ ಮುಂದುವರೆಸಿದ್ದು ಭಾರತ ಕ್ರಿಕೆಟ್ ತಂಡವು ದಾಖಲೆಯ 14ನೇ ಟಿ20 ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಭಾರತ ನೀಡಿದ್ದ 171 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಭುವನೇಶ್ವರ್ ಕುಮಾರ್ ಮತ್ತೊಮ್ಮೆ ಜೇಸನ್ ರಾಯ್ ಅವರನ್ನು ಬಲಿಪಡೆಯುವ ಮೂಲಕ ಆತಿಥೇಯರಿಗೆ ಶಾಕ್ ನೀಡಿದರು. ಇನ್ನು ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಜೋಸ್ ಬಟ್ಲರ್ ಕೂಡಾ ಭುವನೇಶ್ವರ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ ತಂಡವು 11 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದರು.
ಇನ್ನು ಸ್ಪೋಟಕ ಬ್ಯಾಟಿಂಗ್ ಮೂಲಕ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ಲಿಯಾಮ್ ಲಿವಿಂಗ್‌ಸ್ಟೋನ್‌ಗೆ ಜಸ್ಪ್ರೀತ್ ಬುಮ್ರಾ ಪೆವಿಲಿಯನ್ ಹಾದಿ ತೋರಿಸಿದರು. ಲಿವಿಂಗ್‌ಸ್ಟೋನ್ 9 ಎಸೆತಗಳಲ್ಲಿ 3 ಬೌಂಡರಿ ಸಹಿತ 15 ರನ್ ಬಾರಿಸಿದ್ದಾಗ ಬುಮ್ರಾ ಎಸೆತ ಮಿಂಚಿನ ಚೆಂಡನ್ನು ಗುರುತಿಸಲಾಗದೇ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಹ್ಯಾರಿ ಬ್ರೂಕ್ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಯುಜುವೇಂದ್ರ ಚಹಲ್ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಸೂರ್ಯಕುಮಾರ್ ಯಾದವ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ಡೇವಿಡ್ ಮಲಾನ್ 19 ರನ್ ಗಳಿಸಿ ಚಹಲ್‌ಗೆ ಎರಡನೇ ಬಲಿಯಾದರು. ಇನ್ನು ಕೊನೆಯಲ್ಲಿ ಮೋಯಿನ್ ಅಲಿ(35) ಹಾಗೂ ಡೇವಿಡ್ ವಿಲ್ಲಿ(33*) ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ಪ್ರತಿರೋಧ ತೋರಿದರಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
Ind vs Eng: ಜಡೇಜಾ ಬ್ಯಾಟಿಂಗ್ ಝಲಕ್, ಇಂಗ್ಲೆಂಡ್‌ಗೆ ಸ್ಪರ್ಧಾತ್ಮಕ ಗುರಿ
ಭಾರತ ಕ್ರಿಕೆಟ್ ತಂಡದ ಪರ ವೇಗಿ ಭುವನೇಶ್ವರ್ ಕುಮಾರ್ 3 ವಿಕೆಟ್ ಕಬಳಿಸಿದರೇ, ಜಸ್ಪ್ರೀತ್ ಬುಮ್ರಾ, ಯುಜುವೇಂದ್ರ ಚಹಲ್, ಹರ್ಷಲ್ ಪಟೇಲ್ ತಲಾ 2 ವಿಕೆಟ್ ಪಡೆದರು. ಇನ್ನು ಹಾರ್ದಿಕ್ ಪಾಂಡ್ಯ ಒಂದು ವಿಕೆಟ್ ಪಡೆದರು..
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ರಿಷಭ್ ಪಂತ್ ಜೋಡಿ 49 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ರೋಹಿತ್ ಶರ್ಮಾ 31 ರನ್ ಗಳಿಸಿದರೇ, ರಿಷಭ್ ಪಂತ್ 26 ರನ್ ಬಾರಿಸಿದರು. ಇನ್ನು ಕೊನೆಯಲ್ಲಿ ರವೀಂದ್ರ ಜಡೇಜಾ 46 ರನ್ ಬಾರಿಸುವ ಮೂಲಕ ತಂಡ 170 ರನ್ ಕಲೆಹಾಕುವಲ್ಲಿ ಯಶಸ್ವಿಯಾದರು.
