* ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಭಿಮನ್ಯು ಮಿಥುನ್* ಕರ್ನಾಟಕ ಕ್ರಿಕೆಟ್‌ ತಂಡದ ವೇಗದ ಬೌಲರ್ ಆಗಿ ಮಿಂಚಿದ್ದ ಮಿಥುನ್* ಭಾರತ ಪರ 4 ಟೆಸ್ಟ್ ಹಾಗೂ 5 ಏಕದಿನ ಪಂದ್ಯವನ್ನಾಡಿದ್ದ ವೇಗಿ

ಬೆಂಗಳೂರು(ಅ.08) ಕರ್ನಾಟಕದ ಹಿರಿಯ ವೇಗದ ಬೌಲರ್‌ ಅಭಿಮನ್ಯು ಮಿಥುನ್‌ (Abhimanyu Mithun ) ಗುರುವಾರ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುತ್ತಿರುವುದಾಗಿ ಘೋಷಿಸಿದರು. ಸಾಮಾಜಿಕ ತಾಣಗಳಲ್ಲಿ ಅವರು ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದರು.

ರಣಜಿ, ಇರಾನಿ ಟ್ರೋಫಿಯಲ್ಲಿ ಕರ್ನಾಟಕ ಚಾಂಪಿಯನ್‌ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಿಥುನ್‌, ವಿನಯ್‌ ಕುಮಾರ್‌ (Vinay Kumar) ಹಾಗೂ ಎಸ್‌.ಅರವಿಂದ್‌ ಜೊತೆಗೂಡಿ ಕರ್ನಾಟಕ ದೇಶದ ಅತ್ಯುತ್ತಮ ತಂಡವಾಗಲು ನೆರವಾಗಿದ್ದರು. ಯುವಕರಿಗೆ ಆದ್ಯತೆ ಸಿಗಲಿ ಎಂಬ ಉದ್ದೇಶದಿಂದ ನಿವೃತ್ತಿಯಾಗುತ್ತಿರುವುದಾಗಿ ತಿಳಿಸಿರುವ ಮಿಥುನ್‌, ಬಿಸಿಸಿಐ ಹಾಗೂ ಕೆಎಸ್‌ಸಿಎಗೆ ಧನ್ಯವಾದ ತಿಳಿಸಿದ್ದಾರೆ. ನಾನು ಅತ್ಯುನ್ನತ ಹಂತವಾದ ನನ್ನ ದೇಶವನ್ನು ಪ್ರತಿನಿಧಿಸಿದ್ದೇನೆ. ಇದೇ ನನ್ನ ಜೀವನದ ಅತ್ಯುನ್ನತ ಸಾಧನೆಯಾಗಿದೆ. ಇದು ನನ್ನ ವೃತ್ತಿಜೀವನದುದ್ದಕ್ಕೂ ಅತ್ಯಂತ ಅವಿಸ್ಮರಣೀಯ ಕ್ಷಣವೆಂದು ಬಣ್ಣಿಸಿದ್ದಾರೆ.

View post on Instagram

ಪಂದ್ಯ ಸೋತರೂ ಪ್ರೀತಿ ಗೆದ್ದ ಸಿಎಸ್‌ಕೆ ಬೌಲರ್.. ಮೈದಾನದ ಹೊರಗೊಂದು ಕ್ಯೂಟ್ ಲವ್ ಸ್ಟೋರಿ!

ಡಿಸ್ಕಸ್‌ ಥ್ರೋವರ್ ಆಗಬೇಕಿದ್ದ ಮಿಥನ್‌ 2009ರಲ್ಲಿ ಮೊದಲ ಬಾರಿಗೆ ಕರ್ನಾಟಕ ಕ್ರಿಕೆಟ್‌ ತಂಡಕ್ಕೆ (Karnataka Cricket Team) ಪಾದಾರ್ಪಣೆ ಮಾಡಿದ್ದರು. ಇದಾಗಿ ಒಂದೇ ವರ್ಷದಲ್ಲಿ ಅಂದರೆ 2010ರಲ್ಲಿ ಭಾರತ ತಂಡಕ್ಕೂ ಕಾಲಿಟ್ಟಿದ್ದರು. ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ಟೆಸ್ಟ್‌ ಕ್ರಿಕೆಟ್‌ (Test Cricket) ಗೆ ಪಾದಾರ್ಪಣೆ ಮಾಡಿದ್ದ ಅವರು, 2011ರಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಬ್ರಿಡ್ಜ್‌ಟೌನ್‌ನಲ್ಲಿ ಅಂತಿಮ ಟೆಸ್ಟ್‌ ಆಡಿದ್ದರು. ಭಾರತ ಪರ 4 ಟೆಸ್ಟ್‌ಗಳಲ್ಲಿ 9 ವಿಕೆಟ್‌ ಕಬಳಿಸಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ವಿರುದ್ದ ಏಕದಿನ ಕ್ರಿಕೆಟ್‌ಗೂ ಪಾದಾರ್ಪಣೆ ಮಾಡಿದ್ದರು. ಭಾರತ ಪರ 5 ಏಕದಿನ ಪಂದ್ಯಗಳನ್ನಾಡಿ 3 ವಿಕೆಟ್ ಕಬಳಿಸಿದ್ದರು. 

Scroll to load tweet…
Scroll to load tweet…

ಒಟ್ಟು 103 ಪ್ರಥಮ ದರ್ಜೆ ಪಂದ್ಯಗಳಲ್ಲಿ 338 ವಿಕೆಟ್‌ ಕಿತ್ತಿರುವ ಮಿಥುನ್‌, 1,937 ರನ್‌ ಸಹ ಕಲೆಹಾಕಿದ್ದಾರೆ. ಇನ್ನು 93 ಲಿಸ್ಟ್‌ 'ಎ' ಹಾಗೂ 74 ಟಿ20 ಪಂದ್ಯಗಳನ್ನಾಡಿ 205 ವಿಕೆಟ್ ಕಬಳಿಸಿದ್ದಾರೆ. ಇನ್ನು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಮುಂಬೈ ಇಂಡಿಯನ್ಸ್‌ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಒಟ್ಟು 16 ಪಂದ್ಯಗಳನ್ನಾಡಿ 7 ವಿಕೆಟ್ ಕಬಳಿಸಿದ್ದರು. 

2019ರ ವಿಜಯ್ ಹಜಾರೆ ಟ್ರೋಫಿ ಫೈನಲ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಕಬಳಿಸುವ ಮೂಲಕ ಕರ್ನಾಟಕ ತಂಡವು ಚಾಂಪಿಯನ್‌ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಷ್ಟೇ ಅಲ್ಲದೇ ತಮ್ಮ ಹುಟ್ಟುಹಬ್ಬವನ್ನು ಸ್ಮರಣೀಯವಾಗಿ ಆಚರಿಸಿಕೊಂಡಿದ್ದರು. ಇದಾಗಿ ಒಂದು ತಿಂಗಳು ಬಳಿಕ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಹರ್ಯಾಣ ವಿರುದ್ದ 5 ವಿಕೆಟ್ ಕಬಳಿಸುವ ಮೂಲಕ ರಾಜ್ಯ ತಂಡ ಫೈನಲ್‌ಗೇರುವಲ್ಲು ಮಹತ್ತರ ಪಾತ್ರ ನಿಭಾಯಿಸಿದ್ದರು.