ಶುಭ್‌ಮನ್ ಗಿಲ್ ಖಾತೆಗೆ ಮತ್ತೊಂದು ಶತಕ ಸೇರ್ಪಡೆಕೇವಲ 87 ಎಸೆತಗಳನ್ನು ಎದುರಿಸಿ ಶತಕ ಪೂರೈಸಿದ ಗಿಲ್‌ಸತತ ಎರಡನೇ ಏಕದಿನ ಶತಕ ಬಾರಿಸಿದ ಟೀಂ ಇಂಡಿಯಾ ಓಪನ್ನರ್
ಹೈದರಾಬಾದ್(ಜ.18): ಟೀಂ ಇಂಡಿಯಾ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಖಾತೆಗೆ ಮತ್ತೊಂದು ಶತಕ ಸೇರ್ಪಡೆಯಾಗಿದೆ. ಲಂಕಾ ಎದುರಿನ ಕೊನೆಯ ಏಕದಿನ ಪಂದ್ಯದಲ್ಲಿ ಮಿಂಚಿನ ಅರ್ಧಶತಕ ಚಚ್ಚಿದ್ದ ಶುಭ್‌ಮನ್ ಗಿಲ್, ಇದೀಗ, ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಮತ್ತೊಂದು ಮೂರಂಕಿ ಇನಿಂಗ್ಸ್ ಆಡುವಲ್ಲಿ ಯಶಸ್ವಿಯಾಗಿದ್ದಾರೆ. ಗಿಲ್ ಕೇವಲ 87 ಎಸೆತಗಳನ್ನು ಎದುರಿಸಿ ವೃತ್ತಿಜೀವನದ ಮೂರನೇ ಏಕದಿನ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಟೀಂ ಇಂಡಿಯಾ 30 ಓವರ್ ಅಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 185 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ.
ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಎಚ್ಚರಿಕೆಯ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ 12.1 ಓವರ್‌ಗಳಲ್ಲಿ 60 ರನ್‌ಗಳ ಜತೆಯಾಟ ನಿಭಾಯಿಸಿದರು. ರೋಹಿತ್ ಶರ್ಮಾ 38 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 34 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ(8) ಹಾಗೂ ಇಶಾನ್ ಕಿಶನ್(5) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಗಿಲ್ ಶತಕ ಸಂಭ್ರಮ: ಲಂಕಾ ಎದುರಿನ ಕೊನೆಯ ಏಕದಿನ ಪಂದ್ಯದಲ್ಲಿ 116 ರನ್ ಬಾರಿಸಿದ್ದ ಗಿಲ್, ಇದೀಗ ಕಿವೀಸ್ ಎದುರು ಅದೇ ಲಯವನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಯಶಸ್ವಿಯಾದರು. ಆರಂಭದಲ್ಲೇ ದಿಢೀರ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ, ಭಾರತ ತಂಡಕ್ಕೆ ಗಿಲ್ ಸಮಯೋಚಿತ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು. ಗಿಲ್ ಕೇವಲ 87 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು.
ಕೆ ಎಲ್ ರಾಹುಲ್ ದಾಖಲೆ ಮುರಿದ ಗಿಲ್: ಇದು ಏಕದಿನ ಕ್ರಿಕೆಟ್‌ನಲ್ಲಿ ಶುಭ್‌ಮನ್ ಗಿಲ್ ಬಾರಿಸಿದ ಮೂರನೇ ಏಕದಿನ ಶತಕವಾಗಿದ್ದು, ಭಾರತ ಪರ ಅತಿ ಕಡಿಮೆ ಇನಿಂಗ್ಸ್‌ನಲ್ಲಿ 3 ಶತಕ ಬಾರಿಸಿದ ಎರಡನೇ ಬ್ಯಾಟರ್ ಎನ್ನುವ ಹಿರಿಮೆಗೆ ಶುಭ್‌ಮನ್ ಗಿಲ್ ಪಾತ್ರರಾಗಿದ್ದಾರೆ. ಶುಭ್‌ಮನ್ ಗಿಲ್ ಕೇವಲ 19 ಇನಿಂಗ್ಸ್‌ಗಳನ್ನಾಡಿ 3 ಶತಕ ಸಿಡಿಸುವ ಮೂಲಕ ಕೆ ಎಲ್ ರಾಹುಲ್ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಕೆ ಎಲ್ ರಾಹುಲ್ 24 ಇನಿಂಗ್ಸ್‌ಗಳನ್ನಾಡಿ 3 ಶತಕ ಪೂರೈಸಿದ್ದರು. ಇನ್ನು ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಕೇವಲ 17 ಇನಿಂಗ್ಸ್‌ಗಳನ್ನಾಡಿ 3 ಶತಕ ಪೂರೈಸಿದ್ದರು.
ICC ODI Rankings: ಲಂಕಾ ಎದುರು ಘರ್ಜಿಸಿದ ವಿರಾಟ್ ಕೊಹ್ಲಿ, ಸಿರಾಜ್‌ಗೆ ರ‍್ಯಾಂಕಿಂಗ್ ಭಡ್ತಿ..!
ಬಾಬರ್ ಅಜಂ, ವೀವ್ ರಿಚರ್ಡ್ಸ್ ದಾಖಲೆಯೂ ಬ್ರೇಕ್: 19ನೇ ಏಕದಿನ ಇನಿಂಗ್ಸ್ ಆಡುತ್ತಿರುವ ಶುಭ್‌ಮನ್ ಗಿಲ್, 109 ರನ್ ಬಾರಿಸುತ್ತಿದ್ದಂತೆಯೇ, ಏಕದಿನ ಕ್ರಿಕೆಟ್‌ನಲ್ಲಿ ಒಂದು ಸಾವಿರ ರನ್ ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಹಾಗೂ ಒಟ್ಟಾರೆ ಎರಡನೇ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಫಖರ್ ಜಮಾನ್ ಕೇವಲ 18 ಇನಿಂಗ್ಸ್‌ಗಳನ್ನಾಡಿ ಒಂದು ಸಾವಿರ ರನ್ ಪೂರೈಸಿದ್ದರು. ಇನ್ನು ಇಮಾಮ್ ಉಲ್ ಹಕ್ ಹಾಗೂ ಶುಭ್‌ಮನ್ ಗಿಲ್ 19 ಇನಿಂಗ್ಸ್‌ಗಳನ್ನಾಡಿ ಒಂದು ಸಾವಿರ ರನ್ ಪೂರೈಸುವ ಮೂಲಕ ಜಂಟಿ ಎರಡನೇ ಸ್ಥಾನಕ್ಕೇರಿದ್ದಾರೆ. ಇನ್ನು ವೀವ್ ರಿಚರ್ಡ್ಸ್, ಕೆವಿನ್ ಪೀಟರ್‌ಸನ್, ಜೋನಾಥನ್ ಟ್ರಾಟ್, ಕ್ವಿಂಟನ್ ಡಿ ಕಾಕ್, ಬಾಬರ್ ಅಜಂ, ರಾಸ್ಸಿ ವ್ಯಾನ್ ಡರ್ ಡುಸೇನ್ 21 ಇನಿಂಗ್ಸ್‌ಗಳನ್ನಾಡಿ ಸಾವಿರ ರನ್ ಪೂರೈಸಿದ್ದರು. ಇನ್ನು ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ 24 ಇನಿಂಗ್ಸ್‌ಗಳನ್ನಾಡಿ ಒಂದು ಸಾವಿರ ರನ್ ಪೂರೈಸಿದ್ದರು.
