Asianet Suvarna News Asianet Suvarna News

ICC ODI Rankings: ಲಂಕಾ ಎದುರು ಘರ್ಜಿಸಿದ ವಿರಾಟ್ ಕೊಹ್ಲಿ, ಸಿರಾಜ್‌ಗೆ ರ‍್ಯಾಂಕಿಂಗ್‌ ಭಡ್ತಿ..!

* ಐಸಿಸಿ ನೂತನ ಏಕದಿನ ಶ್ರೇಯಾಂಕ ಪ್ರಕಟ
* ಬ್ಯಾಟಿಂಗ್ ವಿಭಾಗದಲ್ಲಿ 4ನೇ ಸ್ಥಾನಕ್ಕೆ ಲಗ್ಗೆಯಿಟ್ಟ ವಿರಾಟ್ ಕೊಹ್ಲಿ
* ಬೌಲಿಂಗ್ ವಿಭಾಗದಲ್ಲಿ 3ನೇ ಸ್ಥಾನ ಪ್ರವೇಶಿಸಿದ ಮೊಹಮ್ಮದ್ ಸಿರಾಜ್

Virat Kohli Rises to 4th in ICC ODI Rankings Mohammed Siraj Moves to 3rd After Shining Against Sri Lanka kvn
Author
First Published Jan 18, 2023, 3:22 PM IST

ದುಬೈ(ಜ.18): ಇತ್ತೀಚೆಗಷ್ಟೇ ತವರಿನಲ್ಲಿ ಶ್ರೀಲಂಕಾ ವಿರುದ್ದ ಮುಕ್ತಾಯವಾದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದು, ಇದೀಗ ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಭಡ್ತಿ ಪಡೆದಿದ್ದಾರೆ. ಲಂಕಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ, 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿತ್ತು. ಈ ಸರಣಿ ಗೆಲುವಿನಲ್ಲಿ ಉಭಯ ಆಟಗಾರರು ಟೀಂ ಇಂಡಿಯಾ ಪರ ಪ್ರಮುಖ ಪಾತ್ರವನ್ನು ನಿಭಾಯಿಸಿದ್ದರು. 

ಲಂಕಾ ಎದುರಿನ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಎರಡು ಅದ್ಭುತ ಶತಕಗಳ ಸಹಿತ 283 ರನ್‌ ಬಾರಿಸುವ ಸರಣಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದರು. ಕಳೆದ 4 ಏಕದಿನ ಇನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 3 ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಹೀಗಾಗಿ ಇದೀಗ ವಿರಾಟ್ ಕೊಹ್ಲಿ ಎರಡು ಸ್ಥಾನ ಜಿಗಿತ ಕಂಡು 750 ರೇಟಿಂಗ್ ಅಂಕಗಳೊಂದಿಗೆ 4ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಸದ್ಯ ಪಾಕಿಸ್ತಾನ ನಾಯಕ ಬಾಬರ್ ಅಜಂ 887 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೇ, ದಕ್ಷಿಣ ಆಫ್ರಿಕಾದ ಕ್ರಿಕೆಟಿಗರಾದ ರಾಸ್ಸಿ ವ್ಯಾನ್‌ಡರ್ ಡುಸೇನ್‌(766) ಹಾಗೂ ಕ್ವಿಂಟನ್‌ ಡಿ ಕಾಕ್(759) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದಿದ್ದಾರೆ.

ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ ಮಾತ್ರವಲ್ಲದೇ, ಹಲವು ಕ್ರಿಕೆಟಿಗರ ರ‍್ಯಾಂಕಿಂಗ್‌ನಲ್ಲೂ ಮುಂಭಡ್ತಿ ಪಡೆದಿದ್ದಾರೆ. ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್‌, ಲಂಕಾ ಎದುರು ಒಂದು ಶತಕ ಹಾಗೂ ಒಂದು ಅರ್ಧಶತಕ ಸಹಿತ 69ರ ಸರಾಸರಿಯಲ್ಲಿ 207 ರನ್‌ ಬಾರಿಸಿದ್ದರು. ಹೀಗಾಗಿ ಗಿಲ್‌ ಬರೋಬ್ಬರಿ 10 ಸ್ಥಾನ ಜಿಗಿತ ಕಂಡು 26ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ರಿಕಿ ಪಾಂಟಿಂಗ್, ವಿರೇಂದ್ರ ಸೆಹ್ವಾಗ್ ಸಾರ್ವಕಾಲಿಕ ದಾಖಲೆ ಮುರಿಯಲು ಸಜ್ಜಾದ ವಿರಾಟ್ ಕೊಹ್ಲಿ..!

ಸಿರಾಜ್‌ಗೂ ಜಾಕ್‌ಪಾಟ್‌: ಹೈದರಾಬಾದ್ ಮೂಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಐಪಿಎಲ್ ಹತ್ತಿರವಾಗುತ್ತಿದ್ದಂತೆಯೇ ಭರ್ಜರಿ ಲಯಕ್ಕೆ ಮರಳಿದ್ದು, ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ. 28 ವರ್ಷದ ವೇಗಿ ಸಿರಾಜ್‌, ಲಂಕಾ ಎದುರಿನ ಏಕದಿನ ಸರಣಿಯಲ್ಲಿ ಒಟ್ಟು 9 ವಿಕೆಟ್ ಕಬಳಿಸುವ ಮೂಲಕ ಬರೋಬ್ಬರಿ 15 ಸ್ಥಾನ ಜಿಗಿತ ಕಂಡು, ವೃತ್ತಿಜೀವನದ ಶ್ರೇಷ್ಠ ಸಾಧನೆಯಾದ 3ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಸದ್ಯ ಸಿರಾಜ್‌ 685 ರೇಟಿಂಗ್‌ ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್(730) ಹಾಗೂ ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್‌(727) ರೇಟಿಂಗ್ ಅಂಕಗಳೊಂದಿಗೆ ಮೊದಲೆರಡು ಸ್ಥಾನದಲ್ಲಿದ್ದಾರೆ. ಕಿವೀಸ್‌ ಎದುರಿನ ಸರಣಿಯಲ್ಲಿ ಸಿರಾಜ್ ಅದ್ಭುತ ಪ್ರದರ್ಶನ ಮುಂದುರೆಸಿದರೆ, ರೇಟಿಂಗ್ ಅಂಕ ಮತ್ತಷ್ಟು ಸುಧಾರಿಸಬಹುದಾಗಿದೆ.

ಇನ್ನು ಲಂಕಾ ಎದುರಿನ ಕೊನೆಯ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದ ಲೆಗ್‌ಸ್ಪಿನ್ನರ್ 5 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಹೀಗಾಗಿ ಕುಲ್ದೀಪ್ ಯಾದವ್ 7 ಸ್ಥಾನ ಜಿಗಿತ ಕಂಡಿದ್ದು, 21ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.
 

Follow Us:
Download App:
  • android
  • ios