Asianet Suvarna News Asianet Suvarna News

"ಟೀಂ ಇಂಡಿಯಾ ಹಾರ್ದಿಕ್ ಪಾಂಡ್ಯಗೆ ತುರ್ತಾಗಿ ಬ್ಯಾಕ್‌ ಅಪ್ ಆಲ್ರೌಂಡರ್‌ ರೆಡಿ ಮಾಡಿಕೊಳ್ಳಬೇಕು": ಗಂಭೀರ್

ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡುತ್ತಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ
ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಪಾಂಡ್ಯಗೆ ಬ್ಯಾಕ್‌ಅಪ್ ಆಟಗಾರ ಬೇಕೆಂದ ಗಂಭೀರ್
ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಎಕ್ಸ್‌-ಫ್ಯಾಕ್ಟರ್ ಎಂದ ಗಂಭೀರ್

Team India need to quickly identify a back up all rounder for Hardik Pandya Says Gautam Gambhir kvn
Author
First Published Jan 4, 2023, 5:24 PM IST

ನವದೆಹಲಿ(ಜ.04): ಮುಂಬರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾವು ಆಲ್ರೌಂಡರ್ ಹಾರ್ದಿಕ್‌ ಪಾಂಡ್ಯ ಅವರಿಗೆ ಆದಷ್ಟು ಶೀಘ್ರದಲ್ಲಿ ಬ್ಯಾಕ್‌ಅಪ್‌ ಆಟಗಾರನನ್ನು ಸಿದ್ದಪಡಿಸಿಕೊಳ್ಳಬೇಕು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. 2023ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಭಾರತದಲ್ಲೇ ನಡೆಯಲಿದ್ದು, ಈ ಮಹತ್ತರ ಟೂರ್ನಿಗೆ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಬ್ಯಾಕ್‌ಅಪ್‌ ಆಟಗಾರನ ಅಗತ್ಯತೆಯ ಬಗ್ಗೆ ತಿಳಿ ಹೇಳಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಫಿಟ್ನೆಸ್ ಸಮಸ್ಯೆ ಎದುರಿಸುತ್ತಾ ಬಂದಿದ್ದ ಹಾರ್ದಿಕ್‌ ಪಾಂಡ್ಯ, ಇತ್ತೀಚೆಗಷ್ಟೇ ಸಂಪೂರ್ಣ ಫಿಟ್ನೆಸ್‌ನೊಂದಿಗೆ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. "ಭಾರತ ತಂಡವು ಆದಷ್ಟು ಬೇಗ ಹಾರ್ದಿಕ್‌ ಪಾಂಡ್ಯಗೆ ಬ್ಯಾಕ್‌ಅಪ್ ಆಟಗಾರರನ್ನು ಹುಡುಕಿಕೊಳ್ಳಬೇಕು. ಒಂದು ವೇಳೆ ಹಾರ್ದಿಕ್ ಪಾಂಡ್ಯ ಅವರಿಗೇನಾದರೂ ಆದರೆ, ಭಾರತ ತಂಡವು ದೊಡ್ಡ ಸಮಸ್ಯೆಗೆ ಸಿಲುಕಲಿದೆ" ಎಂದು ಗೌತಮ್ ಗಂಭೀರ್ ಎಚ್ಚರಿಕೆ ನೀಡಿದ್ದಾರೆ.

ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್ ವಿಶ್ರಾಂತಿ ಪಡೆದಿದ್ದಾರೆ. ಹೀಗಾಗಿ ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾ ಟಿ20 ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್ ಉಪನಾಯಕರಾಗಿ ಪಾಂಡ್ಯಗೆ ಸಾಥ್ ನೀಡುತ್ತಿದ್ದಾರೆ. ಟಿ20 ಸರಣಿಗೆ ಹಿರಿಯ ಆಟಗಾರರನ್ನು ಕೈಬಿಡಲಾಗಿದೆಯೇ ಅಥವಾ ವಿಶ್ರಾಂತಿ ನೀಡಲಾಗಿದೆಯೇ ಎನ್ನುವ ಕುರಿತಂತೆ ಯಾವುದೇ ಮಾಹಿತಿಯನ್ನು ಬಿಸಿಸಿಐ ಬಿಟ್ಟುಕೊಟ್ಟಿಲ್ಲ. 

IND vs SL ಭಾರತದ ದಾಳಿಗೆ ಲಂಕಾ ದಹನ, ಮೊದಲ ಟಿ20 ಪಂದ್ಯ ಗೆದ್ದ ಹಾರ್ದಿಕ್ ಸೈನ್ಯ!

ಸ್ಟಾರ್‌ ಸ್ಪೋರ್ಟ್ಸ್‌ನ "Road To World Cup Glory" ಶೋನಲ್ಲಿ ಭಾಗವಹಿಸಿ ಮಾತನಾಡಿದ ಗೌತಮ್ ಗಂಭೀರ್, " ಹಾರ್ದಿಕ್ ಪಾಂಡ್ಯ ಓರ್ವ ಅದ್ಭುತ ಆಟಗಾರ. ಕಾಂಟ್ರೋವರ್ಸಿ ಬಳಿಕ ಹಾರ್ದಿಕ್ ಪಾಂಡ್ಯ ಕಮ್‌ಬ್ಯಾಕ್ ಮಾಡಿದ ರೀತಿ ನಿಜಕ್ಕೂ ಅದ್ಭುತ. ಅವರು ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಐಪಿಎಲ್ ಕಪ್ ಜಯಿಸಿದ್ದಾರೆ. ಅವರಿಂದ ತಂಡ ಏನೆಲ್ಲಾ ನಿರೀಕ್ಷೆ ಮಾಡುತ್ತದೋ ಅದೆಲ್ಲವನ್ನು ಅವರು ನೀಡುತ್ತಾ ಬಂದಿದ್ದಾರೆ. ಇನ್ನು ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ದ 10 ಓವರ್ ಅಂತ್ಯಕ್ಕೆ ಭಾರತ 2 ವಿಕೆಟ್ ಕಳೆದುಕೊಂಡು ಕೇವಲ 62 ರನ್ ಬಾರಿಸಿತ್ತು. ಆ ಸಂದರ್ಭದಲ್ಲಿ ಕ್ರೀಸ್‌ಗಿಳಿದು ಹಾರ್ದಿಕ್ ಪಾಂಡ್ಯ ಅದ್ಭುತವಾಗಿ ಆಡಿದ್ದರು. ನನ್ನ ಪ್ರಕಾರ ಅವರು ತಂಡದ ಎಕ್‌-ಫ್ಯಾಕ್ಟರ್. ಅವರು ತಮ್ಮ ಪ್ರದರ್ಶನದ ಜತೆಗೆ ಸಹ ಆಟಗಾರರಲ್ಲಿಯೂ ಅದೇ ಧೈರ್ಯ ತುಂಬಲಿದ್ದಾರೆ ಎನ್ನುವ ವಿಶ್ವಾಸವಿದೆ" ಎಂದು ಗಂಭೀರ್ ಹೇಳಿದ್ದಾರೆ.

Follow Us:
Download App:
  • android
  • ios