ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಜೂನ್ 07ರಿಂದ ಆರಂಭಕೆ ಎಲ್ ರಾಹುಲ್ ಬದಲಿಗೆ ಟೀಂ ಇಂಡಿಯಾದಲ್ಲಿ ಇಶಾನ್ ಕಿಶನ್‌ಗೆ ಸ್ಥಾನಭಾರತ ಪರ ಒಂದೇ ಒಂದು ಟೆಸ್ಟ್ ಪಂದ್ಯವನ್ನಾಡ ಇಶಾನ್ ಕಿಶನ್ 

ನವ​ದೆ​ಹ​ಲಿ(ಮೇ.09): ಜೂನ್ 7ರಿಂದ ಆರಂಭ​ವಾ​ಗ​ಲಿ​ರುವ ವಿಶ್ವ ಟೆಸ್ಟ್‌ ಚಾಂಪಿ​ಯ​ನ್‌​ಶಿಪ್‌ ಫೈನಲ್‌ ಪಂದ್ಯಕ್ಕೆ ಕೆ.ಎ​ಲ್‌.​ರಾ​ಹುಲ್‌ ಬದಲು ಭಾರತ ತಂಡಕ್ಕೆ ಯುವ ವಿಕೆಟ್‌ ಕೀಪರ್‌ ಬ್ಯಾಟರ್‌ ಇಶಾನ್‌ ಕಿಶನ್‌ ಆಯ್ಕೆ​ಯಾ​ಗಿ​ದ್ದಾ​ರೆ. ಇತ್ತೀ​ಚೆಗೆ ಆರ್‌​ಸಿಬಿ ವಿರು​ದ್ಧದ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಗಾಯಗೊಂಡಿದ್ದ ರಾ​ಹುಲ್‌ ಶೀಘ್ರ​ದಲ್ಲೇ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೀಗಾಗಿ ಅವರ ಸ್ಥಾನ​ವನ್ನು ಇಶಾನ್‌ ತುಂಬ​ಲಿ​ದ್ದಾರೆ ಎಂದು ಬಿಸಿ​ಸಿಐ ತಿಳಿ​ಸಿದೆ. 

ಆದರೆ ಎಡಗೈ ವೇಗಿ ಜಯ್‌​ದೇವ್‌ ಉನಾ​ದ್ಕಟ್‌ ಬಗ್ಗೆ ಕಾದು ನೋಡುವ ತಂತ್ರ ಅನು​ಸ​ರಿ​ಸಿದ್ದು, ಅವರ ಲಭ್ಯತೆ ಬಗ್ಗೆ ಶೀಘ್ರ​ದಲ್ಲೇ ಮಾಹಿತಿ ನೀಡು​ವು​ದಾಗಿ ತಿಳ​ಸಿ​ದೆ. ಇದೇ ವೇಳೆ ತಾರಾ ಆಟ​ಗಾ​ರ​ರಾದ ಋುತು​ರಾಜ್‌ ಗಾಯ​ಕ್ವಾಡ್‌, ಸೂರ್ಯಕು​ಮಾರ್‌ ಯಾದವ್‌ ಹಾಗೂ ವೇಗಿ ಮುಕೇಶ್‌ ಕುಮಾರ್‌ ಮೀಸಲು ಆಟ​ಗಾ​ರ​ರಾಗಿ ತಂಡದ ಜೊತೆ ಪ್ರಯಾ​ಣಿ​ಸ​ಲಿ​ದ್ದಾರೆ.

ರಿಷಭ್ ಪಂತ್, ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಹೀಗಾಗಿ ವಿಕೆಟ್ ಕೀಪರ್ ಬ್ಯಾಟರ್ ರೂಪದಲ್ಲಿ ಕೆ ಎಸ್ ಭರತ್ ಹಾಗೂ ಕೆ ಎಲ್ ರಾಹುಲ್ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದೀಗ ಗಾಯಾಳು ಕೆ ಎಲ್ ರಾಹುಲ್ ಬದಲಿಗೆ ಜಾರ್ಖಂಡ್ ಮೂಲದ ಮತ್ತೋರ್ವ ವಿಕೆಟ್ ಕೀಪರ್ ಇಶಾನ್ ಕಿಶನ್ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

Scroll to load tweet…

IPL, ಟೆಸ್ಟ್ ವಿಶ್ವಕಪ್‌ನಿಂದ ಹೊರಬಿದ್ದ ಕೆ ಎಲ್ ರಾಹುಲ್..! ಭಾವನಾತ್ಮಕ ಸಂದೇಶ ರವಾನಿಸಿದ ಕನ್ನಡಿಗ

ಇಶಾನ್‌ ಕಿಶನ್‌ ಇದುವರೆಗೂ ಭಾರತ ಪರ ಒಂದೇ ಒಂದು ಟೆಸ್ಟ್‌ ಪಂದ್ಯವನ್ನಾಡಿಲ್ಲ. ಆಸ್ಟ್ರೇಲಿಯಾ ಎದುರಿನ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗೆ ಕಿಶನ್ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರಾದರೂ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಇಶಾನ್ ಕಿಶನ್, ಭಾರತ ಪರ 14 ಏಕದಿನ ಹಾಗೂ 27 ಟಿ20 ಪಂದ್ಯಗಳನ್ನಾಡಿದ್ದಾರೆ. ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ಭರತ್ 4 ಪಂದ್ಯಗಳ 6 ಇನಿಂಗ್ಸ್‌ಗಳಿಂದ ಕೇವಲ 101 ರನ್ ಗಳಿಸಿದ್ದರು. ಇದೀಗ ಇಶಾನ್ ಕಿಶನ್‌, ಭರತ್ ಈ ಇಬ್ಬರಲ್ಲಿ ಯಾರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.

ಜೂನ್ 07ರಿಂದ 11ರ ವರೆಗೆ ಲಂಡನ್‌ನ ದಿ ಓವೆಲ್ ಮೈದಾನದಲ್ಲಿ ನಡೆಯಲಿರುವ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ದ ಕಾದಾಡಲಿದೆ. ಮೊದಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿಯೂ ಭಾರತ ತಂಡವು ಪ್ರಶಸ್ತಿ ಸುತ್ತು ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಸೋಲು ಅನುಭವಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

16ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮೇ 28ರಂದು ಮುಕ್ತಾಯವಾಗಲಿದೆ. ಇದರ ಬೆನ್ನಲ್ಲೇ ಆಟಗಾರರು ಲಂಡನ್‌ನತ್ತ ಪ್ರಯಾಣ ಬೆಳೆಸಲಿದ್ದಾರೆ. ಐಪಿಎಲ್‌ ಲೀಗ್ ಹಂತದ ಪಂದ್ಯಗಳು ಮೇ 21ಕ್ಕೆ ಮುಕ್ತಾಯವಾಗಲಿದ್ದು, ನಾಕೌಟ್ ಹಂತಕ್ಕೇರದ ತಂಡಗಳ ಭಾರತೀಯ ಆಟಗಾರರು ಮೇ 23ರಂದು ನೇರವಾಗಿ ಲಂಡನ್‌ಗೆ ವಿಮಾನವೇರಲಿದ್ದಾರೆ. ಇನ್ನು ನಾಕೌಟ್ ಹಂತಕ್ಕೇರಿದ ತಂಡಗಳ ಆಟಗಾರರು ಪಂದ್ಯ ಮುಕ್ತಾಯವಾಗುತ್ತಿದ್ದಂತೆಯೇ ಹಂತ ಹಂತವಾಗಿ ಇಂಗ್ಲೆಂಡ್‌ನತ್ತ ಪ್ರಯಾಣ ಬೆಳೆಸಲಿದ್ದಾರೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯಕ್ಕೆ ಭಾರತ ತಂಡ ಹೀಗಿದೆ ನೋಡಿ:

ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಇಶಾನ್ ಕಿಶನ್‌, ಕೆ ಎಸ್ ಭರತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್.

ಮೀಸಲು ಆಟಗಾರರು: ಋುತು​ರಾಜ್‌ ಗಾಯ​ಕ್ವಾಡ್‌, ಸೂರ್ಯಕು​ಮಾರ್‌ ಯಾದವ್, ವೇಗಿ ಮುಕೇಶ್‌ ಕುಮಾರ್‌