ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರನೇ ಹಾಗೂ ನಿರ್ಣಾಯಕ ಪಂದ್ಯಕ್ಕೆ ಕಟಕ್ ಆತಿಥ್ಯ ವಹಿಸಿದೆ. ವಿರಾಟ್ ಕೊಹ್ಲಿ ರನ್ ಬರ ನೀಗಿಸಲು ಎದುರು ನೋಡುತ್ತಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಕಟಕ್‌(ಡಿ.22): ವೆಸ್ಟ್‌ಇಂಡೀಸ್‌ ವಿರುದ್ಧ ಸತತ 10ನೇ ಏಕದಿನ ಸರಣಿ ಗೆಲ್ಲುವ ಗುರಿ ಹೊಂದಿರುವ ಭಾರತ, ಭಾನುವಾರ ಇಲ್ಲಿನ ಬಾರಬತಿ ಕ್ರೀಡಾಂಗಣದಲ್ಲಿ ನಡೆಯಲಿರುವ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. 3 ಪಂದ್ಯಗಳ ಸರಣಿ 1-1ರಲ್ಲಿ ಸಮಗೊಂಡಿದ್ದು, ರೋಚಕ ಕದನಕ್ಕೆ ಸಾಕ್ಷಿಯಾಗಲು ಇಲ್ಲಿನ ಕ್ರಿಕೆಟ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ವಿಂಡೀಸ್‌ ಅಚ್ಚರಿಯ ಗೆಲುವು ಸಾಧಿಸಿತ್ತು. ವಿಶಾಖಪಟ್ಟಣಂನಲ್ಲಿ ಪುಟಿದೆದ್ದ ಭಾರತ ಬೃಹತ್‌ ಮೊತ್ತ ಕಲೆಹಾಕಿದ್ದಲ್ಲದೆ ಉತ್ತಮ ಬೌಲಿಂಗ್‌ ದಾಳಿ ಸಹ ನಡೆಸಿ ಭರ್ಜರಿ ಗೆಲುವು ಕಂಡಿತ್ತು. ಈ ಪಂದ್ಯದಲ್ಲಿ ಮತ್ತೊಂದು ಸಂಘಟಿತ ಪ್ರದರ್ಶನ ತೋರಿದರಷ್ಟೇ ಭಾರತಕ್ಕೆ ಗೆಲುವು ದೊರೆಯಲಿದೆ.

ವಿಸ್ಡನ್ ದಶಕದ ಏಕದಿನ ತಂಡ ಪ್ರಕಟ; 3 ಭಾರತೀಯರಿಗೆ ಸ್ಥಾನ!

ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌.ರಾಹುಲ್‌ ಲಯಕ್ಕೆ ಮರಳಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ ನಾಯಕ ಕೊಹ್ಲಿ ಈ ಸರಣಿಯಲ್ಲಿ ವೈಫಲ್ಯ ಕಂಡಿದ್ದಾರೆ. ಮೊದಲ ಪಂದ್ಯದಲ್ಲಿ 4 ರನ್‌ಗೆ ಔಟಾಗಿದ್ದ ಕೊಹ್ಲಿ, 2ನೇ ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದರು. 2019ರಲ್ಲಿ ಭಾರತ ತಂಡಕ್ಕಿದು ಕೊನೆಯ ಏಕದಿನ. ದೊಡ್ಡ ಇನ್ನಿಂಗ್ಸ್‌ನೊಂದಿಗೆ ಈ ವರ್ಷಕ್ಕೆ ವಿದಾಯ ಹೇಳಲು ವಿರಾಟ್‌ ಕಾತರಿಸುತ್ತಿದ್ದಾರೆ.

INDvWI ನಿರ್ಣಾಯಕ ಪಂದ್ಯ: ಟೀಂ ಇಂಡಿಯಾದಲ್ಲಿ 1 ಬದಲಾವಣೆ ಖಚಿತ!

ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌ ಸಹ ಉತ್ತಮ ಲಯದಲ್ಲಿದ್ದು, ಅವರಿಂದ ಮತ್ತೊಮ್ಮೆ ಸ್ಫೋಟಕ ಆಟ ನಿರೀಕ್ಷೆ ಮಾಡಲಾಗುತ್ತಿದೆ. ದೀಪಕ್‌ ಚಹರ್‌ ಗಾಯಗೊಂಡು ಹೊರಬಿದ್ದಿರುವ ಕಾರಣ, ದೆಹಲಿ ವೇಗಿ ನವ್‌ದೀಪ್‌ ಸೈನಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಬಹುದು. ಹಿರಿಯ ವೇಗಿ ಮೊಹಮದ್‌ ಶಮಿ ತಂಡದ ಬೌಲಿಂಗ್‌ ಪಡೆಯನ್ನು ಮುನ್ನಡೆಸಲಿದ್ದು, ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಕುಲ್ದೀಪ್‌ ಯಾದವ್‌ ಹಾಗೂ ರವೀಂದ್ರ ಜಡೇಜಾ, ಕೆರಿಬಿಯನ್ನರನ್ನು ಸ್ಪಿನ್‌ ಖೆಡ್ಡಾಕ್ಕೆ ಬೀಳಿಸಲು ರಣತಂತ್ರ ಹೂಡಬೇಕಿದೆ.

ಜಯದ ತವಕದಲ್ಲಿ ವಿಂಡೀಸ್‌: ವೆಸ್ಟ್‌ಇಂಡೀಸ್‌ ತಂಡ 13 ವರ್ಷಗಳ ಬಳಿಕ ಭಾರತ ವಿರುದ್ಧ ದ್ವಿಪಕ್ಷೀಯ ಏಕದಿನ ಸರಣಿ ಜಯಿಸಿಲು ಕಾತರಿಸುತ್ತಿದೆ. ತಂಡ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದು, ಮತ್ತೊಂದು ಭರ್ಜರಿ ಪ್ರದರ್ಶನ ತೋರಬೇಕಿದೆ. ಶಿಮ್ರನ್‌ ಹೆಟ್ಮೇಯರ್‌, ನಿಕೋಲಸ್‌ ಪೂರನ್‌ ಮೇಲೆ ನಿರೀಕ್ಷೆ ಹೆಚ್ಚಿದೆ. ಶೆಲ್ಡನ್‌ ಕಾಟ್ರೆಲ್‌ ತಂಡದ ಬೌಲಿಂಗ್‌ ಟ್ರಂಪ್‌ ಕಾರ್ಡ್‌ ಎನಿಸಿದ್ದು, ಉಳಿದ ಬೌಲರ್‌ಗಳಿಂದ ಉತ್ತಮ ಬೆಂಬಲ ದೊರೆತರೆ ವಿಂಡೀಸ್‌ ಗೆಲುವಿನ ಹಾದಿ ಸುಗಮಗೊಳ್ಳಲಿದೆ.

ಒತ್ತಡದಲ್ಲಿ ಟೀಂ ಇಂಡಿಯಾ

ಭಾರತ ತಂಡ ಮಾಚ್‌ರ್‍ನಲ್ಲಿ ಆಸ್ಪ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯನ್ನು 2-3ರಲ್ಲಿ ಸೋತಿತ್ತು. ಕಳೆದ 15 ವರ್ಷಗಳಲ್ಲಿ ಭಾರತ ತಂಡ ತವರಿನಲ್ಲಿ ಸತತ 2 ಏಕದಿನ ಸರಣಿಗಳನ್ನು ಸೋತಿಲ್ಲ. ಹೀಗಾಗಿ, ಅನಗತ್ಯ ದಾಖಲೆಗೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳುವ ಒತ್ತಡದಲ್ಲಿ ವಿರಾಟ್‌ ಕೊಹ್ಲಿ ಪಡೆ ಇದೆ.

ಪಿಚ್‌ ರಿಪೋರ್ಟ್‌

ವಿಶಾಖಪಟ್ಟಣಂ ರೀತಿ ಕಟಕ್‌ನಲ್ಲೂ ರನ್‌ ಹೊಳೆ ಹರಿಯುವ ನಿರೀಕ್ಷೆ ಇದೆ. ಕಳೆದ ಬಾರಿ ಇಲ್ಲಿ ಏಕದಿನ ಪಂದ್ಯ ನಡೆದಾಗ ಭಾರತ ಮೊದಲು ಬ್ಯಾಟ್‌ ಮಾಡಿ 381 ರನ್‌ ಗಳಿಸಿತ್ತು. ಇಂಗ್ಲೆಂಡ್‌ 366 ರನ್‌ ಗಳಿಸಿ, 15 ರನ್‌ಗಳಿಂದ ಸೋತಿತ್ತು. ಪಿಚ್‌ ವೇಗ ಹೊಂದಿದ್ದು, ಸಂಜೆ ಮೇಲೆ ಬೀಳುವ ಇಬ್ಬನಿ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ(ನಾಯಕ), ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಕೇದಾರ್‌ ಜಾಧವ್‌, ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್‌, ಮೊಹಮದ್‌ ಶಮಿ, ನವ್‌ದೀಪ್‌ ಸೈನಿ, ಶಾರ್ದೂಲ್‌/ಚಹಲ್‌.

ವಿಂಡೀಸ್‌: ಎವಿನ್‌ ಲೆವಿಸ್‌, ಶಾಯ್‌ ಹೋಪ್‌, ಶಿಮ್ರನ್‌ ಹೆಟ್ಮೇಯರ್‌, ರೋಸ್ಟನ್‌ ಚೇಸ್‌, ನಿಕೋಲಸ್‌ ಪೂರನ್‌, ಕೀರನ್‌ ಪೊಲ್ಲಾರ್ಡ್‌(ನಾಯಕ), ಜೇಸನ್‌ ಹೋಲ್ಡರ್‌, ಕೀಮೋ ಪೌಲ್‌, ಅಲ್ಜಾರಿ ಜೋಸೆಫ್‌, ಖಾರ್ರಿ ಪಿಯೆರ್‌, ಶೆಲ್ಡನ್‌ ಕಾಟ್ರೆಲ್‌.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1