ಭಾರತದಲ್ಲೇ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಮಾ.20): ಈ ವರ್ಷ ಅಕ್ಟೋಬರ್‌, ನವೆಂಬರ್‌ನಲ್ಲಿ ಭಾರತದಲ್ಲೇ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ತಯಾರಿ ನಡೆಸುವ ಸಲುವಾಗಿ ಟೀಂ ಇಂಡಿಯಾ, ವಿಶ್ವಕಪ್‌ ಆರಂಭಕ್ಕೆ ಕೆಲ ವಾರಗಳ ಮೊದಲು ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್‌ ವಿರುದ್ಧ ಟಿ20 ಸರಣಿಗಳನ್ನು ಆಡಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಐಪಿಎಲ್‌ ಬಳಿಕ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಡಲು ಇಂಗ್ಲೆಂಡ್‌ಗೆ ತೆರಳಲಿರುವ ವಿರಾಟ್ ಕೊಹ್ಲಿ ಪಡೆ, ಆ ಪಂದ್ಯದ ನಂತರ ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಭಾರತಕ್ಕೆ ವಾಪಸಾದ ಬಳಿಕ ಸೆಪ್ಟೆಂಬರ್‌ ಕೊನೆ ವಾರ, ಅಕ್ಟೋಬರ್‌ ಮೊದಲ ವಾರದಲ್ಲಿ 2 ಟಿ20 ಸರಣಿಗಳನ್ನು ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಕೊರೋನಾದಿಂದಾಗಿ ಅರ್ಧಕ್ಕೆ ರದ್ದಾಗಿದ್ದ ಸರಣಿಯ ನಷ್ಟ ತುಂಬಿಕೊಡುವ ಸಲುವಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ದ್ವಿಪಕ್ಷೀಯ ಸರಣಿಯಾಡಲು ಒಪ್ಪಿಕೊಂಡಿವೆ. ಸದ್ಯದ ವೇಳಾಪಟ್ಟಿಯ ಪ್ರಕಾರ ಪ್ರಸ್ತುತ ಇಂಗ್ಲೆಂಡ್‌ ವಿರುದ್ದದ ಸರಣಿ ಬಳಿಕ ಟೀಂ ಇಂಡಿಯಾ ಯಾವುದೇ ಟಿ20 ಸರಣಿ ಆಡುತ್ತಿಲ್ಲ. ಹೀಗಾಗಿ ಬಿಸಿಸಿಐ ಟಿ20 ವಿಶ್ವಕಪ್‌ ಪೂರ್ವಭಾವಿ ತಯಾರಿಗಾಗಿ ಟಿ20 ಸರಣಿ ಆಯೋಜಿಸಲಿದೆ ಎಂದು ವರದಿಯಾಗಿದೆ. 

ಟಿ20 ಟ್ರೋಫಿಗಾಗಿಂದು ಇಂಡೋ-ಇಂಗ್ಲೆಂಡ್‌ ಫೈನಲ್‌ ಫೈಟ್‌..!

ಸದ್ಯ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಟಿ20 ಸರಣಿ 2-2ರಲ್ಲಿ ಸಮಗೊಂಡಿದ್ದು, ಇದೀಗ ನಿರ್ಣಾಯಕ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್‌ 20ರಂದು ಮೊಟೇರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಯಾರು ಟ್ರೋಫಿಗೆ ಮುತ್ತಿಕ್ಕಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.