ಅಹಮದಾಬಾದ್‌(ಮಾ.20): ಕಠಿಣ ವಾತಾವರಣದಲ್ಲೂ ಬಲಿಷ್ಠ ಇಂಗ್ಲೆಂಡ್‌ ತಂಡವನ್ನು ಸೋಲಿಸಿ ಸರಣಿಯಲ್ಲಿ ಸಮಬಲ ಸಾಧಿಸಿರುವ ಭಾರತ, ಶನಿವಾರ ನಡೆಯಲಿರುವ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ಗೆದ್ದು ಟೆಸ್ಟ್‌ ಸರಣಿ ಬಳಿಕ ಟಿ20 ಸರಣಿಯಲ್ಲೂ ತನ್ನದಾಗಿಸಿಕೊಳ್ಳುವ ಉತ್ಸಾಹದಲ್ಲಿದೆ. ಜೊತೆಗೆ ಟಿ20 ವಿಶ್ವಕಪ್‌ಗೆ ಸೂಕ್ತ ಆಟಗಾರರನ್ನು ಗುರುತಿಸಲು ಮತ್ತೊಂದು ಅವಕಾಶ ಇದಾಗಿದೆ.

ಈ ಪಂದ್ಯದ ಫಲಿತಾಂಶ ಏನೇ ಆಗಿದ್ದರೂ, ಈ ವರ್ಷ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತ ತಂಡಕ್ಕೆ ಕೆಲ ಅದ್ಭುತ ಪ್ರತಿಭೆಗಳು ದೊರೆತಿದ್ದಾರೆ. ಸೂರ್ಯ ಕುಮಾರ್‌ ಯಾದವ್‌, ಇಶಾನ್‌ ಕಿಶನ್‌ ಆಟ ತಂಡದ ಆಡಳಿತದ ಮನ ಸೆಳೆದಿದೆ. ಆಲ್ರೌಂಡರ್‌ ರಾಹುಲ್‌ ತೆವಾಟಿಯಾಗಿನ್ನೂ ಅವಕಾಶ ಸಿಕ್ಕಿಲ್ಲ. ಈ ಪಂದ್ಯದಲ್ಲಿ ಅವರನ್ನು ಆಡಿಸಿದರೆ ಅಚ್ಚರಿಯಿಲ್ಲ.

ರೋಹಿತ್ ಶರ್ಮಾಗೆ ನಾಯಕತ್ವ ನೀಡಲು 4ನೇ ಟಿ20 ಪಂದ್ಯದ 4 ಓವರ್ ಸಾಕು!

ಮತ್ತೊಂದು ಮಹತ್ವದ ಬೆಳವಣಿಗೆ ಎಂದರೆ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ. ಗುರುವಾರದ ಪಂದ್ಯದಲ್ಲಿ 4 ಓವರ್‌ ಬೌಲ್‌ ಮಾಡಿ ಕೇವಲ 16 ರನ್‌ ನೀಡಿ 2 ವಿಕೆಟ್‌ ಕಿತ್ತಿದ್ದ ಹಾರ್ದಿಕ್‌, ತಂಡದ ನಿರೀಕ್ಷೆ ಉಳಿಸಿಕೊಂಡಿದ್ದರು. ಆದರೆ ಸಿಗುತ್ತಿರುವ ಅವಕಾಶಗಳನ್ನು ಪದೇ ಪದೇ ವ್ಯರ್ಥ ಮಾಡುತ್ತಿರುವ ಕೆ.ಎಲ್‌.ರಾಹುಲ್‌ ತಂಡದಿಂದ ಹೊರಬೀಳುವ ಆತಂಕದಲ್ಲಿದ್ದಾರೆ. ರಾಹುಲ್‌ ಸ್ಥಾನವನ್ನು ಇಶಾನ್‌ ಕಿಶನ್‌ಗೆ ನೀಡುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ವಾಷಿಂಗ್ಟನ್‌ ಸುಂದರ್‌ ಬದಲಿಗೆ ತೆವಾಟಿಯಾ, ಶಾರ್ದೂಲ್‌ ಬದಲು ಟಿ.ನಟರಾಜನ್‌ ಆಡಬಹುದು.

ಇಂಗ್ಲೆಂಡ್‌ ತಂಡ ಸಹ ತನ್ನ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಜೋಸ್‌ ಬಟ್ಲರ್‌ ಹಾಗೂ ಡೇವಿಡ್‌ ಮಲಾನ್‌ರಿಂದ ಸ್ಥಿರ ಪ್ರದರ್ಶನ ಎದುರು ನೋಡುತ್ತಿದೆ. ವೇಗಿಗಳಾದ ಜೋಫ್ರಾ ಆರ್ಚರ್‌ ಹಾಗೂ ಮಾರ್ಕ್ ವುಡ್‌ ಉತ್ತಮ ಲಯದಲ್ಲಿದ್ದು, ಅವರಿಗೆ ಕ್ರಿಸ್‌ ಜೋರ್ಡನ್‌ ಸರಿಯಾದ ರೀತಿಯಲ್ಲಿ ಬೆಂಬಲಿಸುತ್ತಿಲ್ಲ. ಇದು ಇಂಗ್ಲೆಂಡ್‌ ಚಿಂತೆಗೆ ಕಾರಣವಾಗಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ರಾಹುಲ್‌/ಕಿಶನ್‌, ಸೂರ್ಯಕುಮಾರ್‌, ವಿರಾಟ್‌ ಕೊಹ್ಲಿ(ನಾಯಕ), ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ವಾಷಿಂಗ್ಟನ್‌/ತೆವಾಟಿಯಾ, ರಾಹುಲ್‌ ಚಹರ್‌, ಭುವನೇಶ್ವರ್‌, ಶಾರ್ದೂಲ್‌/ನಟರಾಜನ್‌.

ಇಂಗ್ಲೆಂಡ್‌: ಜೋಸ್‌ ಬಟ್ಲರ್‌, ಜೇಸನ್‌ ರಾಯ್‌, ಡೇವಿಡ್‌ ಮಲಾನ್‌, ಜಾನಿ ಬೇರ್‌ಸ್ಟೋವ್‌, ಇಯಾನ್‌ ಮೊರ್ಗನ್‌ (ನಾಯಕ), ಬೆನ್‌ ಸ್ಟೋಕ್ಸ್‌, ಸ್ಯಾಮ್‌ ಕರ್ರನ್‌, ಜೋಫ್ರಾ ಆರ್ಚರ್‌, ಆದಿಲ್‌ ರಶೀದ್‌, ಕ್ರಿಸ್‌ ಜೋರ್ಡನ್‌, ಮಾರ್ಕ್ ವುಡ್‌.

ಸ್ಥಳ: ಅಹಮದಾಬಾದ್‌
ಪಂದ್ಯ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್