ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 3 ಸ್ಪಿನ್ನರ್ಸ್ ಕಣಕ್ಕೆ?
ಇಂಗ್ಲೆಂಡ್ ವಿರುದ್ದ ಫೆಬ್ರವರಿ 05ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಮೂವರು ತಜ್ಞ ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜ.27): ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಆರಂಭಕ್ಕೆ ಇನ್ನು ಒಂದು ವಾರ ಮಾತ್ರ ಬಾಕಿ ಇದ್ದು, ಈಗಾಗಲೇ ಭಾರತ ತಂಡ ಅಗತ್ಯವಿರುವ ತಂತ್ರಗಾರಿಕೆ ರೂಪಿಸುತ್ತಿದೆ. ಮೊದಲ ಟೆಸ್ಟ್‌ನಲ್ಲಿ ಭಾರತ ಮೂವರು ಸ್ಪಿನ್ನರ್‌ಗಳನ್ನು ಆಡಿಸುವ ಸಾಧ್ಯತೆ ಇದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಆರ್. ಅಶ್ವಿನ್ ಜೊತೆಯಲ್ಲಿ ಕುಲ್ದೀಪ್ ಯಾದವ್ ಹಾಗೂ ವಾಷಿಂಗ್ಟನ್ ಸುಂದರ್ ಕಣಕ್ಕಿಳಿಯಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. 2016ರಲ್ಲಿ ಕಳೆದ ಬಾರಿ ಇಂಗ್ಲೆಂಡ್ ಭಾರತಕ್ಕೆ ಆಗಮಿಸಿದ್ದಾಗ 5 ಪಂದ್ಯಗಳ ಸರಣಿಯಲ್ಲಿ ಭಾರತ ಮೂವರು ಸ್ಪಿನ್ನರ್‌ಗಳನ್ನು ಆಡಿಸಿತ್ತು. ಪ್ರಮುಖವಾಗಿ ಅಶ್ವಿನ್ ಹಾಗೂ ಜಡೇಜಾ ಸೇರಿ ಒಟ್ಟು 54 ವಿಕೆಟ್ ಕಬಳಿಸಿದ್ದರು. ಈ ಬಾರಿ ಜಡೇಜಾ ಗಾಯಗೊಂಡು ಮೊದಲೆರಡು ಟೆಸ್ಟ್‌ಗಳಿಂದ ಹೊರಬಿದ್ದಿರುವ ಕಾರಣ, ವಾಷಿಂಗ್ಟನ್ ಸುಂದರ್‌ಗೆ ಸ್ಥಾನ ಸಿಗಲಿದೆ.
ಇಂಗ್ಲೆಂಡ್ ಸರಣಿಗೂ ಮುನ್ನ ಧೋನಿ ಮನೆಗೆ ಪಂತ್ ಭೇಟಿ!
ಆಸ್ಪ್ರೇಲಿಯಾ ಪ್ರವಾಸದಲ್ಲಿ ಅವಕಾಶ ಸಿಗದ ಕುಲ್ದೀಪ್‌ಗೆ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಸ್ಥಾನ ಸಿಗಲಿದೆ ಎಂದು ಬೌಲಿಂಗ್ ಕೋಚ್ ಭರತ್ ಅರುಣ್ ಈಗಾಗಲೇ ತಿಳಿಸಿದ್ದಾರೆ. ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಸಹ ತಂಡದಲ್ಲಿದ್ದು, ಅವರೂ ಸಹ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.