ರಾಂಚಿ(ಜ.27): ಆಸ್ಪ್ರೇಲಿಯಾದಲ್ಲಿ ಭಾರತ ತಂಡ ಐತಿಹಾಸಿಕ ಟೆಸ್ಟ್‌ ಸರಣಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌, ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೂ ಮೊದಲು ಮಾಜಿ ನಾಯಕ ಎಂ.ಎಸ್‌.ಧೋನಿ ಮನೆಗೆ ಭೇಟಿ ನೀಡಿ ಅಗತ್ಯ ಸಲಹೆಗಳನ್ನು ಪಡೆದುಕೊಂಡಿದ್ದಾರೆ.ಧೋನಿ ಹಾಗೂ ಪಂತ್‌ ಜೊತೆಗಿರುವ ಫೋಟೋವನ್ನು ಧೋನಿ ಪತ್ನಿ ಸಾಕ್ಷಿ, ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದು ಫೋಟೋ ವೈರಲ್‌ ಆಗಿದೆ.

ಬ್ರಿಸ್ಬೇನ್‌ ಟೆಸ್ಟ್ ಪಂದ್ಯದ 5ನೇ ದಿನ ರಿಷಭ್‌ ಪಂತ್ ಅಜೇಯ 89 ರನ್‌ ಬಾರಿಸುವ ಮೂಲಕ ಟೀಂ ಇಂಡಿಯಾ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತ್ತು. ಇದರ ಜತೆಗೆ ಭಾರತ ತಂಡವು ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಫಿಟ್ನೆಸ್ ಸಮಸ್ಯೆ ಹಾಗೂ ವಿಕೆಟ್‌ ಕೀಪಿಂಗ್‌ನಲ್ಲಿ ಮಾಡುತ್ತಿದ್ದ ಎಡವಟ್ಟುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಆಹಾರವಾಗಿದ್ದ ಡೆಲ್ಲಿ ಮೂಲದ ರಿಷಭ್‌ ಪಂತ್‌ ಆಸ್ಟ್ರೇಲಿಯಾ ವಿರುದ್ದದ ಕೊನೆಯ ಎರಡು ಟೆಸ್ಟ್ ಪಂದ್ಯ ಮುಕ್ತಾಯವಾಗಿ ದಿನಬೆಳಗಾಗುವಷ್ಟರಲ್ಲೇ ಮತ್ತೆ ದೇಶದ ಹೀರೋ ಆಗಿ ಬದಲಾಗಿದ್ದಾರೆ. ರಿಷಭ್ ಪಂತ್‌ ಬಾರ್ಡರ್‌-ಗವಾಸ್ಕರ್‌ ಟೆಸ್ಟ್ ಸರಣಿಯಲ್ಲಿ 274 ರನ್‌ ಬಾರಿಸುವ ಮೂಲಕ ಭಾರತ ಪರ ಈ ಟೆಸ್ಟ್ ಸರಣಿಯಲ್ಲಿ ಗರಿಷ್ಟ ರನ್‌ ಬಾರಿಸಿದ ಬ್ಯಾಟ್ಸ್‌ಮನ್ ಎನ್ನುವ ಗೌರವಕ್ಕೆ ಭಾಜನರಾಗಿದ್ದಾರೆ.

ಟೀಂ ಇಂಡಿಯಾ ಗೆಲುವಿನ ಪಾರ್ಟಿ; ಸುವರ್ಣನ್ಯೂಸ್ ಜೊತೆ ಸಂಭ್ರಮ ಕ್ಷಣ ಹಂಚಿಕೊಂಡ ಗವಾಸ್ಕರ್!

ಇನ್ನು ಟೀಂ ಇಂಡಿಯಾ ತವರಿನಲ್ಲಿ ಫೆಬ್ರವರಿ 05ರಿಂದ ಇಂಗ್ಲೆಂಡ್‌ ವಿರುದ್ದ 4 ಪಂದ್ಯಗಳ ಟೆಸ್ಟ್ ಸರಣಿ ಆಡಲಿದ್ದು, ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಚೆನ್ನೈ ಆತಿಥ್ಯವನ್ನು ವಹಿಸಿದೆ. ಟೀಂ ಇಂಡಿಯಾ ಪರ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಆಗಿ ವೃದ್ದಿಮಾನ್ ಸಾಹ ಹಾಗೂ ರಿಷಭ್‌ ಪಂತ್‌ ಇಬ್ಬರು ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.