ಭಾರತದ ನಾಯಕ ಶುಭಮನ್ ಗಿಲ್ ವಿರುದ್ಧದ ಟೀಕೆಗಳನ್ನು ತಾನೇ ಸ್ವೀಕರಿಸುವುದಾಗಿ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ. ಇಂಗ್ಲೆಂಡ್ ಸರಣಿಯ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಿದ ಗಿಲ್, ಇದೀಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ನಾಯಕರಾಗಿ ಆಯ್ಕೆಯಾಗಿದ್ದು, ಗಂಭೀರ್ ಬೆಂಬಲಿಸಿದ್ದಾರೆ.

ದೆಹಲಿ: ಭಾರತದ ನಾಯಕ ಶುಭಮನ್ ಗಿಲ್ ವಿರುದ್ಧ ಬರುವ ಎಲ್ಲಾ ಟೀಕೆಗಳನ್ನು ತಾನೇ ಸ್ವೀಕರಿಸುವುದಾಗಿ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ. ನಾಯಕನಾಗಿ ಗಿಲ್ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ಏಕದಿನ ಪಂದ್ಯಗಳಲ್ಲೂ ನಾಯಕನಾಗಿ ಗಿಲ್ ಮಿಂಚಬಲ್ಲರು. ನಾಯಕನ ಒತ್ತಡವನ್ನು ಕಡಿಮೆ ಮಾಡುವುದೇ ನನ್ನ ಗುರಿ ಮತ್ತು ನನ್ನ ಬೆಂಬಲ ಯಾವಾಗಲೂ ಗಿಲ್‌ಗೆ ಇರುತ್ತದೆ ಎಂದು ಗಂಭೀರ್ ಹೇಳಿದರು. ಟೆಸ್ಟ್ ನಾಯಕನಾಗಿ ಆಯ್ಕೆಯಾದಾಗ ಗಿಲ್ ವಿರುದ್ಧ ಬಂದ ಟೀಕೆಗಳೆಲ್ಲವೂ ಅನಗತ್ಯವಾಗಿತ್ತು ಎಂದೂ ಗಂಭೀರ್ ಹೇಳಿದ್ದಾರೆ. ಆದರೆ, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಸಾಧಾರಣ ಪ್ರದರ್ಶನ ನೀಡಿ ಗಿಲ್ ತನ್ನೆಲ್ಲಾ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಶುಭ್‌ಮನ್ ಗಿಲ್ ಬೆಂಬಲಕ್ಕೆ ನಿಂತ ಗಂಭೀರ್

25 ವರ್ಷದ ಗಿಲ್‌‌ನನ್ನು ಟೆಸ್ಟ್ ತಂಡದ ನಾಯಕನಾಗಿ ಆಯ್ಕೆ ಮಾಡಿದಾಗ, ನಾನು ಅವನಿಗೆ ಹೇಳಿದ್ದು ಈಗಲೂ ನೆನಪಿದೆ. ನಾವು ನಿನ್ನನ್ನು ಆಳವಾದ ಸಮುದ್ರಕ್ಕೆ ಎಸೆಯುತ್ತಿದ್ದೇವೆ. ಇಲ್ಲಿ ನಿನ್ನ ಮುಂದೆ ಎರಡೇ ದಾರಿಗಳಿವೆ. ಒಂದು ಈಜಿ ವಿಶ್ವದರ್ಜೆಯ ಈಜುಗಾರನಾಗಿ ಗೆದ್ದು ಬಾ, ಇಲ್ಲವೇ ಮುಳುಗಿ ಸಾಯಿ. ಹಾಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವನು ಗಳಿಸಿದ 750 ರನ್‌ಗಳು ನನಗೆ ಅಷ್ಟು ಮುಖ್ಯವಾಗಿರಲಿಲ್ಲ. ಇಂಗ್ಲೆಂಡ್‌ನ ಒತ್ತಡದ ಸಂದರ್ಭದಲ್ಲಿ ಅವನು ತಂಡವನ್ನು ಮುನ್ನಡೆಸಿದ ರೀತಿ ಮುಖ್ಯವಾಗಿತ್ತು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಇನ್ನು ಮುಂದೆ ಅವನ ವೃತ್ತಿಜೀವನದಲ್ಲಿ ಇದಕ್ಕಿಂತ ದೊಡ್ಡ ಸವಾಲು ಎದುರಾಗಲಿದೆ ಎಂದು ನನಗನಿಸುವುದಿಲ್ಲ. ಮುಂದಿನ 10 ಅಥವಾ 15 ವರ್ಷ ನಾಯಕನಾಗಿದ್ದರೂ, ಇಂಗ್ಲೆಂಡ್ ಪ್ರವಾಸದ ಎರಡು ತಿಂಗಳ ಕಾಲ ಅವನು ಅನುಭವಿಸಿದ ಒತ್ತಡಕ್ಕೆ ಯಾವುದೇ ಸರಣಿ ಸರಿಸಾಟಿಯಾಗಲಾರದು. ಏಕೆಂದರೆ, ಇಂಗ್ಲೆಂಡ್ ತಂಡವು ಎದುರಾಳಿಗಳನ್ನು ಪುಡಿಗಟ್ಟಬಲ್ಲ ಬ್ಯಾಟಿಂಗ್ ಕ್ರಮಾಂಕ ಹೊಂದಿದೆ. ಭಾರತ ತಂಡವಾದರೆ ಅನುಭವವಿಲ್ಲದ ಆಟಗಾರರ ಗುಂಪು. ಆದರೆ ಭಾರತದ ಯುವ ಪಡೆ ಇಂಗ್ಲೆಂಡ್‌ನ ಒತ್ತಡವನ್ನು ಸುಂದರವಾಗಿ ನಿಭಾಯಿಸಿತು. ಓವಲ್ ಟೆಸ್ಟ್ ನಂತರ ನಾನು ಅವನಿಗೆ ಹೇಳಿದೆ, ನೀನು ನಿನ್ನ ವೃತ್ತಿಜೀವನದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಪಾಸಾಗಿದ್ದೀಯ. ಇನ್ನು ಮುಂದೆ ವಿಷಯಗಳು ಸ್ವಲ್ಪ ಸುಲಭವಾಗಲಿವೆ ಎಂದಿದ್ದಾರೆ.

ಇನ್ನು ಮುಂದೆ ಅವನಿಗೆ ಎಲ್ಲವೂ ಸುಲಭವಾಗಲಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ಅವನ ಬಗ್ಗೆ ಜನರು ಟೀಕೆಗಳನ್ನು ಮಾಡಿದರು. ಅದರಲ್ಲಿ ಹಲವು ಸಮರ್ಥಿಸಲಾಗದ ಮಾತುಗಳಾಗಿದ್ದವು. ಆದರೆ ಇಂಗ್ಲೆಂಡ್‌ನಲ್ಲಿ ಅವನು ಭಾರತವನ್ನು ಮುಂಚೂಣಿಯಿಂದ ಮುನ್ನಡೆಸಿದ. ಏಕೆಂದರೆ, ನಾನು ಮತ್ತು ಸಹಾಯಕ ಸಿಬ್ಬಂದಿ ಎಲ್ಲರೂ ತೀವ್ರ ಒತ್ತಡದಲ್ಲಿದ್ದೆವು. ನಮಗಿಂತ ಹೆಚ್ಚು ಒತ್ತಡದಲ್ಲಿ ಗಿಲ್ ಇದ್ದ. ಆದರೆ ಆ 25 ದಿನಗಳಲ್ಲಿ ಒಂದು ದಿನವೂ ಅವನು ಅಸಮಾಧಾನಗೊಳ್ಳಲಿಲ್ಲ ಅಥವಾ ಒತ್ತಡಕ್ಕೆ ಒಳಗಾಗಲಿಲ್ಲ. ನಗುಮೊಗದಿಂದ ತಂಡವನ್ನು ಮುನ್ನಡೆಸಿದ. ಹಾಗಾಗಿ ಅವನು ತಂಡಕ್ಕಾಗಿ ನಿಲ್ಲುವವರೆಗೂ ನಾನು ಅವನನ್ನು ರಕ್ಷಿಸುತ್ತೇನೆ. ಅವನ ವಿರುದ್ಧದ ಎಲ್ಲಾ ಟೀಕೆಗಳನ್ನು ನಾನೇ ತೆಗೆದುಕೊಳ್ಳುತ್ತೇನೆ. ಅಂದುಕೊಂಡಂತೆ ಫಲಿತಾಂಶಗಳು ನಡೆಯದಿದ್ದಾಗ ಅವನು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂದು ನೋಡಲು ಕುತೂಹಲವಿದೆ ಎಂದೂ ಗಂಭೀರ್ ಹೇಳಿದರು.

ಭಾರತ ಏಕದಿನ ತಂಡಕ್ಕೂ ಗಿಲ್ ನಾಯಕ

ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಬೆನ್ನಲ್ಲೇ ಇದೀಗ ಭಾರತ ಏಕದಿನ ತಂಡದ ನಾಯಕತ್ವ ಜವಾಬ್ದಾರಿ ಕೂಡಾ ಶುಭ್‌ಮನ್ ಗಿಲ್ ಹೆಗಲೇರಿದೆ. ಅಕ್ಟೋಬರ್ 19ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಶುಭ್‌ಮನ್ ಗಿಲ್‌ಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ. 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಶುಭ್‌ಮನ್ ಗಿಲ್‌ಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ.