ಸಿಡ್ನಿ(ಡಿ.09): ಭಾರತ-ಆಸ್ಟ್ರೇಲಿಯಾ ನಡುವೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 12 ರನ್‌ಗಳ ರೋಚಕ ಸೋಲು ಕಂಡಿದೆ. ಈ ಆಘಾತದಿಂದ ಹೊರಬರುವ ಮುನ್ನವೇ ಐಸಿಸಿ ವಿರಾಟ್ ಪಡೆಗೆ ಮತ್ತೊಂದು ಶಾಕ್ ನೀಡಿದೆ.

ಹೌದು, ಮೂರನೇ ಟಿ20 ಪಂದ್ಯದಲ್ಲಿ ಮಂದಗತಿಯಲ್ಲಿ ಬೌಲಿಂಗ್ ಮಾಡಿದ ತಪ್ಪಿಗಾಗಿ ಟೀಂ ಇಂಡಿಯಾ ಆಟಗಾರರಿಗೆ ಐಸಿಸಿ ಪಂದ್ಯದ ಸಂಭಾವನೆಯ 20% ದಂಡ ವಿಧಿಸಿದೆ. ಟೀಂ ಇಂಡಿಯಾ ಬೌಲರ್‌ಗಳು 20 ಓವರ್ ಬೌಲಿಂಗ್ ಮಾಡಲು ನಿಗದಿತ ಸಮಯಕ್ಕಿಂತ ಒಂದು ಓವರ್ ಸಮಯ ಹೆಚ್ಚಿಗೆ ಕೊಂಡಿದ್ದರಿಂದ ಮ್ಯಾಚ್‌ ರೆಫ್ರಿ ಟೀಂ ಇಂಡಿಯಾ ಆಟಗಾರರಿಗೆ ದಂಡ ವಿಧಿಸಿದ್ದಾರೆ.

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ರತಿ ಓವರ್‌ ಕೂಡಾ ನಿಗದಿತ ಸಮಯಕ್ಕಿಂತ ಹೆಚ್ಚಿಗೆ ಸಮಯ ತೆಗೆದುಕೊಂಡಿದ್ದು, ಐಸಿಸಿ ಆರ್ಟಿಕಲ್ 2.22 ನೀತಿ ಸಂಹಿತೆ ಸ್ಪಷ್ಟ ಉಲ್ಲಂಘನೆಯಾಗಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಐಸಿಸಿ ವಿಧಿಸಿದ ದಂಡದ ಮೊತ್ತವನ್ನು ಪಾವತಿಸುವುದಾಗಿ ತಿಳಿಸಿದ್ದಾರೆ ಎಂದು ಐಸಿಸಿ ಮೂಲಗಳು ತಿಳಿಸಿವೆ.

ಸರಣಿ ಶ್ರೇಷ್ಠ ಟ್ರೋಫಿಯನ್ನು ನಟರಾಜನ್‌ಗೆ ಕೊಟ್ಟ ಹಾರ್ದಿಕ್ ಪಾಂಡ್ಯ..!

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಟೀಂ ಇಂಡಿಯಾ 12 ರನ್‌ಗಳಿಂದ ಶರಣಾಗಿದೆ. ಈ ಸೋಲಿನ ಹೊರತಾಗಿಯೂ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಮೊದಲೆರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಟಿ20 ಸರಣಿಯನ್ನು ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.