ಸಿಡ್ನಿ(ಡಿ.09): ಅಂತಾರಾಷ್ಟ್ರೀಯ ಕ್ರಿಕೆಟ್‌ನ ಪಾದಾರ್ಪಣೆಯ ಸರಣಿಯಲ್ಲೇ ಅಮೋಘ ಪ್ರದರ್ಶನ ತೋರಿದ ಟಿ. ನಟರಾಜನ್‌ ಅವರಿಗೆ ಹಾರ್ಡ್‌ ಹಿಟ್ಟರ್ ಹಾರ್ದಿಕ್ ಪಾಂಡ್ಯ ತಮಗೆ ಸಿಕ್ಕಿದ್ದ ಸರಣಿ ಶ್ರೇಷ್ಠ ಟ್ರೋಫಿಯನ್ನು ಎಡಗೈ ವೇಗಿಗೆ ನೀಡುವ ಮೂಲಕ ಕ್ರಿಕೆಟ್‌ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಸ್ಫೋಟಕ ಬ್ಯಾಟಿಂಗ್‌ ಹಾಗೂ ಕೆಲ ಅದ್ಭುತ ಕ್ಯಾಚ್‌ಗಳನ್ನು ಹಿಡಿದ ಹಾರ್ದಿಕ್‌ ಪಾಂಡ್ಯಗೆ ಸರಣಿ ಶ್ರೇಷ್ಠ ಪ್ರಶಸ್ತಿ ಒಲಿಯಿತು. ಆದರೆ ಹಾರ್ದಿಕ್‌ ಟ್ರೋಫಿಯನ್ನು ಸರಣಿಯಲ್ಲಿ ಆಕರ್ಷಕ ಎಕಾನಮಿ ರೇಟ್‌ನಲ್ಲಿ 6 ವಿಕೆಟ್‌ ಕಿತ್ತ ವೇಗಿ ಟಿ.ನಟರಾಜನ್‌ಗೆ ಹಸ್ತಾಂತರಿಸಿದರು. ಪಾಂಡ್ಯ ನಡೆಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಯಿತು.

ಟಿ. ನಟರಾಜನ್ ಹಾಗೂ ಟೀಂ ಇಂಡಿಯಾ ಟಿ20 ಸರಣಿ ಗೆದ್ದ 2 ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ನಟರಾಜನ್ ನೀವು ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ್ದೀರ. ಕ್ಷಿಷ್ಟಕರ ಸಂದರ್ಭದಲ್ಲಿ ನೀವು ತೋರಿದ ಪ್ರದರ್ಶನ ನಿಮ್ಮ ಸಾಮರ್ಥ್ಯ ಹಾಗೂ ಪರಿಶ್ರಮ ಎಷ್ಟಿದೆ ಎಂದು ತೋರಿಸುತ್ತದೆ. ಸರಣಿ ಶ್ರೇಷ್ಠ ಪ್ರಶಸ್ತಿಗೆ ನೀವು ಅರ್ಹ. ಟಿ20 ಸರಣಿ ಜಯಿಸಿದ ಟೀಂ ಇಂಡಿಯಾಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

INDvAUS 3ನೇ ಟಿ20: ತಾಂತ್ರಿಕ ಕಾರಣದಿಂದ ಭಾರತಕ್ಕೆ ಆಯ್ತಾ ಹಿನ್ನೆಡೆ? ಕೊಹ್ಲಿ ಅಸಮಾಧಾನ!

13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ತೋರಿ ಟೀಂ ಇಂಡಿಯಾಗೆ ಲಗ್ಗೆಯಿಟ್ಟ ಟಿ. ನಟರಾಜನ್ ಇದೀಗ ಆಸ್ಟ್ರೇಲಿಯಾ ವಿರುದ್ದದ ಸೀಮಿತ ಓವರ್‌ಗಳ ಸರಣಿ ಮುಗಿಯುವಷ್ಟರಲ್ಲೇ ಎಲ್ಲರ ಮನೆಮಾತಾಗಿದ್ದಾರೆ. ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ನಟರಾಜನ್ 2 ವಿಕೆಟ್ ಕಬಳಿಸಿದ್ದರು. ಇನ್ನು ಟಿ20 ಸರಣಿಯಲ್ಲಿ 3 ಪಂದ್ಯಗಳನ್ನಾಡಿ 6 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿದೆ.