ರಿಷಭ್ ಪಂತ್ ಕೈಬೆರಳಿನ ಗಾಯದಿಂದ ನಾಲ್ಕನೇ ಟೆಸ್ಟ್‌ನಲ್ಲಿ ಕೀಪಿಂಗ್ ಮಾಡುವುದು ಅನುಮಾನ. ಪಂತ್ ಬದಲು ಧ್ರುವ್ ಜುರೆಲ್ ಕೀಪಿಂಗ್ ಮಾಡುವ ಸಾಧ್ಯತೆ. ಪಂತ್ ಗಾಯದಿಂದ ಭಾರತ ತಂಡದ ಆಯ್ಕೆ ಗೊಂದಲ ಹೆಚ್ಚಾಗಿದೆ.

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ಸರಣಿಯಲ್ಲಿ ಆಟಗಾರರ ಫಿಟ್ನೆಸ್‌ ಹಾಗೂ ಲಯದ ಸಮಸ್ಯೆಯಿಂದಾಗಿ ಹಿನ್ನಡೆ ಅನುಭವಿಸುತ್ತಿರುವ ಭಾರತ ತಂಡಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದೆ. ತಂಡದ ವಿಕೆಟ್‌ ಕೀಪರ್‌ ಬ್ಯಾಟರ್‌ ರಿಷಭ್‌ ಪಂತ್‌ ಕೈ ಬೆರಳಿನ ಗಾಯಕ್ಕೆ ತುತ್ತಾಗಿದ್ದು, ಜು.23ರಿಂದ ಆರಂಭಗೊಳ್ಳಲಿರುವ 4ನೇ ಟೆಸ್ಟ್‌ ಪಂದ್ಯದಲ್ಲಿ ಕೀಪಿಂಗ್‌ ಹೊಣೆ ನಿಭಾಯಿಸುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತಿದೆ.

ಲಾರ್ಡ್ಸ್‌ ಟೆಸ್ಟ್‌ನ ಮೊದಲ ದಿನ ರಿಷಭ್‌ಗೆ ಕೈ ಬೆರಳಿಗೆ ಚೆಂಡು ತಾಗಿತ್ತು. ಬಳಿಕ ಅವರು ವಿಕೆಟ್‌ ಕೀಪಿಂಗ್‌ ಮಾಡಿರಲಿಲ್ಲ. ಅವರ ಬದಲು ಧ್ರುವ್‌ ಜುರೆಲ್‌ ಪಂದ್ಯದುದ್ದಕ್ಕೂ ಕೀಪಿಂಗ್‌ ಹೊಣೆ ನಿಭಾಯಿಸಿದ್ದರು. ಆದರೂ ಎರಡೂ ಇನ್ನಿಂಗ್ಸ್‌ಗಳಲ್ಲಿ ರಿಷಭ್‌ ಬ್ಯಾಟ್‌ ಮಾಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ 74 ರನ್‌ ಗಳಿಸಿದ್ದ ಅವರು 2ನೇ ಇನ್ನಿಂಗ್ಸ್‌ನಲ್ಲಿ 9 ರನ್‌ಗೆ ಔಟಾಗಿದ್ದರು.4ನೇ ಟೆಸ್ಟ್‌ ಆರಂಭಕ್ಕೆ ಇನ್ನು 3 ದಿನಗಳು ಬಾಕಿ ಇದ್ದರೂ, ಈ ಅವಧಿಯಲ್ಲಿ ರಿಷಭ್‌ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ. ಹೀಗಾಗಿ ಅವರು ಪಂದ್ಯದಲ್ಲಿ ಆಡುವುದು ಖಚಿತವಿಲ್ಲ. ಒಂದು ವೇಳೆ ಆಡಿದರೂ ಅವರನ್ನು ತಜ್ಞ ಬ್ಯಾಟರ್‌ ಆಗಿ ಕಣಕ್ಕಿಳಿಸಬಹುದು. ಹೀಗಾದರೆ ವಿಕೆಟ್‌ ಕೀಪಿಂಗ್‌ ಹೊಣೆ ಧ್ರುವ್‌ ಜುರೆಲ್‌ಗೆ ನೀಡಬೇಕಾಗುತ್ತದೆ.

ಜುರೆಲ್‌ರನ್ನು ಆಡಿಸಿದರೆ ಅವರಿಗೆ ಜಾಗ ಬಿಟ್ಟುಕೊಡುವವರು ಯಾರು ಮತ್ತು ಯಾವ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತಾರೆ ಎಂಬ ಕುತೂಹಲವಿದೆ. ಕರುಣ್‌ರನ್ನು ಹೊರಗಿಟ್ಟು ಜುರೆಲ್‌ರನ್ನು 3ನೇ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆಯಿಲ್ಲ. ಕರುಣ್‌ ಸ್ಥಾನಕ್ಕೆ ಸಾಯಿ ಸುದರ್ಶರ್‌ರನ್ನು ಆಡಿಸಿದರೆ, ಜುರೆಲ್‌ಗೆ ನಿತೀಶ್‌ ಕುಮಾರ್‌ ಅಥವಾ ವಾಷಿಂಗ್ಟನ್‌ ಸುಂದರ್‌ ಜಾಗ ಬಿಟ್ಟುಕೊಡಬೇಕಾಗಬಹುದು.

ಮಹತ್ವದ ಟೆಸ್ಟ್‌ಗೆ ಮುನ್ನ ಹೆಚ್ಚಿದ ಆಯ್ಕೆ ಗೊಂದಲ

ಭಾರತ ತಂಡದಲ್ಲಿ ಕೊನೆ ಕ್ಷಣದವರೆಗೂ ಆಯ್ಕೆ ಗೊಂದಲ ಇರುತ್ತದೆ. ಈ ಸರಣಿಯ ಮಹತ್ವದ ಪಂದ್ಯಕ್ಕೂ ಮುನ್ನ ಗೊಂದಲ ಹೆಚ್ಚಾಗಿದೆ. ಕಾರ್ಯದೊತ್ತಡ ಕಾರಣಕ್ಕೆ ಜಸ್‌ಪ್ರೀತ್‌ ಬೂಮ್ರಾರನ್ನು 4ನೇ ಟೆಸ್ಟ್‌ನಲ್ಲಿ ಆಡಿಸಲಾಗುತ್ತದೆಯೋ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ. 8 ವರ್ಷಗಳ ಬಳಿಕ ಟೆಸ್ಟ್‌ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಿರುವ ಕರುಣ್‌ ನಾಯರ್‌ ಕಳಪೆ ಆಟವಾಡುತ್ತಿದ್ದು, 4ನೇ ಟೆಸ್ಟ್‌ನಲ್ಲಿ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಈ ನಡುವೆ ರಿಷಭ್‌ ಪಂತ್‌ ಕೂಡಾ ಗಾಯಗೊಂಡಿದ್ದು, ತಂಡದ ತಲೆಬಿಸಿ ಹೆಚ್ಚಿಸಿದೆ.

ರಿಷಭ್‌ ಪಂತ್ ಮ್ಯಾಂಚೆಸ್ಟರ್ ಟೆಸ್ಟ್‌ಗೂ ಮುನ್ನ ಬ್ಯಾಟಿಂಗ್‌ ಅಭ್ಯಾಸ ನಡೆಸಲಿದ್ದಾರೆ. ಅವರನ್ನು ಪಂದ್ಯದಿಂದ ಹೊರಗಿಡುವುದು ಕಷ್ಟ. 3ನೇ ಟೆಸ್ಟ್‌ನಲ್ಲಿ ನೋವಿನಲ್ಲೇ ಬ್ಯಾಟ್ ಮಾಡಿದ್ದರು. ಹೀಗಾಗಿ 4ನೇ ಟೆಸ್ಟ್‌ನಲ್ಲಿ ಅವರು ಕೀಪಿಂಗ್ ಮಾಡಬಲ್ಲರು ಎಂದು ನಾವು ಖಚಿತಪಡಿಸಿಕೊಳ್ಳಬೇಕು. ಇನ್ನಿಂಗ್ಸ್ ಮಧ್ಯೆ ಕೀಪರ್‌ಅನ್ನು ಬದಲಾಯಿಸುವ ಪರಿಸ್ಥಿತಿ ಮತ್ತೆ ಬರಬಾರದು - ಟೆನ್ ಡೊಶ್ಕಾಟೆ, ಸಹಾಯಕ ಕೋಚ್‌

ಲೀಡ್ಸ್‌ನಲ್ಲಿ ನಡೆದಿದ್ದ ಸರಣಿಯ ಆರಂಭಿಕ ಪಂದ್ಯದಲ್ಲಿ ಸೋತಿದ್ದ ಭಾರತ ತಂಡ, ಎಜ್‌ಬಾಸ್ಟನ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿತ್ತು. ಆದರೆ ಲಾರ್ಡ್ಸ್‌ನಲ್ಲಿ ಗೆಲ್ಲಲು ತೀವ್ರ ಹೋರಾಟ ಪ್ರದರ್ಶಿಸಿದ್ದ ಹೊರತಾಗಿಯೂ ಭಾರತ ತಂಡ ಸೋಲು ಕಂಡಿತ್ತು. ಸರಣಿಯ 4ನೇ ಪಂದ್ಯ ಜು.23ರಿಂದ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಆರಂಭಗೊಳ್ಳಲಿದೆ. ಕೊನೆ ಪಂದ್ಯ ಓವಲ್‌ನಲ್ಲಿ ಜು.31ಕ್ಕೆ ಶುರುವಾಗಲಿದೆ.

ಭಾರತ ತಂಡವು 2007ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್‌ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿತ್ತು. ಇದಾದ ಬಳಿಕ ಆಂಗ್ಲರ ನಾಡಿನಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಗಗನ ಕುಸುಮ ಎನಿಸಿಕೊಂಡಿದೆ. ಸದ್ಯ ಆತಿಥೇಯ ಇಂಗ್ಲೆಂಡ್ ತಂಡವು ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸಿದೆ. ಇನ್ನುಳಿದ ಎರಡು ಪಂದ್ಯಗಳನ್ನು ಜಯಿಸಿದರೆ ಟೀಂ ಇಂಡಿಯಾ ಸರಣಿಯಲ್ಲಿ 3-2 ಅಂತರದಲ್ಲಿ ಜಯಭೇರಿ ಬಾರಿಸಲು ಸಾಧ್ಯವಾಗಲಿದೆ.