ಲಾರ್ಡ್ಸ್ ಟೆಸ್ಟ್‌ನಲ್ಲಿ ಜಡೇಜಾ ನಿಧಾನಗತಿಯ ಬ್ಯಾಟಿಂಗ್‌ಗೆ ಟೀಕೆ ವ್ಯಕ್ತವಾದ ಬೆನ್ನಲ್ಲೇ ಪೂಜಾರ ಜಡೇಜಾ ಪರ ಬ್ಯಾಟ್ ಬೀಸಿದ್ದಾರೆ. ಪಿಚ್‌ನ ಸ್ಥಿತಿಗತಿ ಅರಿತು ಜಡೇಜಾ ಆಡಿದ್ದಾರೆ, ಕಠಿಣ ಅಭ್ಯಾಸದಿಂದ ಸುಧಾರಣೆ ಕಂಡಿದ್ದಾರೆ ಎಂದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತ 22 ರನ್‌ಗಳಿಂದ ಸೋಲನುಭವಿಸಿತು. ಈ ಪಂದ್ಯದಲ್ಲಿ ಜಡೇಜಾ 181 ಎಸೆತಗಳಲ್ಲಿ 61 ರನ್ ಗಳಿಸಿದರೂ, ನಿಧಾನಗತಿಯ ಬ್ಯಾಟಿಂಗ್‌ಗೆ ಟೀಕೆಗೊಳಗಾದರು. ಕುಂಬ್ಳೆ, ಗವಾಸ್ಕರ್, ಅಶ್ವಿನ್, ಗಂಗೂಲಿ ಸೇರಿದಂತೆ ಹಲವು ದಿಗ್ಗಜರು ಜಡೇಜಾ ಆಕ್ರಮಣಕಾರಿಯಾಗಿದ್ದರೆ ಭಾರತ ಗೆಲ್ಲುತ್ತಿತ್ತೆಂದರು. ಈಗ ಪೂಜಾರ ಜಡೇಜಾ ಪರ ಮಾತನಾಡಿದ್ದಾರೆ.

ಜಡೇಜಾ ಬಗ್ಗೆ ಪೂಜಾರ ಹೇಳಿದ್ದೇನು?

ಇತ್ತೀಚಿನ ಸಂದರ್ಶನವೊಂದರಲ್ಲಿ ಪೂಜಾರ, ಜಡೇಜಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಜಡೇಜಾ ಉತ್ತಮವಾಗಿ ಆಡಿದರೂ ಟೀಕೆಗೆ ಒಳಗಾಗಿದ್ದು ನನಗೆ ಬೇಸರ ತರಿಸಿದೆ. ಆ ಪಿಚ್‌ನಲ್ಲಿ ವೇಗವಾಗಿ ರನ್ ಗಳಿಸಲು ಸಾಧ್ಯವಿರಲಿಲ್ಲ. ಚೆಂಡು ಹಳೆಯದಾಗಿದ್ದರಿಂದ ಮತ್ತು ಪಿಚ್ ನಿಧಾನವಾಗಿದ್ದರಿಂದ ಹೀಗಾಯಿತು. ಜಡೇಜಾ ತಂಡದ ಮೊತ್ತ ಗುರಿಗೆ ಹತ್ತಿರವಾದಾಗ ಆಕ್ರಮಣಕಾರಿಯಾಗಲು ಯೋಚಿಸಿದ್ದಿರಬಹುದು. ಆ ಪಿಚ್‌ನಲ್ಲಿ ರನ್ ಗಳಿಸುವುದು ಕಷ್ಟಕರವಾಗಿತ್ತು ಎಂದಿದ್ದಾರೆ.

ಪ್ರತಿ ಓವರ್‌ನಲ್ಲೂ ಚೆಂಡು ಹಳೆಯದಾಗುತ್ತಿದ್ದರಿಂದ ಜಡೇಜಾಗೆ ಬೌಂಡರಿ ಹೊಡೆಯುವುದು ಕಷ್ಟವಾಗಿತ್ತು. ಓವರ್‌ನ ಕೊನೆಯ ಎಸೆತಗಳಲ್ಲಿ ಸಿಂಗಲ್ಸ್ ತೆಗೆದುಕೊಳ್ಳುವುದು ಜಡೇಜಾ ಉದ್ದೇಶವಾಗಿತ್ತು. ಬುಮ್ರಾ ಮತ್ತು ಸಿರಾಜ್ ಹೆಚ್ಚು ಎಸೆತಗಳನ್ನು ಎದುರಿಸಬಾರದೆಂದು ಹೀಗೆ ಮಾಡಿದರು. ಜಡೇಜಾ ತಮ್ಮ ಬ್ಯಾಟಿಂಗ್‌ನಲ್ಲಿ, ವಿಶೇಷವಾಗಿ ವಿದೇಶಗಳಲ್ಲಿ, ಸಾಕಷ್ಟು ಸುಧಾರಣೆ ತಂದಿದ್ದಾರೆ ಎಂದು ಪೂಜಾರ ಹೇಳಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರು ಸಾಕಷ್ಟು ಕಠಿಣ ಅಭ್ಯಾಸ ಮಾಡಿದ್ದಾರೆ. ಪಂದ್ಯದ ದಿನವೂ ನೆಟ್‌ನಲ್ಲಿ ಅಭ್ಯಾಸ ಮಾಡುತ್ತಾರೆ. ವೇಗದ ಬೌಲಿಂಗ್‌ನಲ್ಲೂ ಸುಧಾರಣೆ ಕಂಡಿದ್ದಾರೆ ಎಂದು ಚೇತೇಶ್ವರ್ ಪೂಜಾರ ಹೇಳಿದ್ದಾರೆ.

ಸೌರಾಷ್ಟ್ರ ತಂಡದ ಪರ ಜಡೇಜಾ ಮತ್ತು ಪೂಜಾರ: ಜಡೇಜಾ ಮತ್ತು ಪೂಜಾರ ಸೌರಾಷ್ಟ್ರ ತಂಡದ ಪರ ರಣಜಿ ಟ್ರೋಫಿಯಲ್ಲಿ ಒಟ್ಟಿಗೆ ಆಡಿದ್ದಾರೆ. ಜಡೇಜಾ ಆಟದ ಬಗ್ಗೆ ಪೂಜಾರರಿಗೆ ಚೆನ್ನಾಗಿ ತಿಳಿದಿದೆ. ಈ ಹಿಂದೆ ಸ್ಪಿನ್ನರ್‌ಗಳನ್ನು ಚೆನ್ನಾಗಿ ಎದುರಿಸುತ್ತಿದ್ದ ಜಡೇಜಾ ಈಗ ವೇಗದ ಬೌಲರ್‌ಗಳನ್ನೂ ಸಮರ್ಥವಾಗಿ ಎದುರಿಸುತ್ತಾರೆ. ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದಾರೆ. 

ಲಾರ್ಡ್ಸ್‌ ಟೆಸ್ಟ್ ಸೋಲಿನ ಹೊರತಾಗಿಯೂ ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಅಪರೂಪದ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದರು. ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7000+ ರನ್ ಹಾಗೂ 600+ ವಿಕೆಟ್ ಕಬಳಿಸಿದ ಜಗತ್ತಿನ ನಾಲ್ಕನೇ ಆಲ್ರೌಂಡರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಆಲ್ರೌಂಡ್ ಲೆಜೆಂಡ್ ಕಪಿಲ್ ದೇವ್, ದಕ್ಷಿಣ ಆಫ್ರಿಕಾದ ಶಾನ್ ಪೊಲ್ಲಾಕ್ ಹಾಗೂ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಮಾತ್ರ ಈ ಸಾಧನೆ ಮಾಡಿದ್ದರು.

ಸದ್ಯ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ 3697, ಏಕದಿನ ಕ್ರಿಕೆಟ್‌ನಲ್ಲಿ 2806 ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 515 ರನ್ ಸಹಿತ ಒಟ್ಟಾರೆ 7018 ರನ್ ಸಿಡಿಸಿದ್ದಾರೆ. ಇನ್ನು ಜಡ್ಡು ಟೆಸ್ಟ್‌ ಕ್ರಿಕೆಟ್‌ನಲ್ಲಿ 326, ಏಕದಿನ ಕ್ರಿಕೆಟ್‌ನಲ್ಲಿ 231 ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 54 ವಿಕೆಟ್ ಸೇರಿದಂತೆ ಒಟ್ಟಾರೆ 611 ವಿಕೆಟ್ ಕಬಳಿಸಿದ್ದಾರೆ.

ಇಂಗ್ಲೆಂಡ್ ಎದುರಿನ ಟೆಸ್ಟ್‌ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಜಡೇಜಾ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಜಡ್ಡು ಕಳೆದೆರಡು ಟೆಸ್ಟ್‌ ಪಂದ್ಯಗಳ 4 ಇನ್ನಿಂಗ್ಸ್‌ನಲ್ಲೂ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಲಾರ್ಡ್ಸ್‌ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲೂ ಅರ್ಧಶತಕ ಸಿಡಿಸುವ ಮೂಲಕ ಜಡ್ಡು 93 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ್ದರು. ಈ ಮೊದಲು ಭಾರತದ ವಿನೂ ಮಂಕಡ್ 1932ರಲ್ಲಿ ಲಾರ್ಡ್ಸ್‌ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿ 50+ ರನ್ ಬಾರಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದರು.