ಪುಣೆ(ಜ.10): ಐಸಿಸಿ ಟಿ20 ವಿಶ್ವಕಪ್‌ಗೆ ತಯಾರಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ಟೀಂ ಇಂಡಿಯಾ, ಶ್ರೀಲಂಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯವನ್ನು ಶುಕ್ರವಾರ ಇಲ್ಲಿ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಆಡಲಿದೆ. 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಹೊಂದಿದ್ದು, ನಾಯಕ ವಿರಾಟ್‌ ಕೊಹ್ಲಿ ಸರಣಿ ಗೆಲ್ಲುವುದರ ಜತೆಗೆ ಬೆಂಚ್‌ ಕಾಯುತ್ತಿರುವ ಆಟಗಾರರಿಗೆ ಅವಕಾಶ ನೀಡುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಮನೀಶ್‌ ಪಾಂಡೆ ಹಾಗೂ ಸಂಜು ಸ್ಯಾಮ್ಸನ್‌ರನ್ನು ಆಯ್ಕೆಗಾರರು ಪ್ರತಿ ಸರಣಿಗೂ ಆಯ್ಕೆ ಮಾಡುತ್ತಿದ್ದಾರೆಯಾದರೂ, ಇಬ್ಬರಿಗೂ ಆಡುವ ಹನ್ನೊಂದರಲ್ಲಿ ಮಾತ್ರ ಸ್ಥಾನ ಸಿಗುತ್ತಿಲ್ಲ. ಈ ಸರಣಿಯೂ ಸೇರಿದಂತೆ ಕಳೆದ 3 ಸರಣಿಗಳಲ್ಲಿ ಪಾಂಡೆ ಕೇವಲ ಒಂದು ಪಂದ್ಯದಲ್ಲಷ್ಟೇ ಆಡಿದ್ದಾರೆ. ಬಾಂಗ್ಲಾದೇಶ ವಿರುದ್ಧ ನವೆಂಬರ್‌ನಲ್ಲಿ ನಡೆದ ಸರಣಿ ವೇಳೆಗೆ ತಂಡಕ್ಕೆ ವಾಪಸಾದ ಸ್ಯಾಮ್ಸನ್‌ಗೆ ಇದುವರೆಗೂ ಒಂದೂ ಅವಕಾಶ ನೀಡಿಲ್ಲ.

ಲಂಕಾ ಮಣಿಸಿ ವರ್ಷದ ಮೊದಲ ಗೆಲುವಿನ ಸಿಹಿಯುಂಡ ಟೀಂ ಇಂಡಿಯಾ

ಅಕ್ಟೋಬರ್‌-ನವೆಂಬರ್‌ನಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ಭಾರತ, ಹಲವು ಪ್ರಯೋಗಗಳನ್ನು ಮಾಡುತ್ತಿದೆ. ಆದರೆ ಸ್ಯಾಮ್ಸನ್‌ ಹಾಗೂ ಪಾಂಡೆಯನ್ನು ಮಾತ್ರ ಆಯ್ಕೆಗೆ ಪರಿಗಣಿಸುತ್ತಿಲ್ಲ ಏಕೆ ಎನ್ನುವ ಕುತೂಹಲ ಮೂಡಿದೆ. ಇಂದೋರ್‌ ಪಂದ್ಯದಲ್ಲಿ ಭಾರತದ ಮುಂದೆ ಅನನುಭವಿ ಶ್ರೀಲಂಕಾ ಯಾವುದೇ ಹೋರಾಟ ನೀಡಲಿಲ್ಲ. ಅದನ್ನು ಪರಿಗಣಿಸಿ ಈ ಪಂದ್ಯದಲ್ಲಿ ಸ್ಯಾಮ್ಸನ್‌ ಹಾಗೂ ಮನೀಶ್‌ಗೆ ಅವಕಾಶ ನೀಡಬಹುದು ಎನ್ನುವ ಲೆಕ್ಕಾಚಾರವಿದೆ. ಆದರೆ ಸರಣಿ ಗೆಲ್ಲಬೇಕು ಎನ್ನುವ ಗುರಿ ಹೊಂದಿರುವ ಭಾರತ, ಕಳೆದ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಕಣಕ್ಕಿಳಿಸಿದರೆ ಅಚ್ಚರಿ ಪಡಬೇಕಿಲ್ಲ.

ಭಾರತ-ಶ್ರೀಲಂಕಾ 3ನೇ ಟಿ20: ಟೀಂ ಇಂಡಿಯಾದಲ್ಲಿ ಬದಲಾವಣೆ ಮಾಡ್ತಾರಾ ಕೊಹ್ಲಿ?

ಮತ್ತೊಂದೆಡೆ ಹಿರಿಯ ವೇಗಿಗಳ ಅನುಪಸ್ಥಿತಿಯಲ್ಲಿ ನವ್‌ದೀಪ್‌ ಸೈನಿ ಹಾಗೂ ಶಾರ್ದೂಲ್‌ ಠಾಕೂರ್‌ಗೆ ತಂಡದ ಬಾಗಿಲು ತೆಗೆದಿದ್ದು, ಇಬ್ಬರು ಆಕರ್ಷಕ ಪ್ರದರ್ಶನದೊಂದಿಗೆ ಗಮನ ಸೆಳೆಯುತ್ತಿದ್ದಾರೆ. ವಾಷಿಂಗ್ಟನ್‌ ಸುಂದರ್‌ ಹಾಗೂ ಶಿವಂ ದುಬೆಗೂ ಹೆಚ್ಚಿನ ಅವಕಾಶಗಳು ಸಿಗುತ್ತಿವೆ.

ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಮೇಲೆ ಮತ್ತೊಮ್ಮೆ ಎಲ್ಲರ ಕಣ್ಣಿದೆ. ಕಳೆದ ಪಂದ್ಯದಲ್ಲಿ ಧವನ್‌ ರನ್‌ ಗಳಿಸಲು ಹೆಚ್ಚಿನ ಪರಿಶ್ರಮ ವಹಿಸುತ್ತಿದ್ದಾರೆ ಎನಿಸಿತು. ಅವರ ಇನ್ನಿಂಗ್ಸ್‌ ಸಮಾಧಾನಕರವಾಗಿರಲಿಲ್ಲ. ವಿಶ್ವಕಪ್‌ ತಂಡದಲ್ಲಿ ಆರಂಭಿಕನ ಸ್ಥಾನಕ್ಕೆ ಪೈಪೋಟಿ ಇದ್ದು, ಧವನ್‌ಗಿಂತ ಕೆ.ಎಲ್‌.ರಾಹುಲ್‌ ಬಹಳ ಮುಂದಿದ್ದಾರೆ.

ಕಳೆದ ಪಂದ್ಯದಲ್ಲಿ ಜಸ್‌ಪ್ರೀತ್‌ ಬುಮ್ರಾ ತಮ್ಮ ಎಂದಿನ ಲಯದಲ್ಲಿ ಬೌಲ್‌ ಮಾಡಲಿಲ್ಲ. ಆಸ್ಪ್ರೇಲಿಯಾ ಸರಣಿಗೂ ಮುನ್ನ ಲಯ ಕಂಡುಕೊಳ್ಳಲು ಎದುರು ನೋಡುತ್ತಿದ್ದಾರೆ. ನಾಯಕ ವಿರಾಟ್‌ ಕೊಹ್ಲಿ ಹಾಗೂ ಶ್ರೇಯಸ್‌ ಅಯ್ಯರ್‌ರ ಅಮೋಘ ಬ್ಯಾಟಿಂಗ್‌ ಪ್ರದರ್ಶನವನ್ನು ನೋಡಲು ಪುಣೆ ಅಭಿಮಾನಿಗಳು ಕಾಯುತ್ತಿದ್ದಾರೆ.

ಒತ್ತಡದಲ್ಲಿ ಲಂಕನ್ನರು: ಪ್ರವಾಸಿ ಶ್ರೀಲಂಕಾ ಆತಿಥೇಯ ತಂಡವನ್ನು ಸೋಲಿಸಬೇಕಿದ್ದರೆ ಅಸಾಧಾರಣ ಪ್ರದರ್ಶನ ನೀಡಬೇಕಿದೆ. ತಂಡದ ಬ್ಯಾಟ್ಸ್‌ಮನ್‌ಗಳು ನಿರೀಕ್ಷೆಗೂ ಮೀರಿದ ಆಟವಾಡಬೇಕಿದೆ. ಆಲ್ರೌಂಡರ್‌ ಇಸುರು ಉದಾನ ಗಾಯಗೊಂಡಿರುವ ಕಾರಣ ಪಂದ್ಯದಿಂದ ಹೊರಬಿದ್ದಿದ್ದಾರೆ. ನಾಯಕ ಲಸಿತ್‌ ಮಾಲಿಂಗ ಅಭ್ಯಾಸದ ವೇಳೆ ಗಾಯಗೊಂಡು ಬೌಲ್‌ ಮಾಡಲಿಲ್ಲ. ಅವರು ಆಡಲಿದ್ದಾರೆಯೇ ಎನ್ನುವ ಬಗ್ಗೆ ಖಚಿತತೆ ಇಲ್ಲ. 2ನೇ ಪಂದ್ಯದಿಂದ ಹೊರಗುಳಿದಿದ್ದ ಏಂಜೆಲೋ ಮ್ಯಾಥ್ಯೂಸ್‌, ಈ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಪಿಚ್‌ ರಿಪೋರ್ಟ್‌

ಇದೊಂದು ಸ್ಪರ್ಧಾತ್ಮಕ ಪಿಚ್‌ ಆಗಿದ್ದು, ಬ್ಯಾಟ್‌ ಹಾಗೂ ಬಾಲ್‌ ನಡುವೆ ನೇರಾನೇರ ಸ್ಪರ್ಧೆ ಇರಲಿದೆ. ಮಳೆ ಮುನ್ಸೂಚನೆ ಇಲ್ಲದಿದ್ದರೂ, 2ನೇ ಇನ್ನಿಂಗ್ಸ್‌ ವೇಳೆ ಇಬ್ಬನಿ ಬೀಳುವ ನಿರೀಕ್ಷೆ ಇದೆ. ಹೀಗಾಗಿ ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ. ಕಳೆದ ಬಾರಿ ಇಲ್ಲಿ ಟಿ20 ಪಂದ್ಯ ನಡೆದಾಗ ಭಾರತ ಕೇವಲ 101 ರನ್‌ಗೆ ಆಲೌಟ್‌ ಆಗಿತ್ತು. ಆ ಪಂದ್ಯದಲ್ಲಿ ಶ್ರೀಲಂಕಾ ಭಾರತದ ಎದುರಾಳಿಯಾಗಿತ್ತು.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಶಿಖರ್‌ ಧವನ್‌, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ(ನಾಯಕ), ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ಕುಲ್ದೀಪ್‌/ಚಹಲ್‌, ಶಾರ್ದೂಲ್‌ ಠಾಕೂರ್‌, ಜಸ್‌ಪ್ರೀತ್‌ ಬೂಮ್ರಾ, ನವ್‌ದೀಪ್‌ ಸೈನಿ.

ಶ್ರೀಲಂಕಾ: ಧನುಷ್ಕ ಗುಣತಿಲಕ, ಆವಿಷ್ಕ ಫರ್ನಾಂಡೋ, ಕುಸಾಲ್‌ ಪೆರೇರಾ, ಭನುಕ ರಾಜಪಕ್ಸ, ಒಶಾಡ ಫರ್ನಾಂಡೋ, ಮ್ಯಾಥ್ಯೂಸ್‌, ದಸುನ್‌ ಶನಕ, ಧನಂಜಯ ಡಿ ಸಿಲ್ವಾ, ವನಿಂಡು ಹಸರಂಗ, ಲಸಿತ್‌ ಮಾಲಿಂಗ (ನಾಯಕ), ಲಹಿರು ಕುಮಾರ.

ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1