"

ಇಂದೋರ್[ಜ.07]: ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ 2020ರಲ್ಲಿ ವಿರಾಟ್ ಕೊಹ್ಲಿ ಪಡೆ ಮೊದಲ ಗೆಲುವಿನ ಸಿಹಿಯುಂಡಿದೆ.

ಮೊದಲಿಗೆ ಶ್ರೀಲಂಕಾವನ್ನು ಕೇವಲ 142 ರನ್’ಗಳಿಗೆ ನಿಯಂತ್ರಿಸಿದ ಭಾರತ, ಬ್ಯಾಟಿಂಗ್’ನಲ್ಲೂ ಪ್ರಾಬಲ್ಯ ಮೆರೆಯಿತು. ಮೊದಲ ವಿಕೆಟ್’ಗೆ ಧವನ್-ರಾಹುಲ್ ಜೋಡಿ 9.1 ಓವರ್’ಗಳಲ್ಲಿ 71 ರನ್’ಗಳ ಜತೆಯಾಟವಾಡಿದರು. ಈ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಕೆ.ಎಲ್. ರಾಹುಲ್ 32 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 45 ರನ್ ಬಾರಿಸಿ ಹಸರಂಗಾ ಬೌಲಿಂಗ್’ನಲ್ಲಿ ವಿಕೆಟ್ ಒಪ್ಪಿಸಿದರು. ರಾಹುಲ್ ಸ್ಫೋಟಕ ಬ್ಯಾಟಿಂಗ್ ನಡೆಸಿದರೆ, ಮತ್ತೊಂದು ತುದಿಯಲ್ಲಿ ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಧವನ್ 29 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 32 ರನ್ ಬಾರಿಸಿ ಹಸರಂಗಾಗೆ ಎರಡನೇ ಬಲಿಯಾದರು.

2ನೇ ಟಿ20: ಭಾರತಕ್ಕೆ ಸುಲಭ ಗುರಿ ನೀಡಿದ ಲಂಕಾ

ಇನ್ನು ಮಧ್ಯಮ ಕ್ರಮಾಂಕದಲ್ಲಿ ಮಿಂಚಿನ ಬ್ಯಾಟಿಂಗ್ ನಡೆಸಿದ ಶ್ರೇಯಸ್ ಅಯ್ಯರ್ 26 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 34 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ರಿಷಭ್ ಪಂತ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಇನ್ನೂ 15 ಎಸೆತಗಳು ಇರುವಂತೆಯೇ ಸುಲಭವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಶ್ರೀಲಂಕಾ ಕುಸಾಲ್ ಪೆರೆರಾ[34] ಬ್ಯಾಟಿಂಗ್ ಹೊರತಾಗಿಯೂ ಅಲ್ಪ ಮೊತ್ತಕ್ಕೆ ಕುಸಿಯಿತು. ಶಾರ್ದೂಲ್ ಠಾಕೂರ್ ಒಂದೇ ಓವರ್’ನಲ್ಲಿ 3 ವಿಕೆಟ್ ಪಡೆದರೆ, ಸೈನಿ ಹಾಗೂ ಕುಲ್ದೀಪ್ 2 ಮತ್ತು ಬುಮ್ರಾ, ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಪಡೆದರು.

ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಇದೀಗ ಎರಡನೇ ಪಂದ್ಯವನ್ನು ಗೆಲ್ಲುವುದರ ಮೂಲಕ ಟೀಂ ಇಂಡಿಯಾ 1-0 ಮುನ್ನಡೆ ಕಾಯ್ದುಕೊಂಡಿದೆ. ಮೂರನೇ ಹಾಗೂ ಅಂತಿಮ ಪಂದ್ಯ ಜನವರಿ 10ರಂದು ಪುಣೆಯಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್:

ಶ್ರೀಲಂಕಾ: 142/9
ಭಾರತ: 144/3