ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದು, ಸೆಪ್ಟೆಂಬರ್ ವೇಳೆಗೆ ಸಂಪೂರ್ಣ ಫಿಟ್ ಆಗಲಿದ್ದಾರೆಂದು ವರದಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಮಾ.27): ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದ ವೇಳೆ ಎಡ ಭುಜದ ಗಾಯಕ್ಕೆ ತುತ್ತಾಗಿ, ಕೊನೆಯ 2 ಏಕದಿನ ಹಾಗೂ ಐಪಿಎಲ್‌ನಿಂದ ಹೊರಬಿದ್ದಿರುವ ಭಾರತದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್, ಈ ವರ್ಷ ಸೆಪ್ಟೆಂಬರ್ ವರೆಗೂ ಕ್ರಿಕೆಟ್‌ಗೆ ಮರಳಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.
ಏಪ್ರಿಲ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಶ್ರೇಯಸ್ 4-5 ತಿಂಗಳ ಕಾಲ ವಿಶ್ರಾಂತಿಯಲ್ಲಿರಲಿದ್ದಾರೆ. ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ವೇಳೆಗೆ ಅವರು ತಂಡಕ್ಕೆ ವಾಪಸಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ಡೆಲ್ಲಿ ತಂಡಕ್ಕೆ ರಿಷಭ್ ಪಂತ್ ಕ್ಯಾಪ್ಟನ್ ಆಗೋದು ಡೌಟ್
ನವದೆಹಲಿ: ಶ್ರೇಯಸ್ ಅಯ್ಯರ್ ಐಪಿಎಲ್‌ನಿಂದ ಹೊರಬಿದ್ದಿರುವ ಕಾರಣ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಂಬರುವ ಐಪಿಎಲ್ 14ನೇ ಆವೃತ್ತಿಗೆ ಹೊಸ ನಾಯಕನನ್ನು ನೇಮಿಸುವ ಅನಿವಾರ್ಯತೆ ಎದುರಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ಯಾರಿಗೆ: ಐವರ ಪೈಕಿ ಅಗ್ರಸ್ಥಾನದಲ್ಲಿ ಸ್ಮಿತ್!
ನಾಯಕತ್ವದ ರೇಸ್‌ನಲ್ಲಿ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಹೆಸರು ಸಹ ಕೇಳಿಬರುತ್ತಿತ್ತು. ಆದರೆ ಮೂಲಗಳ ಪ್ರಕಾರ, ಪಂತ್ ನಾಯಕನಾಗುವುದು ತಂಡದ ಆಡಳಿತದಲ್ಲಿರುವ ಕೆಲವರಿಗೆ ಸೂಕ್ತ ಎನಿಸಿಲ್ಲವಂತೆ. ಪಂತ್‌ಗೆ ನಾಯಕತ್ವದ ಅನುಭವವಿಲ್ಲ, ಹೀಗಾಗಿ ಟೂರ್ನಿಯಲ್ಲಿ ತಂಡಕ್ಕೆ ಹಿನ್ನಡೆಯಾಗಬಹುದು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
