ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ವಿಕೆಟ್ ಕೀಪರ್ ರಿಷಭ್ ಪಂತ್ಡಿಸೆಂಬರ್ 30ರಂದು ರಸ್ತೆ ಅಪಘಾತಕ್ಕೊಳಗಾಗಿದ್ದ ರಿಷಭ್ ಪಂತ್ಇದೀಗ ಪಂತ್‌ಗೆ ಯಶಸ್ವಿ ಅಸ್ತಿಬಂಧಕ ಶಸ್ತ್ರಚಿಕಿತ್ಸೆ

ನವದೆಹಲಿ(ಜ.08): ಕಳೆದ ವಾರ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಭಾರತದ ತಾರಾ ಕ್ರಿಕೆಟಿಗ ರಿಷಭ್‌ ಪಂತ್‌ ಅವರಿಗೆ ಶುಕ್ರವಾರ ಬಲಗಾಲಿನ ಮಂಡಿಯ ಅಸ್ತಿಬಂಧಕ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ರಿಷಭ್‌ರನ್ನು ಡೆಹರಾಡೂನ್‌ನಿಂದ ಮುಂಬೈಗೆ ಏರ್‌ಲಿಫ್ಟ್‌ ಮಾಡಲಾಗಿತ್ತು. ಮುಂಬೈನ ಕೋಕಿಲಾಬೆನ್‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೆಚ್ಚುವರಿ ಚಿಕಿತ್ಸೆ ಹಾಗೂ ಪುನಶ್ಚೇತನ ಶಿಬಿರದ ಬಗ್ಗೆ ವೈದ್ಯರ ಸಲಹೆ ಪಡೆದ ಬಳಿಕ ನಿರ್ಧರಿಸಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ರಿಷಭ್‌ ಮೇಲೆ ವೈದ್ಯರು ನಿಗಾ ಇಟ್ಟಿದ್ದು, ಯಾವಾಗ ಕ್ರಿಕೆಟ್‌ಗೆ ಮರಳಲಿದ್ದಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಅವರಿಗೆ ಇನ್ನೂ ಎದ್ದು ಓಡಾಡಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಸಂಪೂರ್ಣವಾಗಿ ಗುಣಮುಖರಾಗಲು ಸುಮಾರು 8-9 ತಿಂಗಳು ಬೇಕಾಗಬಹುದು ಎನ್ನಲಾಗುತ್ತಿದೆ.

ರಿಷಭ್ ಪಂತ್ ಅವರ ಶಸ್ತ್ರಚಿಕಿತ್ಸೆಯನ್ನು ಮುಂಬೈ ಕೋಕಿಲಾಬೆನ್ ಆಸ್ಪತ್ರೆಯ ಡಾ. ದಿನ್‌ಶಾ ಪರ್ಡಿವಾಲಾ ಅವರು ನಡೆಸಿದ್ದು, ಪಂತ್ ಚೇತರಿಕೆಯ ಮೇಲೆ ನಿಗಾಯಿಟ್ಟಿದ್ದಾರೆ. ಡಾ. ದಿನ್‌ಶಾ ಪರ್ಡಿವಾಲಾ ಅವರ ಮಾರ್ಗದರ್ಶನದಲ್ಲಿಯೇ ರಿಷಭ್ ಪಂತ್ ಚೇತರಿಸಿಕೊಳ್ಳುತ್ತಿದ್ದಾರೆ.

ಡೆಹರಾಡೂನ್‌ನಿಂದ ರಿಷಭ್ ಪಂತ್ ಅವರನ್ನು ಮುಂಬೈಗೆ ಏರ್‌ಲಿಫ್ಟ್‌ ಮಾಡಿದ ಬಳಿಕ ಪಂತ್ ಅವರಿಗೆ ಲಿಗಮೆಂಟ್‌ ಇಂಜುರಿಯ ಬಗ್ಗೆ ಬಿಸಿಸಿಐ ಮಾಹಿತಿ ನೀಡಿತ್ತು. ಆದರೆ ಯಾವ ಪ್ರಮಾಣದಲ್ಲಿ ಲಿಗಮೆಂಟ್ ಇಂಜುರಿಯಾಗಿದೆ ಎನ್ನುವುದನ್ನು ಬಿಸಿಸಿಐ ಸ್ಪಷ್ಟಪಡಿಸಿಲ್ಲ. ಆದರೂ ಪಂತ್ ಎಷ್ಟೇ ಬೇಗ ಚೇತರಿಸಿಕೊಂಡರೂ, ಕ್ರಿಕೆಟ್‌ಗೆ ಮತ್ತೆ ಕಮ್‌ಬ್ಯಾಕ್ ಮಾಡಲು ಕನಿಷ್ಠ 4 ತಿಂಗಳು ಕಾಲಾವಕಾಶ ಬೇಕಾಗಬಹುದು ಎನ್ನಲಾಗುತ್ತಿದೆ.

Ligament injury : ಕ್ರಿಕೆಟರ್ ರಿಷಭ್ ಪಂತ್‌ಗೆ ಕಾಡುತ್ತಿರುವ ಲೆಗಮೆಂಟ್ ಗಾಯದ ಬಗ್ಗೆ ನಿಮಗೆಷ್ಟು ಗೊತ್ತು..?

ಅಪಘಾತಕ್ಕೂ ಮೊದಲೇ ರಿಷಭ್ ಪಂತ್ ಅವರ ಬಲ ಮೊಣಕಾಲಿಗೆ ಗಾಯಗಳಾಗಿತ್ತು. ಅವರು ಒಂದು ವಾರದೊಳಗಾಗಿ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ವರದಿ ಮಾಡಿಕೊಳ್ಳಬೇಕಿತ್ತು. ಆದರೆ ಈ ರಸ್ತೆ ಅಪಘಾತದಿಂದಾಗಿ ಪಂತ್ ಚೇತರಿಸಿಕೊಳ್ಳುವುದು ಮತ್ತಷ್ಟು ತಡವಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 

ಅಪಘಾತದಿಂದ ತೀವ್ರವಾಗಿ ಗಾಯಗೊಂಡಿರುವ ಭಾರತದ ವಿಕೆಟ್‌ ಕೀಪರ್‌ ಬ್ಯಾಟರ್‌ ರಿಷಭ್‌ ಪಂತ್‌ ಫೆಬ್ರವರಿ-ಮಾಚ್‌ರ್‍ನಲ್ಲಿ ನಡೆಯಲಿರುವ ಆಸ್ಪ್ರೇಲಿಯಾ ವಿರುದ್ಧದ ತವರಿನ ಟೆಸ್ಟ್‌ ಸರಣಿಗೆ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ. ಪಂತ್‌ಗೆ ಕನಿಷ್ಠ ಎರಡು, ಗರಿಷ್ಠ ಆರು ತಿಂಗಳ ವಿಶ್ರಾಂತಿ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ 16ನೇ ಆವೃತ್ತಿಯ ಐಪಿಎಲ್‌ನಿಂದಲೂ ಅವರು ಹೊರಗುಳಿಯಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಡೇವಿಡ್ ವಾರ್ನರ್ ನಾಯಕ?

ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿರುವ ರಿಷಭ್‌ ಪಂತ್‌ ಚೇತರಿಸಿಕೊಂಡು ಕ್ರಿಕೆಟ್‌ಗೆ ಮರಳಲು ಕನಿಷ್ಠ 6 ತಿಂಗಳ ಸಮಯ ಬೇಕಿದೆ ಎಂದು ವೈದ್ಯರು ತಿಳಿಸಿದ್ದು, ಅವರ ಅನುಪಸ್ಥಿತಿಯಲ್ಲಿ 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಡೇವಿಡ್‌ ವಾರ್ನರ್‌ ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಮುಂಬರುವ ದಿನಗಳಲ್ಲಿ ಡೆಲ್ಲಿ ತಂಡದ ಮಾಲಿಕರು ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಕಳೆದ ಡಿ.30ರಂದು ದೆಹಲಿಯಲ್ಲಿ ತಮ್ಮ ನಿವಾಸಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಮುಂಜಾನೆ ದೆಹಲಿ-ಡೆಹರಾಡೂನ್‌ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿತ್ತು. ಬಳಿಕ ಕಾರಿಗೆ ಬೆಂಕಿ ಹೊತ್ತಿಕೊಂಡರೂ ಅದಕ್ಕೂ ಮೊದಲೇ ಪಂತ್‌ ಕಾರಿನಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದರು.