ಅತ್ಯುತ್ತಮ ಸಂದೇಶದೊಂದಿಗೆ ನಡೆದಾಡುವ ಫೋಟೋ ಹಂಚಿಕೊಂಡ ರಿಷಭ್ ಪಂತ್
ಅಪಘಾತದ ಬಳಿಕ ಮೊದಲ ಬಾರಿಗೆ ನಡೆದಾಡಲು ಆರಂಭಿಸಿದ ರಿಷಭ್ ಪಂತ್
ಎದ್ದು ನಡೆದಾಡಲು ಶುರು ಮಾಡಿದ ರಿಷಭ್ ಪಂತ್ ಫೋಟೋ ವೈರಲ್
ಕಳೆದ ಡಿಸೆಂಬರ್ 30ರ ಮುಂಜಾನೆ ರಸ್ತೆ ಅಪಘಾತಕ್ಕೊಳಗಾಗಿದ್ದ ಪಂತ್ ಅವರಿದ್ದ ಕಾರು
ಮುಂಬೈ(ಫೆ.11): ಇತ್ತೀಚೆಗಷ್ಟೇ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದ ಕ್ರಿಕೆಟಿಗ ರಿಷಭ್ ಪಂತ್ ಚೇತರಿಸಿಕೊಳ್ಳುತ್ತಿದ್ದು, ಎದ್ದು ನಡೆದಾಡಲು ಆರಂಭಿಸಿದ್ದಾರೆ. ತಾವು ವಾಕರ್ ಸಹಾಯದೊಂದಿಗೆ ಹೆಜ್ಜೆ ಇಡುತ್ತಿರುವ 2 ಫೋಟೋಗಳನ್ನು ಶುಕ್ರವಾರ ತಮ್ಮ ಟ್ವಿಟರ್ ಖಾತೆಯಲ್ಲಿ ರಿಷಭ್ ಹಂಚಿಕೊಂಡಿದ್ದಾರೆ. ಅವರಿನ್ನೂ ಕೆಲ ದಿನ ಆಸ್ಪತ್ರೆಯಲ್ಲೇ ಇರಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಅಪಘಾತವಾಗಿ ಬರೋಬ್ಬರಿ 40 ದಿನಗಳ ಬಳಿಕ ಮೊದಲ ಬಾರಿಗೆ ತನ್ನ ಕಾಲಿನ ಮೇಲೆ ನಿಂತು ನಡೆಯುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಕಳೆದ ತಿಂಗಳಷ್ಟೇ ಮೊಣಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ರಿಷಭ್ ಪಂತ್, ಮುಂಬರುವ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದಷ್ಟೇ ಅಲ್ಲದೇ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಿಂದಲೂ ಹೊರಗುಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ: ಇಂಡೋ-ಆಸೀಸ್ ಟೆಸ್ಟ್ ಸರಣಿಗೆ ಯಾಕಿಷ್ಟು ಮಹತ್ವ ಗೊತ್ತಾ..? ಇಲ್ಲಿವೆ 6 ಕಾರಣ
ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಡಿಸೆಂಬರ್ 29ರ ರಾತ್ರಿ ಗುರುವಾರ ತಮ್ಮ ಮರ್ಸಿಡೀಸ್ ಕಾರನ್ನು ತಾವೇ ಚಾಲನೆ ಮಾಡುತ್ತಾ ದೆಹಲಿಯಿಂದ ಉತ್ತರಾಖಂಡದ ರೂರ್ಕೀ ಎಂಬಲ್ಲಿರುವ ತಮ್ಮ ನಿವಾಸಕ್ಕೆ ಹೊರಟಿದ್ದ ಸಂದರ್ಭದಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಹೊಸ ವರ್ಷವನ್ನು ತಾಯಿಯ ಜೊತೆ ಆಚರಿಸಲು, ಅವರಿಗೆ ಅಚ್ಚರಿ ನೀಡಲು ತೆರಳುತ್ತಿದ್ದ ಸಂದರ್ಭದಲ್ಲಿ, ಬೆಳಗ್ಗಿನ ಜಾವ 5.30ರ ಸುಮಾರಿಗೆ ಮೊಹಮದ್‌ಪುರ ಎಂಬಲ್ಲಿ ಅಪಘಾತ ಸಂಭವಿಸಿದೆ. ಕ್ಷಣಾರ್ಧದಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿತ್ತು. ಈ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಬಸ್ ಚಾಲಕ ಹಾಗೂ ಕಂಡಕ್ಟರ್, ರಸ್ತೆಯ ಪಕ್ಕದಲ್ಲೇ ರಿಷಭ್‌ರನ್ನು ಮಲಗಿಸಿ ತಮ್ಮ ಹೊದಿಕೆಯನ್ನು ಅವರ ಮೈ ಮೇಲೆ ಹಾಕಿ, ಬಳಿಕ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ನೆರವಾಗಿದ್ದರು. ಮೊದಲಿಗೆ ರೂರ್ಕೀಯ ಸಕ್ಷಮ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಡೆಹರಾಡೂನ್‌ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಡೆಹರಾಡೂನ್ ಬಳಿಕ ಇದೀಗ ರಿಷಭ್ ಪಂತ್ ಅವರನ್ನು ಮುಂಬೈಗೆ ಶಿಫ್ಟ್ ಮಾಡಲಾಗಿದ್ದು, ಅಲ್ಲಿ ಪಂತ್‌ಗೆ ಅಸ್ತಿಬಂಧಕ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿದೆ. ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಇದೀಗ ಟ್ವೀಟ್ ಮಾಡಿರುವ ರಿಷಭ್ ಪಂತ್, 'ಒಂದು ಹೆಜ್ಜೆ ಮುನ್ನಡೆಯತ್ತ, ಒಂದು ಹೆಜ್ಜೆ ದೃಢತೆಯತ್ತ ಹಾಗೂ ಒಂದು ಹೆಜ್ಜೆ ಉತ್ತಮದೆಡೆಗೆ' ಎಂದು ತಾವು ವಾಕರ್ ಸಹಾಯದಿಂದ ನಡೆಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.