ಬಾರ್ಡರ್-ಗವಾಸ್ಕರ್ ಟ್ರೋಫಿ: ಇಂಡೋ-ಆಸೀಸ್ ಟೆಸ್ಟ್ ಸರಣಿಗೆ ಯಾಕಿಷ್ಟು ಮಹತ್ವ ಗೊತ್ತಾ..? ಇಲ್ಲಿವೆ 6 ಕಾರಣ
ನಾಗ್ಪುರ(ಫೆ.09): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಇಂದಿನಿಂದ ಆರಂಭವಾಗಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಯಾಕಿಷ್ಟು ಮಹತ್ವ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿವೆ ನೋಡಿ ಉತ್ತರ.
1. ಹನ್ನೊಂದು ತಿಂಗಳುಗಳ ಬಳಿಕೆ ಭಾರತದಲ್ಲಿ ಟೆಸ್ಟ್ ಕ್ರಿಕೆಟ್ ಆಗಮನ:
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಮೂಲಕ ಭಾರತಕ್ಕೆ ಟೆಸ್ಟ್ ಕ್ರಿಕೆಟ್ ಎಂಟ್ರಿ ಕೊಟ್ಟಿದೆ. ಭಾರತ ತಂಡವು 2022ರ ಮಾರ್ಚ್‌ನಲ್ಲಿ ಕೊನೆಯ ಬಾರಿಗೆ ತವರಿನಲ್ಲಿ ಶ್ರೀಲಂಕಾ ಎದುರು ಟೆಸ್ಟ್ ಸರಣಿಯನ್ನಾಡಿತ್ತು. ಈ ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿತ್ತು. ಇದಾದ ಬಳಿಕ ತವರಿನಾಚೆ ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ಎದುರು ಟೆಸ್ಟ್ ಸರಣಿಯನ್ನಾಡಿತ್ತು.
2. 2017ರ ಬಳಿಕ ಟೆಸ್ಟ್ ಆಡಲು ಭಾರತಕ್ಕೆ ಬಂದಿದೆ ಆಸ್ಟ್ರೇಲಿಯಾ:
ಟೆಸ್ಟ್ ನಂ.1 ತಂಡವಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಬರೋಬ್ಬರಿ 2017ರ ಬಳಿಕ ಮೊದಲ ಬಾರಿಗೆ ಟೆಸ್ಟ್ ಸರಣಿಯನ್ನಾಡಲು ಭಾರತಕ್ಕೆ ಬಂದಿಳಿದೆ. 4 ಪಂದ್ಯಗಳ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ.
ಫೆಬ್ರವರಿ 9-12: ಮೊದಲ ಟೆಸ್ಟ್- ನಾಗ್ಪುರ
ಫೆಬ್ರವರಿ 17-21: ಎರಡನೇ ಟೆಸ್ಟ್- ಡೆಲ್ಲಿ
ಮಾರ್ಚ್ 01-05: ಮೂರನೇ ಟೆಸ್ಟ್ - ಧರ್ಮಶಾಲಾ
ಮಾರ್ಚ್ 09-13: ನಾಲ್ಕನೇ ಟೆಸ್ಟ್ - ಅಹಮದಾಬಾದ್
3. ಉಭಯ ತಂಡಗಳಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಲು ಮಹತ್ವದ ಸರಣಿ
ಸದ್ಯ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿದ್ದು, ಈ ಸರಣಿ ಉಭಯ ತಂಡಗಳ ಫೈನಲ್ ರೇಸ್ ನಿರ್ಧರಿಸಲಿದೆ.
4. ಟೆಸ್ಟ್‌ಗೆ ಕಮ್‌ಬ್ಯಾಕ್ ಮಾಡಿರುವ ರವೀಂದ್ರ ಜಡೇಜಾ:
ಟೀಂ ಇಂಡಿಯಾ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ, ಟೀಂ ಇಂಡಿಯಾ ಕೂಡಿಕೊಂಡಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಗಾಯದ ಸಮಸ್ಯೆಯಿಂದ 5 ತಿಂಗಳುಗಳಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದ ಜಡ್ಡು, ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಬಲ ಹೆಚ್ಚಿಸಿದ್ದಾರೆ.
5. ನೇಥನ್ ಲಯನ್ ಭೀತಿಯಲ್ಲಿ ಟೀಂ ಇಂಡಿಯಾ:
ಭಾರತದಂತೆ ಆಸ್ಟ್ರೇಲಿಯಾ ಕೂಡಾ ಅನುಭವಿ ಆಫ್‌ಸ್ಪಿನ್ನರ್ ನೇಥನ್ ಲಯನ್ ಅವರನ್ನು ಹೊಂದಿದೆ. ನೇಥನ್ ಲಯನ್, ಕಳೆದ ಬಾರಿ ಭಾರತದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 19 ವಿಕೆಟ್ ಗಳಿಸುವ ಮೂಲಕ, ಟೆಸ್ಟ್ ಸರಣಿಯಲ್ಲಿ ಜಂಟಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು. ಭಾರತದಲ್ಲಿ 7 ಪಂದ್ಯಗಳನ್ನಾಡಿ ಲಯನ್ 34 ವಿಕೆಟ್ ಕಬಳಿಸಿದ್ದರು.
6. ತವರಿನಲ್ಲಿ ಮತ್ತೊಮ್ಮೆ ಅಬ್ಬರಿಸುವ ನಿರೀಕ್ಷೆಯಲ್ಲಿ ರೋಹಿತ್ ಶರ್ಮಾ:
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಟೆಸ್ಟ್ ಕ್ರಿಕೆಟ್‌ನಲ್ಲಿ ತವರಿನಲ್ಲಿ ಅತ್ಯದ್ಭುತ ಲಯವನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ, ತವರಿನಲ್ಲಿ 20 ಟೆಸ್ಟ್ ಪಂದ್ಯಗಳನ್ನಾಡಿ 73.33ರ ಬ್ಯಾಟಿಂಗ್ ಸರಾಸರಿಯಲ್ಲಿ 1,760 ರನ್ ಬಾರಿಸಿದ್ದು, ಮತ್ತೆ ಹಿಟ್‌ಮ್ಯಾನ್ ತವರಿನಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ.